ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದ (Petrol Diesel Price Hike) ರಾಜ್ಯ ಸರಕಾರದ (Karnataka Govt) ಕ್ರಮವನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ (BJP protest) ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom park) ಬಿಜೆಪಿಯ ರಾಜ್ಯ ಪದಾಧಿಕಾರಿಗಳು ಹಾಗೂ ಇತರ ನಾಯಕರು ಪ್ರತಿಭಟಿಸಿ ಭಾಷಣ ಮಾಡಿದರು. ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮಯ್ಯ (CM Siddarmaiah) ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಆರ್. ಅಶೋಕ್ (R Ashok) ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.
ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಳಿಕ ಎತ್ತಿನಗಾಡಿ ಮೂಲಕ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ. ಅಶೋಕ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ತಡೆದರು. ʼʼಪೆಟ್ರೋಲ್ ರೇಟ್ ಹೆಚ್ಚಾಗಿದೆ. ಬಸ್‌ವರೆಗೂ ಎತ್ತಿನಗಾಡಿ ಬಿಡಿ” ಎಂದು ಅಶೋಕ್ ಆಗ್ರಹಿಸಿದರು. ಪೊಲೀಸರು ಮತ್ತು ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಬಸ್‌ವರೆಗೂ ಎತ್ತಿನ ಗಾಡಿ ಬಿಟ್ಟು ನಂತರ ಅವರನ್ನು ಬಂಧಿಸಿದ ಪೊಲೀಸರು, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು.
ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಚಟ್ಟ ಕಟ್ಟಿ ರಾಜ್ಯ ಸರ್ಕಾರದ ಹೆಣದ ಮೆರವಣಿಗೆ ಮಾಡಿದರು. ʼಐದು ಗ್ಯಾರಂಟಿಗಳ ಗೋವಿಂದ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೋವಿಂದʼ ಎಂದು ಚಟ್ಟ ಹಿಡಿದು ಮೆರವಣಿಗೆ ಮಾಡಿದರು.
ಢೋಂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ: ಆರ್. ಅಶೋಕ್
“ಸಿದ್ದರಾಮಯ್ಯ ಅವರಿಗೆ ಎರಡು ನಾಲಿಗೆ. ಅಂದು ಒಂದು ರೂಪಾಯಿ ಪೆಟ್ರೋಲ್ ಬೆಲೆ ಏರಿಸಿದ್ದಕ್ಕೆ, ನಿಮಗೆ ಮಾನ ಮರ್ಯಾದೆ ಇದೆಯಾ ಅಂತ ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಈಗ ಮೂರುವರೆ ರೂಪಾಯಿ ಏರಿಸಿದ್ದೀರಿ, ನಿಮಗೆ ಮಾನಮರ್ಯಾದೆ ಇದೆಯಾ?” ಎಂದು ಅಶೋಕ್ ಹರಿಹಾಯ್ದರು.
“ಮೊನ್ನೆ ಒಂದು ವಿಕೆಟ್ ಬಿದ್ದಿದೆ. 187 ಕೋಟಿ ಹಣ ನುಂಗಿ, ನಾಗೇಂದ್ರ ಔಟ್ ಆಗಿದ್ದಾನೆ. ನೆಕ್ಸ್ಟ್ ವಿಕೆಟ್ ಸಿದ್ದರಾಮಯ್ಯ. ನಾಗೇಂದ್ರ ಪಾಪದವನು, ಜೇನು ಕಿತ್ತ ಅಷ್ಟೇ. ನಾಗೇಂದ್ರ ಪಾಲು ಬರೀ 20%, 80% ಸಿದ್ದರಾಮಯ್ಯ ಪಾಲಾಗಿದೆ. ನಿಗಮದ ದಲಿತರ ಹಣ, ಬಾರ್‌ಗೆ ಹೋಗಿದೆ. ತರಕಾರಿ ಅಂಗಡಿಗೆ ಕೊಡಬೇಕಾದ್ದು, ವೈನ್ ಸ್ಟೋರಿಗೆ ಹೋಯ್ತು. ಅಮಾಯಕ ಅಧಿಕಾರಿ ಒಬ್ಬ ಸತ್ತೋದ. ನಿಷ್ಠಾವಂತ ಅಧಿಕಾರಿಗಳಿಗೆ ಇಲ್ಲಿ ಭದ್ರತೆ ಇಲ್ಲ. ಪೆಟ್ರೋಲ್ ಬೆಲೆ ಹೆಚ್ಚಾದ್ರೆ ಸೆಮೆಂಟ್ ಬೆಲೆ ಹೆಚ್ಚಾಗುತ್ತೆ ಅಂದ್ರು. ಮೂರುವರೆ ರೂಪಾಯಿ ಹೆಚ್ಚು ಮಾಡಿದ್ರಿ, ಈಗ ಏನು ಬೆಲೆ ಹೆಚ್ಚಾಗುತ್ತೆ ಹೇಳಿ?” ಎಂದು ಅಶೋಕ್ ಆಕ್ಷೇಪಿಸಿದರು.
