Site icon Vistara News

Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

baba ramdev supreme court

ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು (Advertisements) ಪ್ರಕರಣದಲ್ಲಿ ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆ ಹಾಗೂ ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್‌ (Baba Ramdev) ಅವರನ್ನು ಕಳೆದೊಂದು ತಿಂಗಳಿನಿಂದ ಹಿಗ್ಗಾಮುಗ್ಗಾ ತರಾಟೆಗೆ (Patanjali Case) ತೆಗೆದುಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ (Supreme court), ಇಂದು ಮತ್ತೆ ಆ ಕೆಲಸವನ್ನು ಮುಂದುವರಿಸಿದೆ. ಪತಂಜಲಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕ್ಷಮಾಯಾಚನೆಯ (Apology) ಗಾತ್ರವು “ಅದರ ಉತ್ಪನ್ನಗಳ ಪೂರ್ಣ ಪುಟದ ಜಾಹೀರಾತುಗಳ ಗಾತ್ರದಲ್ಲೇ ಇದೆಯೇ?” ಎಂದು ಪ್ರಶ್ನಿಸಿದೆ. ಸರಿಪಡಿಸಿ ದೊಡ್ಡ ಗಾತ್ರದಲ್ಲಿ ಮರಳಿ ಪ್ರಕಟಿಸುವಂತೆ ತಾಕೀತು ಮಾಡಿದೆ.

ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ನ್ಯಾಯಾಲಯದ ಮುಂದೆ ಹೊಸದಾಗಿ ಅವರಿಬ್ಬರ ಕ್ಷಮಾಪಣೆಯನ್ನು ಮಂಡಿಸಿದ್ದಾರೆ. “ನಿನ್ನೆಯಷ್ಟೇ ಏಕೆ ಕ್ಷಮೆಯಾಚಿಸಲಾಯಿತು? ಮತ್ತು ಅದನ್ನು ಯಾಕೆ ಮೊದಲೇ ಮಾಡಲಿಲ್ಲ?” ಎಂದು ಪೀಠ ಕೇಳಿದೆ. ಕ್ಷಮಾಪಣೆಯನ್ನು ₹10 ಲಕ್ಷ ವೆಚ್ಚದಲ್ಲಿ 67 ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ರೋಹಟಗಿ ಹೇಳಿದರು. “ಕ್ಷಮೆಯಾಚನೆಯನ್ನು ದೊಡ್ಡದಾಗಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳಂತೆಯೇ ಅದೇ ಫಾಂಟ್ ಮತ್ತು ಗಾತ್ರದಲ್ಲಿ ಇದೆಯೇ?” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಪ್ರಶ್ನಿಸಿದ್ದಾರೆ. “ಕಂಪನಿಯು ಇದಕ್ಕಾಗಿ ಲಕ್ಷಗಳಲ್ಲಿ ಖರ್ಚು ಮಾಡಿದೆ” ಎಂದು ರೋಹಟಗಿ ಹೇಳಿದಾಗ, ನ್ಯಾಯಾಲಯವು “ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದು ಉತ್ತರಿಸಿತು.

ಪತಂಜಲಿ ವಿರುದ್ಧದ ಪ್ರಕರಣ ಹೂಡಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರುದ್ಧ ₹1000 ಕೋಟಿ ದಂಡ ಹಾಕಲು ಕೋರಿದ ಅರ್ಜಿಯೊಂದನ್ನು ಸ್ವೀಕರಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದ್ದು, “ಇದು ನಕಲಿ ಅರ್ಜಿಯೇ? ನಮಗೆ ಅನುಮಾನವಿದೆ” ಎಂದಿದೆ. “ತಮ್ಮ ಕಕ್ಷಿದಾರರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ರೋಹಟಗಿ ಅವರು ಒತ್ತಿ ಹೇಳಿದರು.

ಪತ್ರಿಕೆಗಳಲ್ಲಿ ದೊಡ್ಡ ಕ್ಷಮಾಪಣೆಯನ್ನು ಪ್ರಕಟಿಸುವುದಾಗಿ ಬಾಬಾ ರಾಮ್‌ದೇವ್ ಹೇಳಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಒಂದು ವಾರಕ್ಕೆ ಮುಂದೂಡಿದೆ. ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಗಂಟೆಗಳ ಮೊದಲು, ಪತಂಜಲಿ ಆಯುರ್ವೇದ್ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಕ್ಷಮೆಯಾಚಿಸಿದೆ. ನ್ಯಾಯಾಲಯದ ಬಗ್ಗೆ ತನಗೆ ಹೆಚ್ಚಿನ ಗೌರವವಿದೆ ಮತ್ತು ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದೆ.

ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮ್‌ದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಕಂಪನಿಯ ಉತ್ಪನ್ನಗಳು ಗುಣಪಡಿಸುತ್ತವೆ ಎಂದು ಸಾರುವ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ವೈದ್ಯಕೀಯ ಸಂಘ ಕೋರ್ಟ್‌ಗೆ ಹೋಗಿತ್ತು. ನ್ಯಾಯಾಲಯವು ಈ ಹಿಂದೆ ರಾಮ್‌ದೇವ್ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆ ಅರ್ಜಿಯನ್ನು ತಿರಸ್ಕರಿಸಿತ್ತು. “ಅದು ಹೃದಯಪೂರ್ವಕವಾಗಿಲ್ಲ” ಮತ್ತು “ತುಟಿಯ ಮೇಲಿನ ಮಾತು” ಎಂದು ಪೀಠ ಹೇಳಿತ್ತು. ಏಪ್ರಿಲ್ 16ರಂದು ನಡೆದ ವಿಚಾರಣೆಯಲ್ಲಿ, ಇಬ್ಬರೂ ಇಂದು ನೇರವಾಗಿ ಹಾಜರಾಗಲು ಮತ್ತು ಕ್ಷಮೆಯಾಚಿಸಲು ಆದೇಶಿಸಿತ್ತು.

ರಾಷ್ಟ್ರೀಯ ಹಿಂದಿ ದೈನಿಕದಲ್ಲಿ ಸಣ್ಣದಾಗಿ ಪ್ರಕಟವಾದ ಜಾಹೀರಾತಿನಲ್ಲಿ, ಪತಂಜಲಿಯು ಸುಪ್ರೀಂ ಕೋರ್ಟ್‌ನ ಬಗ್ಗೆ ತಾವು ಅತ್ಯಂತ ಗೌರವವನ್ನು ಹೊಂದಿದ್ದೇವೆ ಎಂದು ಹೇಳಿದೆ. “ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸುವಲ್ಲಿ ಮಾಡಿದ ತಪ್ಪುಗಳಿಗಾಗಿ ನಾವು ನಮ್ಮ ಹೃತ್ಪೂರ್ವಕ ಕ್ಷಮೆಯಾಚಿಸುತ್ತೇವೆ. ಈ ತಪ್ಪನ್ನು ಪುನರಾವರ್ತಿಸದಿರಲು ನಾವು ಬದ್ಧರಾಗಿದ್ದೇವೆ” ಎಂದು ಜಾಹೀರಾತು ಹೇಳಿದೆ.

ಕಳೆದ ವಾರ ವಿಚಾರಣೆಯ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, “ನಾನು ಮಾಡಬೇಕಾಗಿದ್ದನ್ನು ಹೇಳಿದ್ದೇನೆ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದ್ದರು. ರಾಮ್‌ದೇವ್ ಮತ್ತು ಬಾಲಕೃಷ್ಣ ಅವರ ಹಿಂದಿನ ಕ್ಷಮೆಯಾಚನೆಯನ್ನು ತಿರಸ್ಕರಿಸಿದ ನ್ಯಾಯಾಲಯವು ಪತ್ರಗಳನ್ನು ಮೊದಲು ಮಾಧ್ಯಮಗಳಿಗೆ ಕಳುಹಿಸಲಾಗಿದೆ ಎಂದು ಗಮನಿಸಿತ್ತು. “ವಿಷಯವು ನ್ಯಾಯಾಲಯದ ಮೆಟ್ಟಿಲೇರುವವರೆಗೂ, ಅಫಿಡವಿಟ್‌ಗಳನ್ನು ನಮಗೆ ಕಳುಹಿಸಬೇಕಿಲ್ಲ ಎಂದು ಆರೋಪಿಗಳು ಕಂಡುಕೊಂಡರು. ಅವರು ಪ್ರಚಾರವನ್ನು ಸ್ಪಷ್ಟವಾಗಿ ನಂಬುತ್ತಾರೆ” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ.

ಪೀಠದಲ್ಲಿದ್ದ ನ್ಯಾಯಮೂರ್ತಿ ಎ. ಅಮಾನುಲ್ಲಾ ಅವರು, “ಕ್ಷಮಾಪಣೆ ಸಲ್ಲಿಸುವುದು ಸಾಕಾಗುವುದಿಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ನೀವು ಪರಿಣಾಮಗಳನ್ನು ಅನುಭವಿಸಲೇಬೇಕು” ಎಂದು ಎಚ್ಚರಿಸಿದ್ದರು.

ಏನಿದು ಪ್ರಕರಣ?

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪತಂಜಲಿ ತಪ್ಪು ಮಾಡಿದ್ರೆ 1000 ಕೋಟಿ ದಂಡ ಹಾಕಿ; ಆದ್ರೆ ವೈದ್ಯರಿಗೆ ಯಾವ ಶಿಕ್ಷೆ? ಬಾಬಾ ರಾಮದೇವ ಕೆಂಡ

Exit mobile version