Site icon Vistara News

Narendra Modi: ಬ್ರಿಟನ್‌ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್‌ಗೆ ಮೋದಿ ಕರೆ; ಭಾರತಕ್ಕೆ ಆಗಮಿಸುವಂತೆ ಮನವಿ!

Narendra Modi

PM Narendra Modi dials UK counterpart Keir Starmer, extends invite to visit India

ನವದೆಹಲಿ: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೀರ್‌ ಸ್ಟಾರ್ಮರ್‌ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಹಾಗೆಯೇ, ಭಾರತಕ್ಕೆ ಆಗಮಿಸುವಂತೆ ಮೋದಿ ಅವರು ಆಹ್ವಾನ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

“ನರೇಂದ್ರ ಮೋದಿ ಅವರು ಕೀರ್‌ ಸ್ಟಾರ್ಮರ್‌ ಅವರ ಜತೆ ಮಾತುಕತೆ ನಡೆಸುವಾಗ ಭಾರತ- ಬ್ರಿಟನ್‌ ದ್ವಿಪಕ್ಷೀಯ ಸಂಬಂಧ, ವ್ಯಾಪಾರ, ವ್ಯೂಹಾತ್ಮಕ ಸಹಭಾಗಿತ್ವ ಸೇರಿ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು. ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಕೂಡ ಉಲ್ಲೇಖಿಸಿದರು. ಇದಲ್ಲದೆ, ಎರಡೂ ದೇಶಗಳು ಹತ್ತಾರು ಕ್ಷೇತ್ರಗಳಲ್ಲಿ ಸಹಕಾರದಿಂದ ಕಾರ್ಯನಿರ್ವಹಿಸುವ ಕುರಿತು ಉಭಯ ನಾಯಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು” ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಕನ್ಸರ್ವೇಟಿವ್‌ ಪಕ್ಷವು ಮುಖಭಂಗ ಅನುಭವಿಸಿದ್ದು, ಕೇವಲ 81 ಸ್ಥಾನಗಳನ್ನು ಪಡೆದಿದೆ. ಫಲಿತಾಂಶ ಪ್ರಕಟವಾಗುತ್ತಲೇ ರಿಷಿ ಸುನಕ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭಾರತದ ಬಗ್ಗೆ ಸ್ಟಾರ್ಮರ್‌ ನಿಲುವೇನು?

ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್‌ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Exit mobile version