ಹೊಸದಿಲ್ಲಿ: ಪೇಟಿಎಂ (Paytm) ಮೇಲೆ ಯಾವುದೇ ವಿದೇಶಿ ವಿನಿಮಯ ವಂಚನೆ (Forex Violation) ತನಿಖೆಯಾಗಲೀ ಜಾರಿ ನಿರ್ದೇಶನಾಲಯದ (ED Probe) ವಿಚಾರಣೆಯಾಗಲೀ ನಡೆಯುತ್ತಿಲ್ಲ ಎಂದು ಪೇಟಿಎಂ ಮಾತೃಸಂಸ್ಥೆ One97 ಕಮ್ಯುನಿಕೇಷನ್ಸ್ ಲಿಮಿಟೆಡ್ (One97 Communications Ltd) ಸ್ಪಷ್ಟಪಡಿಸಿದೆ.
ಪೇಟಿಎಂ ಮತ್ತು ಅದರ ಸಹವರ್ತಿಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm payments Bank) ಲಿಮಿಟೆಡ್‌ನಿಂದ ವಿದೇಶಿ ವಿನಿಮಯ ನಿಯಮಾವಳಿ ಉಲ್ಲಂಘನೆ ಕುರಿತ ವರದಿಗಳನ್ನು ಸಂಸ್ಥೆ ನಿರಾಕರಿಸಿದೆ. One 97 ಕಮ್ಯುನಿಕೇಷನ್ಸ್ ನಡೆಸುತ್ತಿರುವ ವೇದಿಕೆಗಳ ಬಗ್ಗೆ ಭಾರತದ ಆರ್ಥಿಕ ಅಪರಾಧ ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಎರಡು ಹಿರಿಯ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ ನಂತರ Paytm ಈ ಸ್ಪಷ್ಟೀಕರಣವನ್ನು ನೀಡಿದೆ.
“ಇತ್ತೀಚಿನ ತಪ್ಪು ಮಾಹಿತಿ ಮತ್ತು ಊಹಾಪೋಹಗಳನ್ನು ಪರಿಹರಿಸಲು ಮತ್ತು ವದಂತಿಗಳನ್ನು ನೇರವಾಗಿ ಪರಿಹರಿಸಲು One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL/Paytm) ಬಯಸುತ್ತದೆ. ಪಾರದರ್ಶಕತೆಯ ದೃಷ್ಟಿಯಿಂದ ಇದನ್ನು ಮಾಡಲಾಗುತ್ತಿದೆ. ನಮ್ಮ ಗ್ರಾಹಕರು, ಷೇರುದಾರರು ಮತ್ತು ಏಜೆಂಟರನ್ನು ಅನಗತ್ಯ ಮತ್ತು ಊಹಾಪೋಹಗಳಿಗೆ ತುತ್ತಾಗದಂತೆ ರಕ್ಷಿಸಲು ಬಯಸುತ್ತೇವೆ” ಎಂದು ಪೇಟಿಎಂ ಹೇಳಿಕೆಯಲ್ಲಿ ತಿಳಿಸಿದೆ.
“OCL, ನಮ್ಮ ಸಹವರ್ತಿಗಳು ಮತ್ತು ನಮ್ಮ ನಿರ್ವಹಣೆಯ ಮೇಲೆ ಜಾರಿ ನಿರ್ದೇಶನಾಲಯದ ಯಾವುದೇ ತನಿಖೆ ನಡೆಯುತ್ತಿಲ್ಲ. ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆಗಾಗಿ ಕಂಪನಿ ಅಥವಾ ಅದರ ಸಹವರ್ತಿ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ತನಿಖೆ ಎದುರಿಸುತ್ತಿವೆ ಎಂಬುದು ಆಧಾರರಹಿತ ಊಹಾಪೋಹ. ಕಂಪನಿ ಮತ್ತು ಅದರ ಸಹವರ್ತಿ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಇಂತಹ ಯಾವುದೇ ತನಿಖೆಗೆ ಒಳಗಾಗಿಲ್ಲ. ಅಂತಹ ಮಾಧ್ಯಮ ವರದಿಗಳು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ, ಆಧಾರರಹಿತ ಮತ್ತು ದುರುದ್ದೇಶಪೂರಿತ. ಇದು ನಮ್ಮ ಎಲ್ಲ ಪಾಲುದಾರರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ” ಎಂದು ಹೇಳಿಕೆ ತಿಳಿಸಿದೆ.
