ಹೊಸದಿಲ್ಲಿ: ಮಹಿಳಾ ವೈದ್ಯರಿಂದ (female Doctors) ಚಿಕಿತ್ಸೆ ಪಡೆದ ರೋಗಿಗಳು (Patients) ಸಾಯುವ (death) ಅಥವಾ ಪುನಃ ಅಡ್ಮಿಟ್ ಆಗುವ ಸಾಧ್ಯತೆ ಕಡಿಮೆ ಎಂದು ಹೊಸ ಅಧ್ಯಯನವೊಂದು (study) ಹೇಳಿದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪುರುಷ ವೈದ್ಯರಿಂದ (Male doctors) ಚಿಕಿತ್ಸೆ ಪಡೆದ ರೋಗಿಗಳಿಗಿಂತ, ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳ ಮರಣದ ಸಂಖ್ಯೆ ಕಡಿಮೆ ಮತ್ತು ಹೆಚ್ಚು ಉಪಶಮನ ಹೊಂದಿದ್ದಾರೆ.
2016ರಿಂದ 2019ರವರೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 4,58,100 ಮಹಿಳಾ ರೋಗಿಗಳು ಮತ್ತು 3,18,800 ಪುರುಷ ರೋಗಿಗಳು ಸೇರಿದಂತೆ 7,76,000 ಮಂದಿಯನ್ನು ಇದರಲ್ಲಿ ಅಧ್ಯಯನ ಮಾಡಲಾಗಿದೆ. “ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳಲ್ಲಿ ಕಡಿಮೆ ಮರಣ ಮತ್ತು ರಿಅಡ್ಮಿಶನ್ ಕಂಡುಬಂದಿದೆ” ಎಂದು ಅಧ್ಯಯನವು ಹೇಳಿದೆ. ಮಹಿಳಾ ರೋಗಿಗಳ ಮರಣ ಪ್ರಮಾಣವು ವೈದ್ಯೆಯರಿಂದ ಚಿಕಿತ್ಸೆ ಪಡೆದಾಗ 8.15%ರಷ್ಟಿದ್ದರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದಾಗ 8.38%ರಷ್ಟಿತ್ತು. ಪುರುಷರ ಮರಣ ಪ್ರಮಾಣವು ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದಾಗ 10.15%ರಷ್ಟು ಹಾಗೂ ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದಾಗ 10.23%ರಷ್ಟಿತ್ತು.
ಈ ಶೇಕಡಾವಾರು ವ್ಯತ್ಯಾಸವನ್ನು ವೈದ್ಯಕೀಯವಾಗಿ ಅರ್ಥಪೂರ್ಣ ಎಂದು ಪರಿಗಣಿಸಲಾಗುತ್ತದೆ. “ಮಹಿಳಾ ವೈದ್ಯರು ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ ಹೆಚ್ಚಿನ ಮಹಿಳಾ ವೈದ್ಯರು ರೋಗಿಗಳ ಸಾಮಾಜಿಕ ದೃಷ್ಟಿಕೋನದಿಂದ ಪ್ರಯೋಜನ ಪಡೆಯುತ್ತಾರೆ” ಎಂದು ಸಮೀಕ್ಷೆಯ ನಾಯಕಿ ಯುಸುಕೆ ತ್ಸುಗಾವಾ ತಿಳಿಸಿದ್ದಾರೆ.
ಮಹಿಳಾ ವೈದ್ಯರು ತಮ್ಮ ರೋಗಿಗಳೊಂದಿಗೆ ಹೆಚ್ಚು ಸಮಯ ಮಾತನಾಡುತ್ತಾರೆ. ಅವರ ದಾಖಲೆಗಳನ್ನು ನೋಡುತ್ತಾರೆ ಮತ್ತು ಡಯಾಗ್ನೋಸಿಸ್ ಮಾಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಮಹಿಳಾ ವೈದ್ಯರು ಬಹುಶಃ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುತ್ತಾರೆ ಮತ್ತು ಮಹಿಳಾ ರೋಗಿಗಳಿಗೆ ಬಂದಾಗ ಹೆಚ್ಚು ರೋಗಿಕೇಂದ್ರಿತ ವಿಧಾನವನ್ನು ಹೊಂದಿರುತ್ತಾರೆ. ವೈದ್ಯೆಯರಿಂದ ಚಿಕಿತ್ಸೆ ಪಡೆಯುವುದರಿಂದ ಸೂಕ್ಷ್ಮ ಪರೀಕ್ಷೆಗಳ ಸಮಯದಲ್ಲಿ ಮಹಿಳಾ ರೋಗಿಗಳಿಗೆ ಉಂಟಾಗಬಹುದಾದ ಮುಜುಗರ ತಪ್ಪುತ್ತದೆ; ಸಾಮಾಜಿಕ ಮತ್ತು ಸಾಂಸ್ಕೃತಿಕ ನಿಷೇಧಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
“ವೈದ್ಯಕೀಯ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳಾ ವೈದ್ಯರ ಆರೈಕೆ ಮಾದರಿಯಲ್ಲಿ ವ್ಯತ್ಯಾಸಗಳಿವೆ. ವೈದ್ಯೆಯರು ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಪುರುಷರಿಗಿಂತ ವೈದ್ಯಕೀಯ ನಿರ್ಧಾರ ಮತ್ತು ಪಾಲುದಾರಿಕೆ ಚರ್ಚೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ” ಎಂದು ಅಧ್ಯಯನದ ಸಹ-ಲೇಖಕಿ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ಸ್ಯಾನ್ ಫ್ರಾನ್ಸಿಸ್ಕೋ ತಿಳಿಸಿದರು.
