ಇಸ್ಲಾಮಾಬಾದ್: ಪ್ರವಾದಿ ಮೊಹಮ್ಮದ್ (Prophet Muhammad) ಬಗ್ಗೆ ಅವಹೇಳನಕಾರಿಯಾಗಿ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ, ಆಡಿಯೊ ಹಾಗೂ ಮೆಸೇಜ್‌ಗಳನ್ನು ರವಾನಿಸಿ, ಧರ್ಮನಿಂದನೆ (Blasphemy) ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ 22 ವರ್ಷದ ವಿದ್ಯಾರ್ಥಿಗೆ ಗಲ್ಲು ಶಿಕ್ಷೆ (Death Sentence) ವಿಧಿಸಲಾಗಿದೆ. ಮತ್ತೊಬ್ಬ 17 ವರ್ಷದ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ (Life Sentence) ವಿಧಿಸಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯವೊಂದು ಧರ್ಮನಿಂದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇವರಿಬ್ಬರೂ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಎನ್ನಲಾಗಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.
ಇಬ್ಬರೂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದ್ ಹಾಗೂ ಅವರ ಪತ್ನಿಯರ ಬಗ್ಗೆ ಅವಹೇಳನಕಾರಿಯಾಗಿರುವ ವಿಡಿಯೊ, ಫೋಟೊ ಹಾಗೂ ಮೆಸೇಜ್‌ಗಳನ್ನು ಬೇರೆ ಬೇರೆ ಮೊಬೈಲ್ ನಂಬರ್‌ಗಳ ಮೂಲಕ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದರು. ಇವರ ಕೃತ್ಯದ ಕುರಿತು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (FIA) ಸೈಬರ್ ಕ್ರೈಮ್ ಘಟಕವು ಪ್ರಕರಣ ದಾಖಲಿಸಿಕೊಂಡಿತ್ತು. ಈಗ ಗುಜ್ರನ್‌ವಾಲಾ ನ್ಯಾಯಾಲಯವು, “ಇಬ್ಬರು ವಿದ್ಯಾರ್ಥಿಗಳು ಎಸಗಿದ ಕೃತ್ಯದಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ, ಒಬ್ಬನಿಗೆ ಗಲ್ಲು, ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ” ಎಂದು ತಿಳಿಸಿದೆ.
ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲರು, “ಇಬ್ಬರ ವಿರುದ್ಧವೂ ಸುಳ್ಳು ಪ್ರಕರಣ ದಾಖಲಿಸಲಾಗಿದೆ” ಎಂಬುದಾಗಿ ವಾದ ಮಂಡಿಸಿದರು. ಆದರೆ, ಇವರ ವಾದವನ್ನು ನ್ಯಾಯಾಲಯವು ಮನ್ನಿಸಲಿಲ್ಲ. ಇವರು ರವಾನಿಸಿದ ಸಂದೇಶಗಳ ಕುರಿತು ಎಫ್‌ಐಎ ದಾಖಲೆ ಒದಗಿಸಿತ್ತು ಎಂದು ತಿಳಿದುಬಂದಿದೆ. ಇನ್ನು, ಇಬ್ಬರ ವಿದ್ಯಾರ್ಥಿಗಳ ಹೆಸರು ಕೂಡ ಲಭ್ಯವಾಗಿಲ್ಲ. ಮರಣ ದಂಡನೆಗೆ ಗುರಿಯಾಗಿರುವ ವಿದ್ಯಾರ್ಥಿಯ ತಂದೆಯು, ಗುಜ್ರನ್‌ವಾಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಲಾಹೋರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಂಡಕ್ಟರ್‌ಗೆ ಚಾಕು ಇರಿದು ‘ಪ್ರವಾದಿ ಮೊಹಮ್ಮದ್’ಗೆ ಅವಮಾನ ಎಂದ ಮುಸ್ಲಿಂ ಯುವಕನಿಗೆ ಗುಂಡೇಟು!
ಪಾಕಿಸ್ತಾನದಲ್ಲಿ ಧರ್ಮನಿಂದನೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನಿದೆ. ಆದರೆ, ಈ ದೇಶದಲ್ಲಿ ಇದುವರೆಗೆ ಧರ್ಮನಿಂದನೆ ಪ್ರಕರಣದಲ್ಲಿ ಯಾರನ್ನೂ ಗಲ್ಲಿಗೇರಿಸಿಲ್ಲ. ಧರ್ಮದ ಕುರಿತು ಯಾರಾದರೂ ಮಾತನಾಡಿದರೆ, ಜನರೇ ಅವರನ್ನು ಕೊಂದು ಹಾಕುವ, ಸಾಮೂಹಿಕವಾಗಿ ದಾಳಿ ಮಾಡುವ ಚಾಳಿ ಇದೆ. 2023ರ ಆಗಸ್ಟ್‌ನಲ್ಲಿ ಕುರಾನ್‌ಗೆ ಅವಮಾನ ಮಾಡಿದರು ಎಂದು ಕ್ರಿಶ್ಚಿಯನ್ನರ 80 ಮನೆಗಳು ಹಾಗೂ 19 ಚರ್ಚ್‌ಗಳನ್ನು ಧ್ವಂಸ ಮಾಡಿದ್ದರು. ಆಸಿಯಾ ಬೀಬಿ ಎಂಬ ಕ್ರಿಶ್ಚಿಯನ್ ಮಹಿಳೆಗೂ ಇಂತಹದ್ದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಆಕೆ ಪಾಕಿಸ್ತಾನ ಬಿಟ್ಟು ಪರಾರಿಯಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