ಕಳೆದ ಆರು ತಿಂಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಸತತವಾಗಿ ಇಳಿಕೆಯ ಹಾದಿಯಲ್ಲಿದೆ. ಭಾರತದ ಮಟ್ಟಿಗೆ ಇದೊಂದು ಶುಭ ಸುದ್ದಿಯೇ. ಯಾಕೆಂದರೆ, ನಮ್ಮ ದೇಶವು ಗರಿಷ್ಠ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ಹಣವನ್ನು ಇದಕ್ಕಾಗಿಯೇ ವಿನಿಯೋಗಿಸುತ್ತದೆ. ಅದರಿಂದಾಗಿ, ನಮ್ಮ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕಾಗುತ್ತಿರುವುದು ಸುಳ್ಳೇನಲ್ಲ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದಷ್ಟು ಭಾರತಕ್ಕೆ ಲಾಭದಾಯಕವೇ ಸರಿ. ಆದರೆ, ಹೀಗೆ ಇಳಿಕೆಯಾದ ಲಾಭವನ್ನು ಸರ್ಕಾರವು ಜನಸಾಮಾನ್ಯರಿಗೆ ದಾಟಿಸುವ ಪ್ರಯತ್ನ ಮಾಡುತ್ತಿದೆಯೇ ಎಂಬುದು ನಾವಿಲ್ಲಿ ಕೇಳಿಕೊಳ್ಳಬೇಕಾದ ಬಹುಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ದೊರೆತರೆ, ತೈಲ ದರ ಇಳಿಕೆಯ ಲಾಭ ಮತ್ತು ನಷ್ಟ ಸ್ಪಷ್ಟವಾಗಿ ತಿಳಿಯಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಳೆದ ಜನವರಿಯಿಂದ ಇಲ್ಲಿಯವರೆಗಿನ ಅವಧಿಯ ಕನಿಷ್ಠ ಮಟ್ಟದಲ್ಲಿದೆ. ಕಳೆದ ಹದಿನೈದು ದಿನಗಳಿಂದ ಪ್ರತಿ ಬ್ಯಾರೆಲ್‌ಗೆ 80.87 ಡಾಲರ್‌ನಿಂದ 85.55 ಡಾಲರ್ ನಡುವೆಯೇ ಇದೆ. ಇದಲ್ಲದೇ ಒಪೆಕ್ ಮತ್ತು ರಷ್ಯಾದಿಂದ ಮತ್ತೊಂದು ಸುತ್ತಿನ ತೈಲೋತ್ಪಾದನೆ ಹೆಚ್ಚಳ ವರದಿಗಳು ದರವನ್ನು ಮತ್ತಷ್ಟು ಇಳಿಸಿದೆ. ಕಳೆದ ಮಾರ್ಚ್‌ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 112 ಡಾಲರ್‌ಗಳ ಉನ್ನತ ಮಟ್ಟದಲ್ಲಿ ಇತ್ತು. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಏತನ್ಮಧ್ಯೆ, ಭಾರತವು ತನ್ನ ಅಗತ್ಯಕ್ಕೆ ಬೇಕಾದಷ್ಟು ತೈಲ ಖರೀದಿಯನ್ನು ರಷ್ಯಾ ಸೇರಿದಂತೆ ಜಗತ್ತಿನ 30 ರಾಷ್ಟ್ರಗಳಿಂದ ಮುಂದುವರಿಸಲಿದೆ. ಇದಕ್ಕೆ ಯಾವುದೇ ಅಂತಾರಾಷ್ಟ್ರೀಯ ಒತ್ತಡಗಳಿಲ್ಲ(ಉಕ್ರೇನ್-ರಷ್ಯಾ ಸಮರ ಹಿನ್ನೆಲೆಯಲ್ಲಿ). ಭಾರತವು ನಿತ್ಯ 50 ಲಕ್ಷ ಬ್ಯಾರೆಲ್ ಪೆಟ್ರೋಲಿಯಂ ವಿನಿಯೋಗಿಸುತ್ತದೆ. ಇದು, ಜಾಗತಿಕ ಸರಾಸರಿ ಬಳಕೆಗಿಂತಲೂ ಶೇ.2ರಷ್ಟು ಹೆಚ್ಚಾಗಿದೆ. ಅಂದರೆ, ನಾವು ಪ್ರಪಂಚದ ಇತರ ಎಲ್ಲ ರಾಷ್ಟ್ರಗಳಿಗಿಂತಲೂ ಗರಿಷ್ಠ ಪ್ರಮಾಣದಲ್ಲಿ ತೈಲ ಆಮದಿನ ಮೇಲೆ ಅವಲಂಬಿತವಾಗಿರುವುದನ್ನು ಇದು ತೋರಿಸುತ್ತಿದೆ. ಹಾಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಣ್ಣ ಕದಲಿಕೆಯು ನಮ್ಮ ದೇಶದ ಒಟ್ಟು ಆರ್ಥಿಕ ವ್ಯವಹಾರದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರವನ್ನು