Site icon Vistara News

Pakistan Slogan: ಪಾಕ್‌ ಜಿಂದಾಬಾದ್‌ ಘೋಷಣೆ: ಬಿಜೆಪಿ ಕೋಲಾಹಲ; ಸ್ಪೀಕರ್‌, ಗೃಹ ಸಚಿವರು ಏನೆಂದರು?

naseer hussain

ಬೆಂಗಳೂರು: ರಾಜ್ಯಸಭೆಗೆ (Rajya Sabha Election) ಆಯ್ಕೆಯಾದ ನಾಸಿರ್‌ ಹುಸೇನ್‌ (Naseer Hussain) ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ (Pakistan Slogan, Pakistan Zindabad, Sedition case) ಕೂಗಿದ ವಿಚಾರವನ್ನು ರಾಜಕೀಯ ಬಿರುಗಾಳಿ ಸೃಷ್ಟಿಸಲು ಬಿಜೆಪಿ (BJP) ಬಳಸಿಕೊಂಡಿದ್ದು, ಇಂದು ವಿಧಾನಮಂಡಲದ ಉಭಯ ಸಭೆಗಳಲ್ಲಿ ಕೋಲಾಹಲ ಸೃಷ್ಟಿಸಲು ಸಜ್ಜಾಗಿದೆ.

ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಶಾಸಕರ ಭವನದಿಂದ ವಿಧಾನಸಭೆಗೆ ರ್ಯಾಲಿ ಆಯೋಜಿಸಿದರು. ಶಾಸಕರ ಭವನದಿಂದ ವಿಧಾನಸೌಧದ ವರೆಗೂ ಬಿಜೆಪಿ ಶಾಸಕರ ಪ್ರತಿಭಟನಾ ರ್ಯಾಲಿ ಇಂದು ಬೆಳಗ್ಗೆ ನಡೆದಿದೆ. ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ ಶಾಸಕರು ತ್ರಿವರ್ಣ ಧ್ವಜ ಹಿಡಿದು ವಿಧಾನಸೌಧ ಪ್ರವೇಶಿಸಿದರು. ಬಳಿಕ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಿರುವ ಬಿಜೆಪಿ ಶಾಸಕರು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಸರ್ಕಾರ ಹಾಗೂ ನಾಸಿರ್ ಹುಸೇನ್ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಬಳಿಕ ರಾಜಭವನಕ್ಕೆ ತೆರಳಿ ದೂರು ನೀಡಲಿದ್ದಾರೆ.

ಖಂಡಿಸುತ್ತೇನೆ: ಸ್ಪೀಕರ್‌

“ನಿನ್ನೆ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ಈ ಘಟನೆ ನಡೆದ ಬಗ್ಗೆ ಮಾಧ್ಯಮದಲ್ಲಿ ಬಂದಿದೆ. ಅದು ನಿಜವಾಗಿದ್ದಲ್ಲಿ ತೀವ್ರವಾಗಿ ಖಂಡಿಸುತ್ತೇವೆ. ಹಾಗೆ ಕೂಗಿದವರ ಪತ್ತೆ ಹಚ್ಚಿ ಕ್ರಮ ಕೈಗೊಳ್ತೇವೆ. ನನ್ನ ವ್ಯಾಪ್ತಿಗೆ ಬರೋದು ಸದನದ ಒಳಗೆ ಮಾತ್ರ. ಹೊರಗೆ ಗೃಹಸಚಿವರಿಗೆ ಬರಲಿದೆ. ಅವರಿಗೆ ಸೂಚಿಸ್ತೇನೆ. ಈ ಬಗ್ಗೆ ಗೊಂದಲವನ್ನು ಬಗೆಹರಿಸಬೇಕು” ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ ಖಾದರ್‌ (UT Khader) ಹೇಳಿದ್ದಾರೆ.