“ಪೆಟ್ರೋಲ್ ಬೆಲೆ ಹೆಚ್ಚು ಮಾಡಿದ್ದಾರೆ. ನಾಳೆ ಇಂದ ಕಾಫಿ ಕುಡಿಯಲು ಹೋದ್ರೆ ಬೆಲೆ ಹೆಚ್ಚಾಗಿರುತ್ತೆ. ಈ ಸರ್ಕಾರ ಎಣ್ಣೇನು ನಮ್ಮದು, ಬಾರು ನಮ್ದು, ಚೇರು ನಮ್ಮದು, ದುಡ್ಡು ಮಾತ್ರ ನಿಮ್ಮದು ಅಂತ ಬರ್ತಾರೆ. ಟೀಚರ್‌ಗಳಿಗೆ ಒಂದು ವರ್ಷದಿಂದ ಸಂಬಳ ಕೊಟ್ಟಿಲ್ಲ. ಪಾಟ್ ಹೋಲ್ ಬಗ್ಗೆ ನಮಗೆ ಹೇಳಿದ್ರು, ಈಗ ಎಲ್ಲಿ ನೋಡಿದ್ರೂ ಗುಂಡಿ ಇದೆ. ಡಿಕೆ ಶಿವಕುಮಾರ್ ಅವರೇ ಬ್ರಾಂಡ್ ಬೆಂಗಳೂರು ಅಂದ್ರಿ, ಬರೀ ಗುಂಡಿ ಬೆಂಗಳೂರು ಆಗಿದೆ. ನೀರು ಕುಡಿದು ಆರು ಜನ ಸತ್ತಿದ್ದಾರೆ. ಕಿಡ್ನಿ ಸರಿ ಇಲ್ಲ ಅಂತ ಹೇಳಿದ್ದಾರೆ. ಶಾಲೆ ಆರಂಭವಾಗಿ ಇಷ್ಟು ದಿನ ಆದ್ರೂ ಪಠ್ಯ ಪುಸ್ತಕ ಕೊಟ್ಟಿಲ್ಲ. ಕಳ್ಳ ಕಾಂಗ್ರೆಸ್‌ನವರು, ದರೋಡೆಕೋರರು. ಆಲಿಬಾಬ ಮತ್ತು 40 ಕಳ್ಳರ ಥರ ಈ ಕಾಂಗ್ರೆಸ್ ಸರ್ಕಾರ” ಎಂದು ಟೀಕಿಸಿದರು.
ಮುಂದಿನ ವಾರ ರಸ್ತೆ ತಡೆ: ವಿಜಯೇಂದ್ರ
“ಜನವಿರೋಧಿ ಸರ್ಕಾರ, ರಾಜ್ಯದಲ್ಲಿರೋ ಜನವಿರೋಧಿ ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಗೆತ್ತಿಕೊಂಡಿದೆ. ಬೆಂಗಳೂರು ಮಹಾನಗರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಆತುರದ ನಿರ್ಧಾರ, ಅವಿವೇಕದ ನಿರ್ಧಾರ ವಿರೋಧಿಸಿ ಹೋರಾಟ ತೆಗೆದುಕೊಂಡಿದೆ. ಏಕಾಏಕಿ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಆಗಿದೆ. ಲೋಕಸಭಾ ಚುನಾವಣೆ ಮೊದಲು, ಕಾಂಗ್ರೆಸ್ ಪಕ್ಷದ ಶಾಸಕರು ಹೇಳಿಕೆ ನೀಡಿದ್ರು. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ 18-20 ಸ್ಥಾನ ಗೆಲ್ಲದಿದ್ರೆ ಗ್ಯಾರಂಟಿ ನಿಲ್ಲಿಸೋದಾಗಿ ಹೇಳಿದ್ರು. ಲೋಕಸಭಾ ಚುನಾವಣೆ ಆಯ್ತು. 18-20 ಸ್ಥಾನ ಗೆಲ್ಲುವ ನಿರೀಕ್ಷೆ ಇದ್ದ ಸಿಎಂ, ಡಿಸಿಎಂಗೆ ಮುಖಭಂಗ ಆಯ್ತು. ಗ್ಯಾರಂಟಿ ನಿಲ್ಲಿಸಿದ್ರೆ ಜನ ದಂಗೆ ಏಳ್ತಾರೆ ಅಂತ ಗೊತ್ತಾಯಿತು. ಹಾಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ರು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರು.
ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರಿಗಿದ್ದ ಜನಪರ ಕಾಳಜಿ, ಸಿಎಂ ಆದ ಮೇಲೆ ಎಲ್ಲಿ ಹೋಯ್ತು? ನೀವು ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕಾರ್ಯ ಆಗಿಲ್ಲ. ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುವಾಗ ರೆವಿನ್ಯೂ ಪ್ಲಸ್ ಇತ್ತು. ಕಾಂಗ್ರೆಸ್ ಬಂದ ಒಂದೇ ವರ್ಷದಲ್ಲಿ ದಿವಾಳಿ ಅಂಚಿಗೆ ಬಂದಿದೆ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸೋ ತಾಕತ್ತು ರಾಜ್ಯದ ಜನರಿಗಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಕುಳಿತು ತೀರ್ಮಾನ ಮಾಡಿದ್ದೇವೆ. ಮುಂದಿನ ಗುರುವಾರ ರಾಜ್ಯಾದ್ಯಂತ ರಸ್ತೆ ತಡೆ ನಡೆಸಲಿದ್ದೇವೆ. ಜೆಡಿಎಸ್, ವ್ಯಾಪಾರಸ್ಥರು, ಸಂಘಟನೆಗಳ ಬೆಂಬಲ ಪಡೆಯಲಿದ್ದೇವೆ. ರಾಜ್ಯದ ಜನರು ಇವರಿಗೆ ತಕ್ಕ ಪಾಠ ಕಲಿಸಬೇಲಿದೆ” ಎಂದು ಅವರು ಆಕ್ರೋಶಿಸಿದರು.
ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ಎಲ್ಲ ಪ್ರಮುಖ ನಗರಗಳಲ್ಲಿಯೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸೇರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಹಲವು ಕಡೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!