ಈ ನಡುವೆ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಮತ್ತೆ ಶೇಕಡಾ 10ರಷ್ಟು ಕುಸಿದಿವೆ. ಹೂಡಿಕೆದಾರರು RBI ಕ್ರಮದ ನಂತರ ಕಂಪನಿಯ ಷೇರುಗಳ ಮಾರಾಟ ಮುಂದುವರೆಸಿದ ಪರಿಣಾಮವಿದಾಗಿದೆ. ಸ್ಟಾಕ್ ಬಿಎಸ್‌ಇಯಲ್ಲಿ 10 ಪ್ರತಿಶತದಷ್ಟು ಕುಸಿದು ರೂ 438.35ಕ್ಕೆ ತಲುಪಿತು. NSEನಲ್ಲಿ ಕೂಡ ಶೇ.9.99ರಷ್ಟು ಕುಸಿದಿದೆ. ಮೂರು ದಿನಗಳಲ್ಲಿ ಷೇರುಗಳು ಶೇಕಡಾ 42ರಷ್ಟು ಕುಸಿದಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯಮಾಪನ 20,471.25 ಕೋಟಿ ರೂ. ಕುಸಿದಿದೆ.
ಪೇಟಿಎಂ ಪಾವತಿ ಬ್ಯಾಂಕ್ ವಿರುದ್ಧ ಆರ್‌ಬಿಐ ಕ್ರಮ
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ Paytmನ ಅಂಗಸಂಸ್ಥೆಯಾದ Paytm ಪೇಮೆಂಟ್ಸ್ ಬ್ಯಾಂಕ್‌ಗೆ ಠೇವಣಿಗಳು, ಕ್ರೆಡಿಟ್ ಉತ್ಪನ್ನಗಳು ಮತ್ತು ಅದರ ಜನಪ್ರಿಯ ಡಿಜಿಟಲ್ ವ್ಯಾಲೆಟ್‌ಗಳು ಸೇರಿದಂತೆ ಹೆಚ್ಚಿನ ವ್ಯವಹಾರಗಳನ್ನು ಫೆ. 29ರೊಳಗೆ ಸ್ಥಗಿತಗೊಳಿಸುವಂತೆ ಆದೇಶಿಸಿದೆ.
ಆದರೆ ಬ್ಯಾಂಕ್ ಅಥವಾ ಅದರ ಮೂಲ ಕಂಪನಿಯ ಪ್ಲಾಟ್‌ಫಾರ್ಮ್‌ಗಳ ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆಗಳ ಬಗ್ಗೆ ತನಿಖೆಯ ಕುರಿತು ಯಾವುದೇ ವರದಿ ಇಲ್ಲ. ʼಯಾವುದೇ ರೀತಿಯ ಸಾಗರೋತ್ತರ ಪಾವತಿಗಳನ್ನು ಬ್ಯಾಂಕ್ ಖಾತೆಗಳಿಂದ ಅಥವಾ Paytm ಪೇಮೆಂಟ್ಸ್ ಬ್ಯಾಂಕ್‌ನಲ್ಲಿರುವ ವ್ಯಾಲೆಟ್ ಖಾತೆಗಳಿಂದ ನಡೆಸಲಾಗುವುದಿಲ್ಲʼ ಎಂದು Paytm ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: Paytm Crisis: ಸಂಕಷ್ಟದಲ್ಲಿರುವ ಪೇಟಿಎಂ ಮುಕೇಶ್ ಅಂಬಾನಿ ತೆಕ್ಕೆಗೆ? ಯಾವಾಗ ಖರೀದಿ?