200 ಯುನಿಟ್ ವರೆಗೆ ಎಲ್ಲರಿಗೂ ವಿದ್ಯುತ್ ಉಚಿತ ಎಂದು ಹೊಸ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಇದು ಆಡಳಿತ ಪಕ್ಷದ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿಗಳ ಒಂದು ಭಾಗವಾಗಿದ್ದು, ಇದಕ್ಕಿರುವ ನಿಯಮ ನಿಬಂಧನೆಗಳ ಬಗ್ಗೆ ಇನ್ನೂ ಕೆಲವು ಗೊಂದಲಗಳಿವೆ. ಅದೇ ಹೊತ್ತಿಗೆ ಇನ್ನೊಂದೆಡೆ, ಈ ತಿಂಗಳ ವಿದ್ಯುತ್ ದರ ಎರಡು ಮೂರು ಪಟ್ಟು ಹೆಚ್ಚು ಬಂದಿದೆ! ವಿದ್ಯುತ್ ಬಿಲ್ ನೋಡಿ ಗ್ರಾಹಕರು ಶಾಕ್ ಗೊಳಗಾಗಿದ್ದಾರೆ. ಒಂದು ಕಡೆ ವಿದ್ಯುತ್ ಉಚಿತ ಎಂದು ಘೋಷಿಸಿ ಇನ್ನೊಂದು ಕಡೆ ದರ ಏರಿಸಲಾಗಿದೆ ಎಂದು ಜನ ದೂರುತ್ತಿದ್ದರೆ, ಇದು ಹಳೆಯ ಬಿಜೆಪಿ ಸರ್ಕಾರ ಮಾಡಿ ಹೋಗಿರುವ ನಿರ್ಧಾರ, ನಮಗೂ ಅದಕ್ಕೂ ಸಂಬಂಧವೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ವಾದಿಸುತ್ತಿದೆ. ಆದರೆ ಬಳಕೆದಾರನಿಗೆ ಮುಖ್ಯವಾಗುವುದು ಯಾರು ಏರಿಸಿದರು ಎಂಬುದಲ್ಲ, ಆತನ ಜೇಬಿಗೆ ಎಷ್ಟು ಹೆಚ್ಚಿನ ಹೊರೆಯಾಗಲಿದೆ ಎಂಬುದು.
ವಿದ್ಯುತ್ ಬಿಲ್ ಹೆಚ್ಚಳ ಆಗಿದ್ದು ನಮ್ಮ ಅವಧಿಯಲ್ಲಿ ಅಲ್ಲ. ಮೇ 12ಕ್ಕೆ ಪರಿಷ್ಕೃತ ನೀಡಿದ್ದಾರೆ. ಅದರ ಪ್ರಕಾರ ಪ್ರತಿ ಯುನಿಟ್‌ಗೆ 70 ಪೈಸೆಯನ್ನು ಹೆಚ್ಚಿಸಿ, ಏಪ್ರಿಲ್‌ನಿಂದ ಅನ್ವಯ ಮಾಡಿದ್ದಾರೆ. ಹಿಂದಿನ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಈ ಹಿಂದಿನ ಸರ್ಕಾರ, ಕೆಇಆರ್‌ಸಿ ಆದೇಶವನ್ನು ತಡೆ ಹಿಡಿದಿಲ್ಲ. ಈ ಹಿಂದೆ ನಾಲ್ಕು ಸ್ಲಾಬ್ ಇತ್ತು. ಅದನ್ನು ಕೆಇಆರ್‌ಸಿ ಎರಡು ಸ್ಲಾಬ್‌ಗೆ ಇಳಿಸಿದೆ. 0-50, 51-100, 101-200 ಹಾಗೂ 200 ಮೇಲ್ಪಟ್ಟು ದರ ವಿಧಿಸಲಾಗುತ್ತಿತ್ತು. ಈಗ 0-100 ಹಾಗೂ 100ಕ್ಕಿಂತ ಮೇಲ್ಪಟ್ಟು ಎರಡನೇ ಸ್ಲಾಬ್ ಮಾಡಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ್ದಾರೆ. ಈಗ ಏಕಾಏಕಿ ಕೆಇಆರ್‌ಸಿ ಆದೇಶವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಮಾಡಿದ ಆದೇಶವನ್ನು ಒಪ್ಪಬೇಕು ಎನ್ನುವುದು ಕಾಯ್ದೆಯಲ್ಲಿದೆ. ಗ್ಯಾರಂಟಿ ಯೋಜನೆಯ ಹೊರೆಯನ್ನು ಯಾವುದೇ ಗ್ರಾಹಕರ ಮೇಲೆ ಹೊರಿಸುತ್ತಿಲ್ಲ. ಸರ್ಕಾರವೇ ಇದನ್ನು ಸಂಪೂರ್ಣವಾಗಿ ಭರಿಸುತ್ತದೆ ಎಂದು ಇಂಧನ ಸಚಿವ ಜಾರ್ಜ್ ಹೇಳಿದ್ದಾರೆ.