“ಇದರಲ್ಲಿ ಆಶ್ಚರ್ಯವೇನಿಲ್ಲ. ಮಹಿಳೆಯರು ಮತ್ತು ಪುರುಷರು ವಿಭಿನ್ನವಾಗಿ ವೈದ್ಯಕೀಯ ಅಭ್ಯಾಸ ಮಾಡುತ್ತಾರೆ. ಸಂವಹನ ಶೈಲಿಗಳು ಮತ್ತು ಮಾರ್ಗಸೂಚಿಗಳ ಅನುಸರಣೆಯಲ್ಲಿ ನಿರ್ದಿಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ರೋಗಿಗಳ ಫಲಿತಾಂಶದಲ್ಲಿ ಕಾಣಿಸುತ್ತದೆ. ಎರಡನೆಯದಾಗಿ, ಸಮಾಜದಲ್ಲಿ, ನಿಸ್ಸಂಶಯವಾಗಿ ವೈದ್ಯಕೀಯದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಗುಣಮಟ್ಟವನ್ನು ಹೊಂದಿದ್ದಾರೆ. ಇದು ಶಸ್ತ್ರಚಿಕಿತ್ಸೆಯಲ್ಲಿಯೂ ಕಾಣುವ ವಿದ್ಯಮಾನವಾಗಿದೆ,” ಎಂದು ಟೊರೊಂಟೊ ವಿಶ್ವವಿದ್ಯಾಲಯದ ಮೂತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕ್ರಿಸ್ಟೋಫರ್ ವಾಲಿಸ್ ಹೇಳಿದ್ದಾರೆ.
ಮಹಿಳೆಯರು ಪುರುಷರಿಗಿಂತ ಹಾಗೂ ಅಲ್ಪಸಂಖ್ಯಾತರು ಶ್ವೇತವರ್ಣೀಯರಿಗಿಂತ ಕೆಟ್ಟ ವೈದ್ಯಕೀಯ ಆರೈಕೆಯನ್ನು ಏಕೆ ಪಡೆಯುತ್ತಾರೆ ಎಂಬುದನ್ನು ಪರಿಶೀಲಿಸುವ ಉದ್ದೇಶವನ್ನು ಹೊಸ ಸಂಶೋಧನೆಯು ಹೊಂದಿದೆ. ಜನವರಿ 2024ರಲ್ಲಿ JAMA ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, “ಮಹಿಳೆಯರು ಮತ್ತು ಅಲ್ಪಸಂಖ್ಯಾತ ರೋಗಿಗಳು ಬಿಳಿ ಪುರುಷರಿಗಿಂತ 30%ರಷ್ಟು ತಪ್ಪಾದ ರೋಗನಿರ್ಣಯ ಪಡೆಯುವ ಸಾಧ್ಯತೆಯಿದೆ.” 2002ರ ಇನ್ನೊಂದು ಅಧ್ಯಯನದಲ್ಲಿ, ವೈದ್ಯರಿಗೆ ಹೋಲಿಸಿದರೆ ವೈದ್ಯೆಯರು ರೋಗಿಗಳೊಂದಿಗೆ ಸರಾಸರಿ 23 ನಿಮಿಷ ಕಳೆಯುತ್ತಾರೆ ಎಂದು ಕಂಡುಬಂದಿದೆ.
ಇದನ್ನೂ ಓದಿ: Money Guide: ವೈದ್ಯಕೀಯ ತುರ್ತು ಪರಿಸ್ಥಿತಿ ವೇಳೆ ಸಾಲದ ಸುಳಿಗೆ ಸಿಲುಕದಿರಲು ಹೀಗೆ ಮಾಡಿ…