ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಾದ- ವಿವಾದ ಕುತೂಹಲಕಾರಿ ಘಟ್ಟ ತಲುಪಿದೆ. ಇದಕ್ಕೆ ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಲಿಂಗ ವಿವಾಹ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ಅರ್ಹತೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ. ಕೋರ್ಟ್ ಮುಂದಿರುವ ಅರ್ಜಿಗಳು ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ʼನಗರ ಮೇಲುಸ್ತರದ ಕೆಲವರ ದೃಷ್ಟಿಕೋನ’ಗಳನ್ನು ಮಾತ್ರವೇ ಪ್ರತಿಬಿಂಬಿಸುತ್ತವೆ. ಈ ಅರ್ಜಿಗಳು ಸಮಾಜದ ವಿಶಾಲ ವ್ಯಾಪ್ತಿಯ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಪ್ರತಿಬಿಂಬಿಸುವುದಿಲ್ಲ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದರೆ ಅದು ಮತ್ತೊಂದು ಸಾಮಾಜಿಕ ಸಂಸ್ಥೆಯ ಹುಟ್ಟಿಗೆ ಕಾರಣವಾಗುತ್ತದೆ. ಹಾಗಾಗಿ ಈ ನಿರ್ಧಾರ ಕೋರ್ಟ್‌ಗೆ ಸಂಬಂಧಿಸಿದ್ದಲ್ಲ ಎಂದು ಸರ್ಕಾರ ವಾದಿಸಿದೆ.
ತೀರಾ ಇತ್ತೀಚಿನವರೆಗೂ ಭಾರತೀಯ ದಂಡಸಂಹಿತೆಯಲ್ಲಿದ್ದ ಸೆಕ್ಷನ್ 377, ಸಲಿಂಗ ಕಾಮವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಿತ್ತು. ಇದೀಗ, ಈ ಕಾನೂನಿನಲ್ಲಿ ತಿದ್ದುಪಡಿಯಾಗಿದ್ದು, ಬಲವಂತವಾದ ಸಲಿಂಗ ಕಾಮ ಮಾತ್ರವೇ ಅಪರಾಧವೆನಿಸಿದೆ; ಸಮ್ಮತಿಯಿಂದ ನಡೆಯುವ ಸಲಿಂಗಕಾಮ ಅಪರಾಧವಾಗಿ ಉಳಿದಿಲ್ಲ. ಈ ಒಂದು ತೀರ್ಪಿಗಾಗಿ ಎಲ್‌ಬಿಟಿ ಸಮುದಾಯಗಳು ಬಲವಾದ ಹೋರಾಟವನ್ನೇ ಹಮ್ಮಿಕೊಂಡಿದ್ದವು. ಇದು ನಿರ್ದಿಷ್ಟ ಸ್ವರೂಪದ ಸಮುದಾಯಕ್ಕೆ ಸಂಬಂಧಿಸಿದ, ಹಾಗೂ ಭಾರತೀಯ ದಂಡ ಸಂಹಿತೆಯ ವ್ಯಾಪ್ತಿಯಲ್ಲಿ ಬರುತ್ತಿದ್ದ ಕಾನೂನಾದ್ದರಿಂದ ಶೀಘ್ರ ಬದಲಾವಣೆ, ತಿದ್ದುಪಡಿ ಸಾಧ್ಯವಾಯಿತು. ಆದರೆ ಸಲಿಂಗ ವಿವಾಹ ಹಾಗಲ್ಲ. ಅದು ಇನ್ನಷ್ಟು ವಿವೇಚನೆ, ಪರಿಶೀಲನೆಯನ್ನು ಬೇಡುತ್ತದೆ.
ನ್ಯಾಯಾಲಯಗಳು ಸಲಿಂಗ ವಿವಾಹದ ಹಕ್ಕನ್ನು ಗುರುತಿಸಿದರೆ ಕಾನೂನನ್ನು ಸಂಪೂರ್ಣ ಪುನಃ ತಿದ್ದಿ ಬರೆಯಬೇಕಾಗುತ್ತದೆ. ಹೊಸ ಸಾಮಾಜಿಕ ಸಂಸ್ಥೆಯನ್ನೇ ರಚನೆ ಮಾಡಿದಂತಾಗುತ್ತದೆ. ಅಂದರೆ ಈಗ ನಾವು ಒಪ್ಪಿರುವ ಗಂಡು- ಹೆಣ್ಣಿನ ಮದುವೆ ಎಂಬ ಸಂಸ್ಥೆಯ ಮೇಲೆ ನಮ್ಮ ಇಡೀ ಸಾಮಾಜಿಕ- ಸಾಂಸಾರಿಕ ವ್ಯವಸ್ಥೆ ನಿಂತಿದೆ. ಗಂಡು- ಗಂಡು ಅಥವಾ ಹೆಣ್ಣು- ಹೆಣ್ಣು ಮದುವೆಯಿಂದ ಸೃಷ್ಟಿಯಾಗುವ ಬಿಕ್ಕಟ್ಟುಗಳು ಹಲವಾರು. ಉದಾಹರಣೆಗೆ, ಈ ಮದುವೆಯಲ್ಲಿ ಆಸ್ತಿಯ ಹಂಚಿಕೆ ಹೇಗೆ? ಇಲ್ಲಿ ಸಾಮಾಜಿಕ ಹೊಣೆಗಾರಿಕೆಯ ಸ್ವರೂಪ ಏನು? ಒಂದು ವೇಳೆ ಈ ಜೋಡಿಗೆ ಮಗು ಬೇಕೆಂದಾದರೆ, ಆಗ ಅದನ್ನು ಪಡೆಯುವ, ಸಾಕುವ, ಬೆಳೆಸುವ ಹಕ್ಕು ಮತ್ತು ಹೊಣೆಗಾರಿಕೆಯ ಹಂಚಿಕೆ ಹೇಗೆ? ಡೈವೋರ್ಸ್ ಅಗತ್ಯವಾದರೆ ಅದರ ನಿರ್ಣಯ ಹೇಗೆ? ಸಲಿಂಗ ವಿವಾಹದಿಂದ ಸೃಷ್ಟಿಯಾಗಬಹುದಾದ ಇಂಥ ಬಿಕ್ಕಟ್ಟುಗಳು ಮತ್ತೆ ಸುಪ್ರೀಂ ಕೋರ್ಟ್‌ನ ಟೇಬಲ್ಲಿಗೇ ಬಂದು ತಲೆನೋವು ಸೃಷ್ಟಿಸಲಿವೆ.