ಹೆಚ್ಚಿಸಲಾಗುತ್ತದೆ. ಆದರೆ, ಅದೇ ವೇಳೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕುಸಿದರೆ ಅಥವಾ ಇಳಿಕೆಯಾದರೆ, ಆ ಲಾಭವನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಹೋಗುವುದಿಲ್ಲ. ಇದಕ್ಕೆ ಸರ್ಕಾರಗಳು ಮತ್ತು ತೈಲ ಕಂಪನಿಗಳು ತಮ್ಮದೇ ಆದ ಸಮರ್ಥನೆಯನ್ನು ನೀಡುತ್ತವೆ. ಅದರಾಚೆಗೂ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಪ್ರಮಾಣದಲ್ಲಾದರೂ ತೈಲ ಇಳಿಕೆಯ ನೇರ ಲಾಭ ಜನಸಾಮಾನ್ಯರಿಗೆ ವರ್ಗಾಯಿಸಬೇಕು.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಅದರ ಪರಿಣಾಮವು ಸಾರಿಗೆ, ಹೋಟೆಲ್, ತರಕಾರಿ, ದಿನಸಿ, ಅಡುಗೆ ಅನಿಲ ಇತ್ಯಾದಿ ವಹಿವಾಟಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಿಮವಾಗಿ ಇದಕ್ಕೆ ಬೆಲೆ ತೆರಬೇಕಾಗುವುದು ಜನಸಾಮಾನ್ಯರು. ಅದೇ ರೀತಿ, ಬೆಲೆ ಇಳಿಕೆಯಾದರೆ, ಇದೇ ರೀತಿ ಸಕಾರಾತ್ಮಕ ಪರಿಣಾಮ ಬೀರಬಹುದು. ಆದರೆ, ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ತಕ್ಷಣ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಕಡಿಮೆ ಮಾಡಿದ ಉದಾಹರಣೆಗಳು ಕಡಿಮೆ.
ಬೆಲೆ ಏರಿಕೆ ಎನ್ನುವುದು ವರ್ಷದ 365 ದಿನಗಳ ಕಾಲವೂ ಜನ ಸಾಮಾನ್ಯರಿಗೆ ಬಾಧಿಸುವ ಸಂಗತಿಯೇ ಆಗಿದೆ. ಹಾಗಾಗಿ, ಅವರ ಸಂಕಷ್ಟಗಳನ್ನು ಅರಿತುಕೊಂಡ ಸರ್ಕಾರವು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಇಳಿಕೆಯ ಲಾಭವನ್ನು ನೇರವಾಗಿ ಜನರಿಗೆ ಆಗುವಂತೆ ವರ್ಗಾಯಿಸಬೇಕು. ಸದ್ಯಕ್ಕೆ, ದಿನ ನಿತ್ಯ ತೈಲ ದರ ಏರಿಕೆ ಆಗುತ್ತಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿದೆ. ಚುನಾವಣೆ ಸೇರಿದಂತೆ ಇನ್ನಿತರ ರಾಜಕೀಯ ಕಾರಣಗಳನ್ನು ಇದಕ್ಕೆ ನೀಡಬಹುದು. ಆದರೆ, ನಿತ್ಯ ಪರಿಷ್ಕರಣೆ ಯಾವುದೇ ಹಂತದಲ್ಲಿ ಮತ್ತೆ ಶುರುವಾಗಬಹುದು. ತಾನು ಜನಪರ ಎಂಬುದನ್ನು ತೋರಿಸಿಕೊಳ್ಳಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಅವಕಾಶವನ್ನು ಸರ್ಕಾರಕ್ಕೆ ಒದಗಿಸಿದೆ. ಈ ಅವಕಾಶವನ್ನು ಸರ್ಕಾರವು ಬಳಸಿಕೊಳ್ಳಬೇಕು. ಅದು ಬಿಟ್ಟು, ವಿಪರೀತ ಬೆಲೆ ಏರಿಕೆಯಾದಾಗ ಸಾರ್ವಜನಿಕರಿಂದ ತೀವ್ರ ಒತ್ತಡವನ್ನು ಎದುರಿಸಿ, ಸುಂಕವನ್ನು ಕಡಿಮೆ ಮಾಡಿ, ಬೆಲೆ ಇಳಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂಬ ಸಂಗತಿಯನ್ನು ಸರ್ಕಾರ ಮನಗಾಣಬೇಕು.