ಕರಾಚಿ: ಪಾಕಿಸ್ತಾನದ (Pakistan) ಎರಡನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ (naval air station) ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ಮೇಲೆ ಬಲೂಚಿ ಸೇನಾಪಡೆಗಳು (Baloochistan forces) ಸೋಮವಾರ ದಾಳಿ ನಡೆಸಿವೆ.
ಪಾಕಿಸ್ತಾನದಲ್ಲಿ ನಿಷೇಧಿತವಾಗಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ)ಯ ಮಜೀದ್ ಬ್ರಿಗೇಡ್, ಟರ್ಬತ್‌ನಲ್ಲಿರುವ ನೌಕಾ ವಾಯುನೆಲೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಮಜೀದ್ ಬ್ರಿಗೇಡ್ ಸಂಘಟನೆಯು ಬಲೂಚಿಸ್ತಾನದಲ್ಲಿ ಚೀನಾದ ಹಸ್ತಕ್ಷೇಪವನ್ನು ವಿರೋಧಿಸುತ್ತ ಬಂದಿದೆ. ಚೀನಾ ಮತ್ತು ಪಾಕಿಸ್ತಾನ ಎರಡೂ ಈ ಪ್ರದೇಶದ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದೆ. ತನ್ನ ಯೋಧರು ವಾಯುನೆಲೆಯೊಳಗೆ ನುಸುಳಿದ್ದಾರೆ ಎಂದು BLA ಹೇಳಿಕೊಂಡಿದೆ.
ವಾಯುನೆಲೆಯಲ್ಲಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಮೂರು ಗಂಟೆಗಳ ಕಾಲ ಮುಂದುವರಿದವು. ಟರ್ಬಟ್ ನಗರದ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯ ದೊಡ್ಡ ತುಕಡಿಯು ನೌಕಾ ವಾಯುನೆಲೆಗೆ ತೆರಳಿದೆ. ದಾಳಿಯಲ್ಲಿ “ಒಂದು ಡಜನ್‌ಗಿಂತಲೂ ಹೆಚ್ಚು” ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ BLA ಹೇಳಿಕೊಂಡಿದೆ. ಪಾಕ್ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.
ಟರ್ಬಟ್ ಬೋಧನಾ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ವೈದ್ಯರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸೂಚಿಸಿದ್ದಾರೆ. ಇದು ವಾರದಲ್ಲಿ ಎರಡನೇ ದಾಳಿ ಮತ್ತು ಈ ವರ್ಷದ ಮೂರನೇ ದಾಳಿ ಆಗಿದೆ.
ಈ ಹಿಂದೆ, ಜನವರಿ 29ರಂದು, ಮಾಕ್ ನಗರವನ್ನು ಗುರಿಯಾಗಿಸಿಕೊಂಡು BLA ದಾಳಿ ನಡೆಸಿತ್ತು. ಮಾರ್ಚ್ 20ರಂದು ಗ್ವಾದರ್‌ನಲ್ಲಿರುವ ಮಿಲಿಟರಿ ಗುಪ್ತಚರ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಗ್ವಾದರ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ, ಪಾಕಿಸ್ತಾನದ ಗ್ವಾದರ್ ಬಂದರು ಪ್ರಾಧಿಕಾರದ ಸಂಕೀರ್ಣದಲ್ಲಿ ಅನೇಕ ಸ್ಫೋಟಗಳು ಮತ್ತು ಗುಂಡಿನ ದಾಳಿಯ ಘರ್ಷಣೆಯಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ಎಂಟು ಭಯೋತ್ಪಾದಕರು ಕೊಲ್ಲಲ್ಪಟ್ಟರು.
ಚೀನಾದ ನಿಯಂತ್ರಣದಲ್ಲಿರುವ ಗ್ವಾದರ್ ಬಂದರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತು ಇದು ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ನ ನಿರ್ಣಾಯಕ ನೆಲೆಯಾಗಿದೆ.
ಪಾಕಿಸ್ತಾನದಲ್ಲಿ, ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನವೆಂಬರ್ 2022ರಿಂದ ಉಲ್ಬಣಗೊಂಡಿದೆ. ಅಲ್ಲಿಯವರೆಗೆ ಸರ್ಕಾರ ಮತ್ತು ನಿಷೇಧಿತ ಉಗ್ರಗಾಮಿ ಗುಂಪು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ನಡುವೆ ಕದನ ವಿರಾಮವಿತ್ತು.
ಇದನ್ನೂ ಓದಿ: Money Guide: ಸೈಬರ್ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