Site icon Vistara News

HD Kumaraswamy: ರಾಜ್ಯದಲ್ಲಿ ನಾಳೆ ಚುನಾವಣೆ ನಡೆದ್ರೂ ಕಾಂಗ್ರೆಸ್‌ ಮನೆಗೆ; ಭವಿಷ್ಯ ನುಡಿದ ಕುಮಾರಸ್ವಾಮಿ

HD Kumaraswamy

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬುದಾಗಿ ಬದಲಾಯಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಇದಕ್ಕೆ ನಿದರ್ಶನ ಎಂಬಂತೆ, “10 ವರ್ಷ ಆದ ಮೇಲೂ ರಾಜ್ಯದಲ್ಲಿ ನಾವೇ ಸರ್ಕಾರ ರಚಿಸುತ್ತೇವೆ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಗೆ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, “ಕಾಂಗ್ರೆಸ್‌ ಎಸಗಿರುವ ಭ್ರಷ್ಟಾಚಾರ ನೋಡಿದರೆ, ನಾಳೆ ಚುನಾವಣೆ ನಡೆದರೂ, ಜನ ಕಾಂಗ್ರೆಸ್‌ಅನ್ನು ಮನೆಗೆ ಕಳುಹಿಸುತ್ತಾರೆ” ಎಂದಿದ್ದಾರೆ.

“ನಾವೇ ಸರ್ಕಾರ ರಚಿಸುತ್ತೇವೆ ಎಂಬುದಾಗಿ ಇದಕ್ಕೂ ಮೊದಲು ತುಂಬ ಜನ ಹೇಳಿದ್ದರು. ಹಾಗೆ ಹೇಳಿದವರು ಒಂದೇ ವರ್ಷಕ್ಕೆ ಹೋಗಿದ್ದಾರೆ. ಇವರು ಮಾಡಿರುವ ಘನಂದಾರಿ ಕೆಲಸ ಏನು ಎಂಬುದನ್ನು ನೋಡಿ ಜನ ಇವರಿಗೆ ಮತ ಹಾಕುತ್ತಾರೆ? ಇವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಾಪ, ಇವರು ಗೂಟ ಹೊಡೆದುಕೊಂಡು ಅಧಿಕಾರದಲ್ಲಿ ಇರಲಿ. ಇಲ್ಲಿ ಗೂಟ ಹೊಡೆದುಕೊಂಡು ಇರುತ್ತಾರೋ, ಇನ್ನೆಲ್ಲಿ ಇರುತ್ತಾರೋ ಎಂಬುದರ ಬಗ್ಗೆ ಮುಂದೆ ಚರ್ಚೆ ಮಾಡೋಣ” ಎಂದು ಕುಮಾರಸ್ವಾಮಿ ಹೇಳಿದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ, “ಹೆಸರು ಬದಲಾವಣೆ ಮಾಡಿದ ಇವರು ದೊಡ್ಡಮಟ್ಟದಲ್ಲಿ ಪ್ರಾಯಶ್ಚಿತ್ತ ಪಡುತ್ತಾರೆ. ಇವರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕಾಗಿ ಸ್ವಲ್ಪ ದಿನ ಕಾಯಲಿ” ಎಂದರು.

ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

2028ರ ಒಳಗೆ ನಾವು ಅಧಿಕಾರಕ್ಕೆ ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದರು. “ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಡಿಕೆಶಿ ಹೇಳಿದ್ದರು.

ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿಕೆಶಿ, “ಕುಮಾರಸ್ವಾಮಿ ನಮ್ಮನ್ನು ಸರ್ವನಾಶ ಮಾಡಲು ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಅವರ ಆಚಾರ, ವಿಚಾರ ಎಲ್ಲವೂ ನಮಗೆ ಗೊತ್ತಿದೆ. ನಾವು ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ. ಇದು ನಮ್ಮ ಜಿಲ್ಲೆ. ಇವರು ಬಂದು ಅಕ್ರಮವಾಗಿ ಜಿಲ್ಲೆಯ ಗುರುತನ್ನು ಬದಲಿಸಿದ್ದಾರೆ. ರಾಜಕೀಯವಾಗಿ ಇದಕ್ಕೆ ಅವಕಾಶವಿದೆ ಮಾಡಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಬೆಂಗಳೂರಿನವರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Exit mobile version