Site icon Vistara News

ವಿಸ್ತಾರ ಸಂಪಾದಕೀಯ: ಸಿಎಪಿಎಫ್‌ ಪರೀಕ್ಷೆ ಬರೆಯಲು ಕನ್ನಡದಲ್ಲಿ ಅವಕಾಶ ಸ್ವಾಗತಾರ್ಹ

opportunity-to-write-capf-exam-in-kannada-is-welcome

#image_title

ಕನ್ನಡದಲ್ಲಿಯೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯ ಪರೀಕ್ಷೆ ಬರೆಯಲು ಕರ್ನಾಟಕ ಸೇರಿ ದಕ್ಷಿಣ ಭಾರತದಾದ್ಯಂತ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಕನ್ನಡ ಸೇರಿ 15 ಸ್ಥಳೀಯ ಭಾಷೆಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (CAPF Exam In Kannada)ಯ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಸಿಎಪಿಎಫ್‌ ವ್ಯಾಪ್ತಿಗೆ ಬರುವ ಸಿಆರ್‌ಪಿಎಫ್‌, ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ದಳ, ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ITBP) ಸೇರಿ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಬಹುದಾಗಿದೆ. ಇದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಅನುಕೂಲವಾಗಲಿದ್ದು, ಕನ್ನಡ ಸೇರಿ 15 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೇಂದ್ರ ಸರ್ಕಾರದ ವಿರುದ್ಧ ಹಿಂದಿ ಹೇರಿಕೆಯ ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲಿಯೇ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅದು ಅನುಮತಿ ನೀಡಿರುವುದು ಮಹತ್ವದ ವಿಷಯ. ಇತ್ತೀಚೆಗೆ ಸೇನೆಯು ಸಿಆರ್‌ಪಿಎಫ್‌ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 9,212 ಹುದ್ದೆಗಳಲ್ಲಿ ರಾಜ್ಯದಲ್ಲಿನ 466 ಹುದ್ದೆಗಳು ಸೇರಿದ್ದವು. ಆದರೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದ್ದುದಕ್ಕೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ʼವಿಸ್ತಾರ ನ್ಯೂಸ್‌ʼ ಕೂಡ ಧ್ವನಿ ಎತ್ತಿತ್ತು. ಇದೀಗ ಸಕಾಲಿಕ ನಿರ್ಧಾರ ತೆಗೆದುಕೊಂಡಿರುವ ಕೇಂದ್ರದ ಕ್ರಮವನ್ನು ವಿಸ್ತಾರ ನ್ಯೂಸ್‌ ಶ್ಲಾಘಿಸುತ್ತದೆ.

