ಹೊಸದಿಲ್ಲಿ: ನರೇಂದ್ರ ಮೋದಿ (PM Narendra Modi) ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ (Prime minister) ಪ್ರಮಾಣ ವಚನ (Oath taking) ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದಾಗ ಹಿನ್ನೆಲೆಯಲ್ಲಿ ಚಿರತೆಯಂಥ (leopord) ಪ್ರಾಣಿಯೊಂದು ವೇದಿಕೆಯ ಹಿಂಭಾಗದಲ್ಲೇ ಓಡಾಡಿರುವುದು ಇದೀಗ ಕಂಡುಬಂದಿದೆ. ಸಮಾರಂಭದ ವಿಡಿಯೋದಲ್ಲಿ ಇದು ಕಂಡುಬಂದಿದ್ದು, ಇದೀಗ ಎಲ್ಲರ ಆಶ್ಚರ್ಯ, ಆತಂಕಗಳಿಗೆ ಕಾರಣವಾಗಿದೆ. ವಿಡಿಯೋ ವೈರಲ್ (viral video) ಆಗುತ್ತಿದೆ.
ಜೂನ್ 9ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಈ ಪ್ರಮುಖ ರಾಜಕೀಯ ಘಟನೆಗೆ ವಿವಿಧ ಕ್ಷೇತ್ರಗಳ ಹಲವಾರು ಪ್ರಮುಖರು ಸಾಕ್ಷಿಯಾಗಿರುವಂತೆಯೇ, ನಾಲ್ಕು ಕಾಲಿನ ಒಂದು ಅನಿರೀಕ್ಷಿತ ಅತಿಥಿಯೂ ಕಂಡುಬಂದಿರುವುದು ಅಚ್ಚರಿಗೊಳಿಸಿದೆ. ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹಜವಾಗಿ ಬಿಗಿ ಭದ್ರತೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಪ್ರಮುಖ ಚಲನಚಿತ್ರ ನಟರು ಸಾಕ್ಷಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಚಿರತೆ ಕಂಡುಬಂದಿದೆ.
Is that a wild animal in the background, strolling in the Rashtrapati Bhawan? pic.twitter.com/OPIHm40RhV
— We, the people of India (@India_Policy) June 10, 2024
ಬಿಜೆಪಿಯ ದುರ್ಗಾ ದಾಸ್ ಉಯಿಕೆ ಅವರು ಕೇಂದ್ರ ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ, ವೇದಿಕೆಯ ಹಿನ್ನೆಲೆಯಲ್ಲಿ ಬೆಕ್ಕಿನ ಸ್ವರೂಪದ ಪ್ರಾಣಿಯೊಂದು ಓಡಾಡಿದ್ದನ್ನು ಹೆಚ್ಚಿನವರು ಗುರುತಿಸಲಿಲ್ಲ. ಆದರೆ ವೇದಿಕೆಯ ಹಿಂದೆಯೇ ಅದರ ಮಿಂಚಿನ ಓಡಾಟವನ್ನು ಅನೇಕರು ಗಮನಿಸಿದರು. ದೂರದರ್ಶನದಲ್ಲಿ ಪ್ರಮಾಣವಚನ ಸಮಾರಂಭ ನೇರ ಪ್ರಸಾರವಾಗಿದ್ದು, ಇದೀಗ ಆ ಕ್ಷಣದ ವಿಡಿಯೋಗಳು ಮರುಪ್ರಸಾರವಾಗುತ್ತಿವೆ.
ಈ ವರ್ಷದ ಅತಿದೊಡ್ಡ ರಾಜಕೀಯ ಇವೆಂಟ್ ಆಗಿರುವ ಈ ಕಾರ್ಯಕ್ರಮದಲ್ಲಿ ಈ ಅನಪೇಕ್ಷಿತ, ಅನಿರೀಕ್ಷಿತ ಅತಿಥಿಯ ಆಗಮನ ಇದೀಗ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಗಮನ ಸೆಳೆಯುತ್ತಿದೆ. ಅನೇಕ X ಬಳಕೆದಾರರು ತಮ್ಮ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಹಲವರು ಅಚ್ಚರಿ ಹಾಗೂ ಆತಂಕ ಹೊರಸೂಸಿದ್ದಾರೆ.
ಆದರೂ ವಿಸ್ತಾರವಾದ ರಾಜಪಥ ಹಾಗೂ ರಾಷ್ಟ್ರಪತಿ ಭವನದ ಆವರಣದಲ್ಲಿ ಚಿರತೆ ಬಂದು ಹುದುಗಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಾಲಗುವುದಿಲ್ಲ. ʼಅಮೃತ್ ಉದ್ಯಾನ್ʼ ಎಂದು ಕರೆಯಲಾಗುವ ಉದ್ಯಾನ 15 ಎಕರೆಗಳಷ್ಟು ಹರಡಿದ್ದು, ಹಲವು ಕಡೆ ದಟ್ಟವಾದ ಕಾಡು ಇದೆ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್ ಇದರ ಮೂಲ ಆಕರ್ಷಣೆಗಳಾಗಿವೆ. ಹರ್ಬಲ್ ಗಾರ್ಡನ್, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಂಗಳು ಇಲ್ಲಿವೆ.
ಅಮೃತ್ ಉದ್ಯಾನ್‌ನ ಸಸ್ಯವರ್ಗದ ಜೊತೆಗೆ ರಾಷ್ಟ್ರಪತಿ ಭವನವು ಚಿಟ್ಟೆ ಪಾರ್ಕ್, ನವಿಲು ಪಾರ್ಕ್, ಕೊಳ ಇತ್ಯಾದಿ ಒಳಗೊಂಡಿದೆ. ವೈವಿಧ್ಯಮಯ ಪ್ರಾಣಿಗಳಿಗೂ ನೆಲೆಯಾಗಿದೆ. ಭವನದ ಆವರಣದ ಉದ್ಯಾನವು 111 ಜಾತಿಯ ಪಕ್ಷಿಗಳನ್ನೂ ಹೊಂದಿದೆ. ಸೋಮವಾರ ಮತ್ತು ನಿರ್ದಿಷ್ಟ ರಜಾದಿನಗಳನ್ನು ಹೊರತುಪಡಿಸಿ, ಅಮೃತ್ ಉದ್ಯಾನವು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿದೆ.
ಇದೀಗ ಈ ಚಿರತೆ ಎಲ್ಲಿಂದ ಬಂದಿರಬಹುದು, ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಸೆಕ್ಯುರಿಟಿ ಅದನ್ನು ಸಮಾರಂಭ ನಡೆಯುವ ಜಾಗದವರೆಗೂ ಹೇಗೆ ಬರಲು ಬಿಟ್ಟರು, ನಿಜಕ್ಕೂ ಈ ವಿಡಿಯೋದಲ್ಲಿ ಕಾಣಿಸಿರುವುದು ನಿಜವೇ ಎಂಬಿತ್ಯಾದಿ ಚರ್ಚೆಗಳು ಆರಂಭವಾಗಿವೆ. ಒಂದು ವೇಳೆ ಇಲ್ಲಿ ಚಿರತೆ ಇರುವುದು ನಿಜವೇ ಆಗಿದ್ದರೆ, ಅದು ದೇಶವಿದೇಶದ ಗಮನ ಸೆಳೆಯುವ ದೊಡ್ಡ ಸುದ್ದಿಯೇ ಆಗಲಿದೆ.
ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?