ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಡ್ಯ ರೈಲು ನಿಲ್ದಾಣ (Mandya Railway Station), ಶಿವಮೊಗ್ಗ, ಸಾಗರ, ತಾಳಗುಪ್ಪ ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ್ ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಇವುಗಳನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ನೆರವೇರಿಸಲಿದ್ದಾರೆ. ದೇಶದ 554 ರೈಲ್ವೆ ನಿಲ್ದಾಣಗಳ ನವೀಕರಣ, ಅಭಿವೃದ್ಧಿ ಕಾಮಗಾರಿ ಹಾಗೂ 1500 ಮೇಲ್ಸೇತುವೆ ಕಾಮಗಾರಿಗೆ ಅವರು ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದು, ಅವುಗಳಲ್ಲಿ ಮಂಡ್ಯ ಹಾಗೂ ಮುನಿರಾಬಾದ್ ಸೇರಿವೆ.
ಇಂದು ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ ಭಾಗಿಯಾಗಲಿದ್ದಾರೆ. ವಿವಿಧ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ವರ್ಷ ಪ್ರಧಾನಿ ಮೋದಿ ಅವರು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಇದೀಗ ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಆ ಮೂಲಕ ಮಂಡ್ಯ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮುನ್ನುಡಿ ಬರೆಯಲಿದ್ದಾರೆ.
ಶಿವಮೊಗ್ಗ: ಶಿವಮೊಗ್ಗ ಸಿಟಿ, ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. 78 ಕೋಟಿ ವೆಚ್ಚದ ಮೂರು ರೈಲ್ವೆ ನಿಲ್ದಾಣಗಳ ಉನ್ನತೀಕರಣ ಕಾಮಗಾರಿಯ ಶಂಕುಸ್ಥಾಪನೆಗೆ ದೆಹಲಿಯಿಂದ ವರ್ಚುವಲ್ ಆಗಿ ಚಾಲನೆ ಕೊಡಲಿದ್ದಾರೆ. ಈ ನಿಮಿತ್ತ ಶಿವಮೊಗ್ಗ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಂಸದ ಬಿ.ವೈ ರಾಘವೇಂದ್ರ ಭಾಗಿಯಾಗಲಿದ್ದಾರೆ.
ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್ ರೈಲ್ವೆ ನಿಲ್ದಾಣ ನವೀಕರಣ ಹಾಗೂ ಹುಲಿಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಮೋದಿಯವರಿಂದ ಚಾಲನೆ ದೊರೆಯಲಿದೆ. ʼಅಮೃತ ಭಾರತ ಯೋಜನೆʼ ಅಡಿಯಲ್ಲಿ ರೈಲ್ವೆ ನಿಲ್ದಾಣಗಳ ನವೀಕರಣ ಆಗುತ್ತಿದೆ. ಈಗಾಗಲೇ ಕೊಪ್ಪಳ ರೈಲ್ವೆ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಈಗ ಮುನಿರಾಬಾದ್ ರೈಲು ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ನಿಲ್ದಾಣ ನವೀಕರಣಗೊಳ್ಳಲಿದೆ.
ಇದನ್ನೂ ಓದಿ: Pralhad Joshi: ಮೋದಿ ಅಭಿವೃದ್ಧಿ ಪರ್ವ ಅರಿಯದವರಿಗೆ ದೇಶದ ಜನರೇ ಅವರ ಸ್ಥಾನ ತೋರಿಸಿದ್ದಾರೆ; ಜೋಶಿ ಟೀಕೆ