ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು (Misleading advertisements) ಪ್ರಕರಣದಲ್ಲಿ (Patanjali Case) ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ (Supreme court), ಅಲೋಪತಿಯಲ್ಲಿ (Allopathy) “ದುಬಾರಿ ಮತ್ತು ಅನಗತ್ಯ” ಔಷಧಿಗಳನ್ನು ಅನುಮೋದಿಸುತ್ತಿರುವ ಭಾರತೀಯ ವೈದ್ಯಕೀಯ ಸಂಘ (IMA) ಅರ್ಜಿದಾರರಿಗೂ ಚಾಟಿ ಬೀಸಿದೆ. “ಇತರರನ್ನು ದೂರುವ ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ” ಎಂದು ಪೀಠ ತೀಕ್ಷ್ಣವಾಗಿ ನುಡಿದಿದೆ.
ಪತಂಜಲಿ ಆಯುರ್ವೇದ ಸಂಸ್ಥೆ, ಅದರ ಸ್ಥಾಪಕರಾದ ಬಾಬಾ ರಾಮ್‌ದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balakrishna) ಅವರ ವಿರುದ್ಧದ ಐಎಂಎ ದೂರಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಐಎಂಎ ಬಗ್ಗೆ ಹೇಳುವ ಮುನ್ನ ಪೀಠವು, ಕ್ಷಮೆಯಾಚನೆಯನ್ನು ಅದರ ಉತ್ಪನ್ನಗಳ ಜಾಹೀರಾತು ಮಾದರಿಯಲ್ಲೇ ದೊಡ್ಡದಾಗಿ ಪತ್ರಿಕೆಗಳನ್ನು ಪ್ರಕಟಿಸುವಂತೆ ಪತಂಜಲಿಗೆ ತಾಕೀತು ಮಾಡಿತ್ತು.
ನಂತರ ತೀಕ್ಷ್ಣವಾದ ಪದಗಳೊಂದಿಗೆ ನ್ಯಾಯಪೀಠವು ದೇಶದ ಪ್ರಮುಖ ವೈದ್ಯರ ಸಂಘದತ್ತ ಚಾಟಿ ಬೀಸಿತು. “ಪತಂಜಲಿಯನ್ನು ಒಂದು ಬೆಟ್ಟು ಮಾಡಿ ತೋರುವಾಗ ನಾಲ್ಕು ಬೆರಳುಗಳು ಅವರತ್ತಲೂ ತೋರಿಸುತ್ತಿವೆ. ನಿಮ್ಮ (ಐಎಂಎ) ವೈದ್ಯರು ಕೂಡ ಅಲೋಪತಿ ಕ್ಷೇತ್ರದಲ್ಲಿ ದುಬಾರಿ ಮತ್ತು ಅನಗತ್ಯ ಔಷಧಿಗಳನ್ನು ಅನುಮೋದಿಸುತ್ತಿದ್ದಾರೆ. ನಾವು ನಿಮ್ಮ (ಐಎಂಎ) ಕಡೆ ಏಕೆ ಪ್ರಕರಣವನ್ನು ತಿರುಗಿಸಬಾರದು?” ಎಂದು ಸುಪ್ರೀಂ ಕೋರ್ಟ್ ಐಎಂಎಗೆ ಪ್ರಶ್ನಿಸಿದೆ.
“ಐಎಂಎಯ ಅನೈತಿಕ ವರ್ತನೆಗೆ ಸಂಬಂಧಿಸಿದಂತೆ ಹಲವಾರು ದೂರುಗಳಿವೆ. ಶಿಶುಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಎಫ್‌ಎಂಸಿಜಿ ಕಂಪನಿಗಳು ಸಾರ್ವಜನಿಕರ ಮೇಲೆ ಸವಾರಿ ಮಾಡುತ್ತಿವೆ” ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಕೇಳಿದೆ. ಕಳೆದ ಮೂರು ವರ್ಷಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸಚಿವಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
“ಈಗ ನಾವು ಎಲ್ಲವನ್ನೂ ನೋಡುತ್ತಿದ್ದೇವೆ. ನಾವು ಮಕ್ಕಳು, ಶಿಶುಗಳು, ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದೇವೆ. ಯಾರನ್ನೂ ಸುಲಭವಾಗಿ ಯಾಮಾರಿಸಲಾಗುವುದಿಲ್ಲ” ಎಂದ ನ್ಯಾಯಾಲಯ, “ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದೂ ಹೇಳಿದೆ.
ಪತಂಜಲಿ ವಿರುದ್ಧದ ಪ್ರಕರಣವೇನು?
ಪತಂಜಲಿ ಆಯುರ್ವೇದ್‌ನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ನ್ಯಾಯಾಲಯದ ಮೆಟ್ಟಿಲೇರಿದೆ. ರೋಗಗಳನ್ನು ಗುಣಪಡಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಆಧುನಿಕ ಔಷಧದ ವಿರುದ್ಧ ಅಪಪ್ರಚಾರ ನಡೆಸಿದ್ದಕ್ಕಾಗಿ ಪತಂಜಲಿಯುನ್ನು ಕೋರ್ಟಿಗೆಳೆಯಲಾಗಿದೆ. ಕಳೆದ ವರ್ಷ, ಸುಪ್ರೀಂ ಕೋರ್ಟ್ ತಪರಾಕಿಯ ನಂತರ, ಪತಂಜಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿತ್ತು. ಆದರೂ ಈ ವರ್ಷದ ಆರಂಭದಲ್ಲಿ ತನ್ನ ಮಾತನ್ನು ಉಲ್ಲಂಘಿಸಿತ್ತು.
ಎಪ್ರಿಲ್ 16ರಂದು, ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ “ಅಲೋಪತಿಯನ್ನು ಕೀಳಾಗಿ ಹಾಕುವ” ಯಾವುದೇ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿತು. ಒಂದು ವಾರದೊಳಗೆ “ಸಾರ್ವಜನಿಕ ಕ್ಷಮೆಯಾಚನೆ ಮತ್ತು ಪಶ್ಚಾತ್ತಾಪವನ್ನು ತೋರಿಸಲು” ಅನುಮತಿ ನೀಡಿತು. ಆದರೂ ಅವರಿಬ್ಬರೂ ಬಗ್ಗಿರಲಿಲ್ಲ. ಇಂದು ಕಂಪನಿಯು 60ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ತನ್ನ ಕ್ಷಮೆಯಾಚನೆಯನ್ನು ಸಣ್ಣದಾಗಿ ಪ್ರಕಟಿಸಿದೆ. ಇದನ್ನು ಗಮನಿಸಿದ ನ್ಯಾಯಾಲಯ, ಜಾಹೀರಾತುಗಳಷ್ಟೇ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸುವಂತೆ ಚಾಟಿ ಬೀಸಿದೆ.
ಇದನ್ನೂ ಓದಿ: Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್ ಬೆವರಿಳಿಸಿದ ಸುಪ್ರೀಂ ಕೋರ್ಟ್