ಎಫ್‌ಎಸ್‌ಎಲ್‌ಗೆ ಕಳಿಸುತ್ತೇವೆ: ಪರಮೇಶ್ವರ್

“ಈ ಬಗ್ಗೆ ಸುಮೋಟೋ ಕೇಸ್‌ ದಾಖಲಿಸಲಾಗಿದ್ದು, ವಿವರವಾದ ತನಿಖೆ ನಡೆಸಲಾಗುವುದು” ಎಂದು ಗೃಹಸಚಿವ ಪರಮೇಶ್ವರ್ (Home Minister Parameshwar) ಹೇಳಿಕೆ ನೀಡಿದ್ದಾರೆ. “ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಅದರ ವಿಡಿಯೋ ಕ್ಲಿಪಿಂಗ್ ಸೆಕ್ಯುರ್ ಮಾಡುತ್ತಿದ್ದೇವೆ. ಅಧಿಕೃತವಾಗಿ ಟೆಲಿಕಾಸ್ಟ್ ಆಗಿರುವ ಕ್ಲಿಪಿಂಗ್ ಪಡೆದು ತನಿಖೆಗೆ ಒಳಪಡಿಸುತ್ತೇವೆ. ಈಗಾಗಲೇ ಸುಮೋಟೋ ಕೇಸ್ ದಾಖಲಾಗಿದ್ದು, ಬಿಜೆಪಿ ಕೊಟ್ಟಿರೋ ದೂರನ್ನು ಅದಕ್ಕೆ ಸೇರಿಸಿದ್ದೇವೆ. ಯಾರು ಮೊದಲು ಟೆಲಿಕಾಸ್ಟ್ ಮಾಡಿದ್ದಾರೆ ಅವರ ವಿಡಿಯೋ ಪಡೆದು ತನಿಖೆ ಮಾಡುತ್ತೇವೆ” ಎಂದಿದ್ದಾರೆ.

“ವಿಡಿಯೋ ಎಫ್‌ಎಎಸ್‌ಎಲ್‌ಗೆ ಕಳುಹಿಸುವ ಪ್ರಕಿಯೆಗಳು ಆರಂಭವಾಗಿವೆ. ಹಾಗೆ ಕೂಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಮಾಡಿರುವ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮರಾ ಎಲ್ಲವನ್ನು ಪಡೆದು ತನಿಖೆ ಮಾಡುತ್ತೇವೆ. ಕೆಲವರು ʼನಾಸಿರ್ ಸಾಬ್ʼ ಅಂತಾರೆ, ಕೆಲವರು ʼಪಾಕಿಸ್ತಾನ್‌ʼ ಅಂತಾರೆ. ಇದರ ಸತ್ಯತೆ ವೈಜ್ಞಾನಿಕವಾಗಿ ತಿಳಿಯಬೇಕು ಎಂದು ಎಫ್ಎಸ್‌ಎಲ್‌ಗೆ ಕಳುಹಿಸುತ್ತಿದ್ದೇವೆ” ಎಂದಿದ್ದಾರೆ.

ಸಚಿವ ಪ್ರಿಯಾಂಕ್ ‌ಖರ್ಗೆ (Priyank Kharge) ಈ ಬಗ್ಗೆ ಮಾತನಾಡಿ, “ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಮಾಧ್ಯಮ ಸ್ನೇಹಿತರೇ ಕೆಲವರು ಆ ರೀತಿ‌ ಕೂಗಿಲ್ಲ ಎಂದು ಬರೆದುಕೊಂಡಿದ್ದಾರೆ. ನಮಗೂ ಜವಾಬ್ದಾರಿಯಿದೆ. ಆ ರೀತಿ ಕೂಗಿದ್ದು ಎಲ್ಲಿದೆ ಎಂದು ತೋರಿಸಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sedition Case: ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಎಂದ ದೇಶದ್ರೋಹಿಗಳನ್ನು ಬಿಡಲ್ಲ: ಡಾ. ಜಿ. ಪರಮೇಶ್ವರ್‌

Exit mobile version