Site icon Vistara News

ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?

Afghanistan Girl Child

#image_title

ಅಫಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆಗೆದುಕೊಂಡ ಬಳಿಕ ಅಲ್ಲಿ ತಾಲಿಬಾನ್ ಆಡಳಿತ ಕಾಲೂರಿ ಎರಡು ವರ್ಷಗಳಾಗಿವೆ. ಅಲ್ಲಿಂದೀಚೆಗೆ ಅಲ್ಲಿನ ಹೆಣ್ಣುಮಕ್ಕಳ ಸ್ಥಿತಿ ನರಕಸದೃಶವಾಗಿದೆ. 6ನೇ ತರಗತಿಗಿಂತ ಮೇಲೆ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತೆಯೇ ಇಲ್ಲ. ಈಗ 6ನೇ ತರಗತಿಗೆ ಹೋಗುವ ಹೆಣ್ಣು ಮಕ್ಕಳನ್ನೂ ತಾಲಿಬಾನಿಗಳು ಬರ್ಬರವಾಗಿ ಪೀಡಿಸುತ್ತಿದ್ದಾರೆ. ಎರಡು ಶಾಲೆಗಳ 80 ಬಾಲಕಿಯರಿಗೆ ವಿಷ ಹಾಕಿ ಕೊಲ್ಲಲು ಮತ್ತು ಇತರ ವಿದ್ಯಾರ್ಥಿನಿಯರಲ್ಲಿ ಭಯ ಮೂಡಿಸಲು ತಾಲಿಬಾನಿಗಳು ಯತ್ನಿಸಿದ್ದಾರೆ. ಒಂದು ವರ್ಷ ಹಿಂದೆ 600 ಬಾಲಕಿಯರಿಗೆ ವಿಷಪ್ರಾಶನ ಮಾಡಲಾಗಿತ್ತು. ಅಲ್ಲಿ ಇರುವ ಆಫ್ಘನ್ ಹೆಣ್ಣು ಮಕ್ಕಳು ಮಾತ್ರವಲ್ಲ, ಇತರ ದೇಶಗಳ ಹೆಣ್ಣುಮಕ್ಕಳಿಗೆ ಕೂಡ ಶಿಕ್ಷಣದ ಸ್ವಾತಂತ್ರ್ಯವಿಲ್ಲ. ಬೀದಿಗಳಲ್ಲಿ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಮೊದಲೇ ಇಲ್ಲ. ಇದನ್ನು ವಿರೋಧಿಸಿದವರಿಗೆ ಮರಣದಂಡನೆ ಖಾತ್ರಿ.

ಅಮೆರಿಕ ಸೇರಿದಂತೆ ಜಗತ್ತಿನ ಪ್ರಬಲ ದೇಶಗಳು ಈಗ ಅಫಘಾನಿಸ್ತಾನವನ್ನು ಮರೆತೇ ಬಿಟ್ಟಿವೆ. ಮುಖ್ಯವಾಗಿ, ಪಶುಗಳಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿರುವ ಆಫ್ಘನ್ ಹೆಣ್ಣು ಮಕ್ಕಳ ಸ್ಥಿತಿಗತಿಯನ್ನು ಈಗ ಕೇಳುವವರೇ ಇಲ್ಲ. ಭವಿಷ್ಯದ ತಲೆಮಾರು ಒಳ್ಳೆಯ ಶಿಕ್ಷಣ ಪಡೆದು ದೇಶಕ್ಕೂ ಜಗತ್ತಿಗೂ ಬೆಳಕಾಗಬೇಕು ಎಂದು ಭಾವಿಸುವವರ್ಯಾರೂ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ತಾಲಿಬಾನಿಗಳಂತೆ ಯೋಚಿಸಲಾರರು. ಅಂಥ ಮನಸ್ಥಿತಿಯನ್ನು ತಡೆಯುವ ಪ್ರಯತ್ನ ಮಾಡಿಯಾರೇ ಹೊರತು, ಮತಾಂಧತೆ, ಮೂಢಾಚರಣೆಗಳನ್ನು ಪ್ರೋತ್ಸಾಹಿಸಲಾರರು. ಆಡಳಿತದಲ್ಲಿರುವವರು ಇಂಥ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು.