ಸಲಿಂಗ ವಿವಾಹ ಎಂಬುದೇ ಭಾರತದಂಥ ಸಾಂಪ್ರದಾಯಿಕ ನೆಲದಲ್ಲಿ ಅಸಹಜ ವಿದ್ಯಮಾನ. ಜಗತ್ತಿನಲ್ಲಿ ಸುಮಾರು 200 ದೇಶಗಳಿವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿರುವ ದೇಶಗಳು 30 ಮಾತ್ರ. ಅಂದರೆ ಬಹುತೇಕ ದೇಶಗಳು ಇದರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿಲ್ಲ. ಯಾಕೆಂದರೆ ಇದು ತೆರೆಯುವ ಹೊಸ ಸಾಮಾಜಿಕ- ಆರ್ಥಿಕ- ಮಾನಸಿಕ ಬಿಕ್ಕಟ್ಟುಗಳು ಪರಿಹರಿಸುವ ವ್ಯವಸ್ಥೆ ಇನ್ನೂ ಸೃಷ್ಟಿಯಾಗಿಲ್ಲ. ಭಾರತ ಮೊದಲೇ ಸಾಂಪ್ರದಾಯಿಕ ಮನಸ್ಥಿತಿಯ ರಾಷ್ಟ್ರ. ವಿವಾಹ ಎಂಬುದೊಂದು ಸಂಸ್ಕಾರ ಎಂದು ನಂಬಿದವರು ನಾವು. ವಿವಾಹ ಸಂಬಂಧಕ್ಕೆ ಒಳಗಾಗಿ ಜತೆಯಾಗಿ ಬಾಳುವುದು ತಮಗಾಗಿ ಮಾತ್ರವಲ್ಲ, ಕುಟುಂಬಕ್ಕಾಗಿ ಹಾಗೂ ಸ್ವಸ್ಥ ಸಮಾಜಕ್ಕಾಗಿ ಕೂಡ. ವಿವಾಹ ಎಂಬುದು ಹೊಣೆಗಾರಿಕೆಯೇ ದೈಹಿಕ ವಾಂಛೆ ತೀರಿಸಿಕೊಳ್ಳಲು ಇರುವ ಸಾಧನವಲ್ಲ. ಸಲಿಂಗ ವಿವಾಹದಿಂದ ಖಂಡಿತವಾಗಿಯೂ ನಮ್ಮ ಪರಂಪರಾಗತ ವಿವಾಹ ವ್ಯವಸ್ಥೆ ಏರುಪೇರಾಗಲಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅಪಘಾತಗಳ ರಾಜಧಾನಿ ಆಗುತ್ತಿದೆ ಬೆಂಗಳೂರು
ʼನ್ಯಾಯಾಲಯವು ಈ ರೀತಿಯ ಅಂತಿಮ ತೀರ್ಪುಗಳನ್ನು ನೀಡುವುದರಿಂದ ಹಿಂದೆ ಸರಿಯಬೇಕು. ಇಂಥ ಸಾಮಾಜಿಕ ಬದಲಾವಣೆಗಳಿಗೆ ಅಗತ್ಯವಾದ ಶಾಸನಗಳನ್ನು ಶಾಸಕಾಂಗ ಮಾತ್ರವೇ ಮಾಡಬೇಕಾಗುತ್ತದೆʼ ಎಂದು ಸರ್ಕಾರ ವಾದಿಸಿರುವುದರಲ್ಲಿ ನಿಜವಿದೆ. ಹಾಗೆಯೇ ಇದು ಕೆಲವು ʼನಗರದ ಮೇಲ್‌ಸ್ತರದʼ ಜನರಿಗೆ ಸಂಬಂಧಿಸಿದ ವಿಚಾರ ಎಂದು ಹೇಳಿರುವ ಸರ್ಕಾರದ ಮಾತಿನಲ್ಲೂ ನಿಜಾಂಶವಿದೆ. ವಿವಾಹವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಮಾಡಿಕೊಂಡ ಕೆಲವರಿಗೆ ಮಾತ್ರ ಇದು ಅಗತ್ಯವೆನ್ನಿಸಬಹುದು ಹೊರತು ಇತರರಿಗಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಆತುರದ ತೀರ್ಮಾನ ಸಲ್ಲದು. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ, ವಿವೇಚನೆ ನಡೆಯಲಿ. ಕಾನೂನುತಜ್ಞರ, ಸಮಾಜಶಾಸ್ತ್ರಜ್ಞರ ತಜ್ಞತೆ ವಿವೇಕಗಳನ್ನೂ ಬಳಸಿ, ಸಮಾಜಕ್ಕೆ ಹಿತವಾದ ಅಂತಿಮ ತೀರ್ಮಾನಕ್ಕೆ ಬರುವಂತಾಗಲಿ.