Site icon Vistara News

PM Narendra Modi: ಮೋದಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಕತಾರ್‌ನಿಂದ ಬಿಡುಗಡೆಗೊಂಡ ನೌಕಾಯೋಧರ ಪ್ರಶಂಸೆ

narendra modi qatar king

ಹೊಸದಿಲ್ಲಿ: “ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಕತಾರ್‌ (Qatar Jail) ಜೈಲಿನಿಂದ ಬಿಡುಗಡೆಯಾಗಿ ದೇಶಕ್ಕೆ ಮರಳಿರುವ ಭಾರತೀಯ ನೌಕಾಯೋಧರು (Indian Navy veterans) ಹೇಳಿದ್ದು, ಪ್ರಧಾನಿಗೆ ಕೃತಜ್ಞತೆ ಹಾಗೂ ಪ್ರಶಂಸೆ ಅರ್ಪಿಸಿದ್ದಾರೆ.

ಬೇಹುಗಾರಿಕೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿ ಒಂದು ವರ್ಷದಿಂದ ಕತಾರ್‌ ಜೈಲಿನಲ್ಲಿದ್ದ ಎಂಟು ಮಂದಿ ಯೋಧರು ಪ್ರಧಾನಿ ನರೇಂದ್ರ ಮೋದಿ ಅವರ ಸಕಾಲಿಕ ಮಧ್ಯಪ್ರವೇಶ, ಕತಾರ್‌ ಆಡಳಿತದ ಜೊತೆಗೆ ಪ್ರಧಾನಿ ಹೊಂದಿರುವ ಹಾರ್ದಿಕ ಸಂಬಂಧ ಹಾಗೂ ಭಾರತದ ರಾಜತಾಂತ್ರಿಕ ಜಾಣ್ಮೆಯ ಪರಿಣಾಮ ಬಿಡುಗಡೆಗೊಂಡಿದ್ದಾರೆ. ದೇಶಕ್ಕೆ ಮರಳಿದ ಏಳು ಮಂದಿ ದೆಹಲಿ ವಿಮಾನ ನಿಲ್ದಾಣದಿಂದ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಹೊರನಡೆದರು.

ಕಳೆದ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ COP28 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕತಾರ್‌ನ ಆಡಳಿತಗಾರ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಭೇಟಿಯಾಗಿ ಭಾರತೀಯ ಸಮುದಾಯದ ಯೋಗಕ್ಷೇಮದ ಬಗ್ಗೆ ಚರ್ಚಿಸಿದ್ದರು.

“ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ ಎಂದು ನಮಗೆ ತುಂಬಾ ಸಂತೋಷವಾಗಿದೆ. ಖಂಡಿತವಾಗಿಯೂ, ನಾವು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಏಕೆಂದರೆ ಇದು ಅವರ ವೈಯಕ್ತಿಕ ಹಸ್ತಕ್ಷೇಪದಿಂದ ಮಾತ್ರ ಸಾಧ್ಯವಾಯಿತು” ಎಂದು ಅವರಲ್ಲಿ ಒಬ್ಬರು ಹೇಳಿದರು. “ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲದೆ ನಾವು ಇಲ್ಲಿಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ ಇದು ಸಂಭವಿಸಿದೆ” ಎಂದು ಮತ್ತೊಬ್ಬ ಹಿರಿಯ ಯೋಧ ಹೇಳಿದರು.

“ನಾವು ಭಾರತಕ್ಕೆ ಹಿಂತಿರುಗಲು ಸುಮಾರು 18 ತಿಂಗಳುಗಳಿಂದ ಕಾಯುತ್ತಿದ್ದೆವು. ನಾವು ಪ್ರಧಾನಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಹಾರ್ದಿಕ ಸಂಬಂಧವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ನಾವು ಭಾರತ ಸರ್ಕಾರಕ್ಕೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರು ಮಾಡಿದ ಪ್ರತಿಯೊಂದು ಪ್ರಯತ್ನಕ್ಕಾಗಿ ನಮ್ಮ ಹೃದಯಪೂ‌ರ್ವಕ ಧನ್ಯವಾದಗಳು” ಎಂದು ಅವರು ಹೇಳಿದರು.

ಯೋಧರು ತಮ್ಮ ಮನೆಗೆ ಮರಳಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಕತಾರ್‌ನ ಅಮೀರ್‌ಗೆ ಭಾರತ ಸರ್ಕಾರ ಧನ್ಯವಾದಗಳನ್ನು ಅರ್ಪಿಸಿದ್ದು, ಇಂದು ಬೆಳಿಗ್ಗೆ ಯೋಧರ ಬಿಡುಗಡೆಯ ವಿಚಾರ ಘೋಷಿಸಿತು. “ಕತಾರ್‌ನಲ್ಲಿ ಬಂಧಿತರಾಗಿದ್ದ, ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು.

ಇವರೆಲ್ಲ ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್‌ನಲ್ಲಿ ಉದ್ಯೋಗಿಗಳಾಗಿದ್ದರು. ಕತಾರ್‌ನಲ್ಲಿ ಕತಾರಿ ಎಮಿರಿ ನೇವಲ್ ಫೋರ್ಸ್‌ಗೆ ಇಟಾಲಿಯನ್ U212 ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳನ್ನು ಅಳವಡಿಸುವ ಕಾರ್ಯದಲ್ಲಿ ಇವರು ತೊಡಗಿದ್ದರು. ಕತಾರ್ ನ್ಯಾಯಾಲಯ ಅಕ್ಟೋಬರ್ 26, 2023ರಂದು ಇವರಿಗೆ ಮರಣದಂಡನೆ ವಿಧಿಸಿತ್ತು.

ಇದನ್ನೂ ಓದಿ: Indian Diplomacy: ಕತಾರ್‌ನಲ್ಲಿ ಮರಣದಂಡನೆಗೊಳಗಾಗಿದ್ದ 8 ನೌಕಾಯೋಧರ ಬಿಡುಗಡೆ‌‌, ಭಾರತ ತಲುಪಿದ 7 ಯೋಧರು

Exit mobile version