ಇಂಥ ವಿಕೇಂದ್ರೀಕೃತ ಕ್ರಮಗಳಿಂದಲೇ ಒಕ್ಕೂಟ ವ್ಯವಸ್ಥೆಯೊಂದು ಗಟ್ಟಿಯಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ ಎಂಬ ಎರಡೇ ಭಾಷೆಗಳಲ್ಲಿ ಆಡಳಿತ ವ್ಯವಸ್ಥೆ ಅಥವಾ ನೇಮಕಾತಿ ಪರೀಕ್ಷಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿದಾಗ ಅದು ಕೆಲವೇ ಕೆಲವರಿಗೆ ಮಾತ್ರ ನೆರವಾಗುತ್ತದೆ. ಹೇಗೆ ಮೀಸಲಾತಿಯು ಸಮಾಜದ ತಳಮಟ್ಟದಲ್ಲಿ ಸಾಮಾಜಿಕ ನ್ಯಾಯವನ್ನು ಹಬ್ಬಿಸಲು ನೆರವಾಯಿತೋ, ಹಾಗೆಯೇ ಸ್ಥಳೀಯ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಎಂಬುದು ಕೂಡ ನೆರವಾಗಲಿದೆ. ಇದನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು. ಸೇನಾ ಪರೀಕ್ಷೆಗಳಿಗೆ ದೈಹಿಕ ಪರೀಕ್ಷೆಯೇ ಪ್ರಧಾನ ಎಂಬುದು ನಿಜವಾದರೂ, ಇತ್ತೀಚೆಗೆ ಲಿಖಿತ ಪರೀಕ್ಷೆಗಳು ಕೂಡ ಅಭ್ಯರ್ಥಿಯ ಗುಣಮಟ್ಟವನ್ನು ಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರೀಯ ಸಶಸ್ತ್ರ ಹಾಗೂ ಮೀಸಲು ಪೊಲೀಸ್‌ ಪಡೆಗಳು ಹಿಂದಿ ಬಲ್ಲ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತದೆ ಎಂದೇನೂ ಇಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಕಾರ್ಯಾಚರಿಸುತ್ತವೆ. ಸ್ಥಳೀಯ ಭಾಷೆಗಳನ್ನು ಎಲ್ಲರೂ ಕಲಿಯುವುದು ಅಗತ್ಯವಾಗುತ್ತದೆ. ಆದ್ದರಿಂದ ಹಿಂದಿ ವಲಯದ ರಾಜ್ಯಗಳ ಸೈನಿಕರು ಕೂಡ ದಕ್ಷಿಣ ರಾಜ್ಯಗಳಲ್ಲಿ ನೇಮಕವಾದರೆ ಅಲ್ಲಿನ ಭಾಷೆಗಳನ್ನು ಕಲಿಯುವುದು ಅನಿವಾರ್ಯ. ಮಲ್ಟಿನ್ಯಾಷನಲ್‌ ಕಂಪನಿಗಳು ಕೂಡ ಇಂದು ಸ್ಥಳೀಯ ಭಾಷಿಕರನ್ನು ಒಲಿಸಿಕೊಳ್ಳಲು ಆಯಾ ಭಾಷೆಯಲ್ಲಿ ಹೆಚ್ಚಿನ ಆದ್ಯತೆಯ ವಹಿವಾಟನ್ನು ನಡೆಸುತ್ತಿವೆ. ಹೀಗೆ ಪ್ರಾದೇಶಿಕ ಭಾಷೆಗಳು ಕೂಡ ಇಂದು ವಿಶ್ವಾತ್ಮಕವಾಗುತ್ತಿವೆ. ಇಂಥ ಹೊತ್ತಿನಲ್ಲಿ ಕೇಂದ್ರೀಯ ನೇಮಕಾತಿಯೇ ಆದರೂ ಪ್ರಾದೇಶಿಕ ಭಾಷೆಗಳಲ್ಲಿ ಸಿಗುವಂತಾಗಿರುವುದು ಸ್ವಾಗತಾರ್ಹ.

ಸಂಪಾದಕೀಯ: ವಿಸ್ತಾರ ಸಂಪಾದಕೀಯ: ಭಟಿಂಡಾ ಸೇನಾ ನೆಲೆ ಮೇಲೆ ದಾಳಿ, ಇದು ಅಪಾಯದ ಕರೆಗಂಟೆ

ಇದು ಬಹು ಸುಲಭವಾಗಿ ದಕ್ಕಿಲ್ಲ. ಇದಕ್ಕಾಗಿ ವರ್ಷಗಟ್ಟಲೆಯ ಬೇಡಿಕೆ, ಹೋರಾಟ ಎಲ್ಲ ನಡೆದಿದೆ. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರು. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ. ಆದರೆ ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದರೆ, ಉತ್ತರ ಭಾರತದಲ್ಲಿ ದಕ್ಷಿಣ ಭಾರತೀಯರು ಹುಡುಕಿದರೂ ಕಾಣಸಿಗುವುದಿಲ್ಲ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚಲು ಇದು ಕಾರಣವಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರ ನೇಮಕದ ಪ್ರಮಾಣ ತೀರಾ ಕಡಿಮೆ. ಇನ್ನು ಯು ಪಿ ಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ಲ್ಲಿಯೇ ಬರೆಯಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೂಡ ಗಮನ ಹರಿಸಿ ಈ ತಾರತಮ್ಯವನ್ನು ಆದಷ್ಟು ಬೇಗ ಸರಿಪಡಿಸಬೇಕು.

Exit mobile version