ಆದರೆ ವಿಪರ್ಯಾಸ ಎಂದರೆ, ಭಾರತದಲ್ಲೂ ನಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ತಾಲಿಬಾನಿ ಮನಸ್ಥಿತಿಯನ್ನು ಅಲ್ಲಲ್ಲಿ ಕಾಣುತ್ತಿದ್ದೇವೆ. ಹೆಣ್ಣುಮಕ್ಕಳು ಕಲಿತು ಮಾಡುವುದೇನೂ ಇಲ್ಲ ಎಂಬ ಸಾಂಪ್ರದಾಯಿಕ ಮನಸ್ಥಿತಿ ಒಂದೆಡೆಯಾದರೆ, ಅವರು ಶಾಲೆಗೆ ಹೋದರೂ ಹಿಜಾಬ್‌ ಧರಿಸಿಯೇ ಹೋಗಬೇಕು ಎಂಬ ಮನಸ್ಥಿತಿ ಇನ್ನೊಂದು. ಶಾಲಾ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೆ ಮತ್ತೆ ಹಿಜಾಬ್ ತೊಡಿಸುವ ಹುನ್ನಾರಕ್ಕೆ ಈಗಿನ ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡುತ್ತಿರುವ ವಿಚಿತ್ರವನ್ನು ನಾವೀಗ ಕಾಣಬಹುದಾಗಿದೆ. ಶಾಲೆ ಕಾಲೇಜುಗಳ ತರಗತಿಗಳಲ್ಲಿ ಕಲಿಕೆಯಲ್ಲಿ ಸಮಾನತೆ ಇರಲಿ, ಭೇದಭಾವ ಬೇಡ, ಮತೀಯ ವಿಚಾರಗಳೂ ಇಲ್ಲದಿರಲಿ ಎಂಬ ದೃಷ್ಟಿಯಿಂದ ಈ ಹಿಂದಿನ ಸರ್ಕಾರ ಹಿಜಾಬ್‌ ಅನ್ನು ತರಗತಿಗಳಲ್ಲಿ ನಿರ್ಬಂಧಿಸಿತ್ತು. ಕೇಸರಿ ಶಾಲನ್ನೂ ನಿರ್ಬಂಧಿಸಿತ್ತು. ಇದೀಗ ಮತ್ತೆ ಹಿಜಾಬ್‌ ಧರಿಸಿ ಬರಬಹುದು ಎಂದು ಅವಕಾಶವಿತ್ತರೆ, ಸುಧಾರಣೆಯ ಹಾದಿಯಲ್ಲಿ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಟ್ಟಂತಾಗುತ್ತದೆ. ಈಗ ಹಿಜಾಬ್ ಧರಿಸಿ ಶಾಲೆಗೆ ಹೋಗಿ ಎಂದ ಸಾಂಪ್ರದಾಯಿಕ ಮನಸ್ಥಿತಿಯವರೇ ನಾಳೆ ನಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋಗಕೂಡದು ಎಂದೂ ಹೇಳಬಹುದು. ಇದಕ್ಕೆ ಕೊನೆಯೇ ಇಲ್ಲ. ಆಫ್ಘನ್ ಹೆಣ್ಣು ಮಕ್ಕಳ ದಯನೀಯ ಸ್ಥಿತಿಯನ್ನು ನೋಡಿಯಾದರೂ ನಾವು ಪಾಠ ಕಲಿಯಬೇಕಲ್ಲವೆ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (Unicef) ಗಮನಿಸಿರುವಂತೆ, ಪ್ರಪಂಚದಾದ್ಯಂತ 12 ಕೋಟಿ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಶಿಕ್ಷಣವಂಚಿತರಾಗಿರುವ ಗಂಡುಮಕ್ಕಳ ಸಂಖ್ಯೆ 10% ಮಾತ್ರ; ಆದರೆ ಶಿಕ್ಷಣವಂಚಿತರಾಗಿರುವ ಹೆಣ್ಣುಮಕ್ಕಳ ಪ್ರಮಾಣ 25%. ಕುಟುಂಬದ ಬಡತನ, ಅಜ್ಞಾನ, ಬಾಲ್ಯವಿವಾಹ, ಲಿಂಗಾಧಾರಿತ ಹಿಂಸೆಗಳು ಈ ದುರಂತಕ್ಕೆ ಕಾರಣಗಳು. ಇದರಲ್ಲಿ ಮತಾಂಧತೆಯೂ ಸೇರಿದೆ. ಇದನ್ನು ಹೋಗಲಾಡಿಸಲು ಸೂಚನೆಗಳನ್ನು, ನೆರವನ್ನು ವಿಶ್ವಸಂಸ್ಥೆ ನೀಡುತ್ತದೆ. ನಮ್ಮ ಕಡ್ಡಾಯ ಶಿಕ್ಷಣ ಕಾಯಿದೆಯೂ ಅಂಥ ಒಂದು ಪ್ರಯತ್ನ. ಸರ್ವರಿಗೂ ಶಿಕ್ಷಣ ಎಂಬ ಹಾದಿಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಿದೆ. ಎಲ್ಲರಿಗೂ ಶಿಕ್ಷಣ ದೊರೆಯುವುದು ಎಂದರೆ ಎಲ್ಲರಿಗೂ ಸಮಾನ ಅವಕಾಶಗಳುಳ್ಳ ಭವ್ಯಸಮಾಜದ ಬಾಗಿಲು ತೆರೆದಂತೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವೂ, ಪೋಷಕರೂ ವರ್ತಿಸಬೇಕಿದೆ

Exit mobile version