ಆದರೆ ವಿದ್ಯುತ್ ವಿಚಾರದಲ್ಲಿ ಹೀಗೆನ್ನುತ್ತಿರುವ ಸರ್ಕಾರ ಹಳೆಯ ಸರ್ಕಾರದ ಇತರ ಕೆಲ ನಿರ್ಧಾರಗಳ ಬಗ್ಗೆ ಚುರುಕಾಗಿದೆ. ಗೋ ಹತ್ಯೆ ನಿಷೇಧ ಕಾಯಿದೆ, ವನವಾಸಿ ಆಶ್ರಮಗಳಿಗೆ ನೀಡಿದ ಭೂಮಿ ವಾಪಸಾತಿ, ಹಿಜಾಬ್ ನಿಯಮ ರದ್ದತಿ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಎಲ್ಲ ಪ್ರಮುಖ ನಿರ್ಧಾರಗಳನ್ನು ವಾಪಸ್ ಪಡೆಯಲು ಈಗಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಹೀಗಿರುವಾಗ ಚುನಾವಣೆಗೆ ಕೆಲವೇ ದಿನಗಳ ಮೊದಲು ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಮಾತ್ರ ವಾಪಸ್ ಪಡೆಯಲಾಗುವುದಿಲ್ಲ ಅಂದರೆ ಹೇಗೆ? ಇದು ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರನ್ನು ಏನೇನೊ ಸಬೂಬು ಹೇಳಿ ಯಾಮಾರಿಸುವ ಪ್ರಯತ್ನ ಅಲ್ಲವೆ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತೀಯ ಕ್ರಿಕೆಟ್ ತಂಡದ ಐಸಿಸಿ ಟ್ರೋಫಿ ಬರ ನೀಗಲಿ
ತಕ್ಷಣ ಈಗಿನ ಸರ್ಕಾರ, ವಿದ್ಯುತ್ ದರ ನಿಗದಿ ಮಾಡುವ ಕೆಇಆರ್‌ಸಿಗೆ ಮನವಿ ಸಲ್ಲಿಸಿ ದರ ಕಡಿಮೆ ಮಾಡಲಿ. ವಿದ್ಯುತ್ ದರ ಏರಿಕೆ ಕೈಗಾರಿಕೆಗಳಿಗೂ ಭಾರಿ ಹೊಡೆತ ನೀಡಿದೆ. ರಾಜ್ಯವನ್ನೇ ತೊರೆದು ನೆರೆಯ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದು ಕೈಗಾರಿಕೆಗಳ ಸಂಘಟನೆಗಳು ಎಚ್ಚರಿಸಿವೆ. ಸದ್ಯ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಿಲ್ಲ. ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟು ವಿದ್ಯುತ್ ಲಭ್ಯವಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹೀಗಾಗಿಯೇ ಉಚಿತ ವಿದ್ಯುತ್ ಯೋಜನೆಗೆ ಕಾಂಗ್ರೆಸ್ ಮುಂದಾಗಿದ್ದು. ಇದೇ ತತ್ವವನ್ನು ಆಧರಿಸಿ, ವಿದ್ಯುತ್ ದರ ಏರಿಕೆಯನ್ನು ಕೈ ಬಿಡಬೇಕಿದೆ. ಒಂದು ಕಡೆ ಉಚಿತ ವಿದ್ಯುತ್ ನೀಡಿ, ಇನ್ನೊಂದು ಕಡೆ ದರ ಏರಿಸಿದರೆ ಗಣನೀಯ ಪ್ರಮಾಣದ ಬಳಕೆದಾರರಿಗೆ ಪ್ರಯೋಜನ ಸಿಗದಂತಾಗುತ್ತದೆ.