Site icon Vistara News

Prahlad Joshi: ರೈತರಿಗೆ ಗುಡ್‌ನ್ಯೂಸ್‌, ಹೆಸರು ಕಾಳು, ಸೂರ್ಯಕಾಂತಿ ಖರೀದಿಗೆ ಮುಂದಾದ ಕೇಂದ್ರ: ಪ್ರಹ್ಲಾದ್‌ ಜೋಶಿ

prahlad joshi

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ, MSP) ಯೋಜನೆಯಡಿ ರಾಜ್ಯದಲ್ಲಿ ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕೇಂದ್ರ ಸಚಿವ ಪೋಸ್ಟ್ ಹಾಕಿದ್ದಾರೆ.

‘ಕೇಂದ್ರ ಸರ್ಕಾರದಿಂದ ಹೆಸರುಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಾಲ್‌ಗೆ 8682 ರೂ ( MSP) ಅಂತೆ ಖರೀದಿಗೆ ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ‘ರಾಜ್ಯದ ಮಾರುಕಟ್ಟೆಗಳಲ್ಲಿ ಹೆಸರಿನ ಬೆಲೆ ಕುಸಿದು ರೈತರು ಬೆಳೆದ ಬೆಳೆಗೆ ಸರಿಯಾದ ಮೌಲ್ಯ ದೊರೆಯದೇ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗಾಗಿ MSP ಅಡಿ ಹೆಸರು ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು ರಾಜ್ಯದ ರೈತರ ಹೆಸರುಕಾಳು ಬೆಳೆಯನ್ನು ಬೆಲೆ ಬೆಂಬಲ ಯೋಜನೆ , Price Support Scheme (PSS) ಅಡಿ ಖರೀದಿಗೆ ಅನುಮತಿ ನೀಡಿದ್ದು 2215 MT ಹೆಸರುಕಾಳು ಬೆಳೆಯನ್ನು 8682 ಪ್ರತಿ ಕ್ವಿಂಟಲ್ ರೂಪಾಯಿಯಂತೆ ಖರೀದಿ ಮಾಡಲಾಗುವುದು ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ. ಅದೇ ರೀತಿ ಸೂರ್ಯಕಾಂತಿ ಬೆಳೆಯನ್ನು ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಖರೀದಿಸಲು ಅನುಮೋದನೆ ನೀಡಿದ್ದು 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಬೆಳೆಯನ್ನು ಕೇಂದ್ರ ಸರ್ಕಾರ ಈ ಯೋಜನೆ ಅಡಿ ಖರೀದಿಸಲಿದೆ.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಿನಂತಿಸಿದ ಪತ್ರ ದಿನಾಂಕ 21.08.24 ಕೇಂದ್ರ ಕೃಷಿ ಸಚಿವಾಲಯಕ್ಕೆ ತಲುಪಿದ ತಕ್ಷಣ ನಾನು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರನ್ನು ಭೇಟಿ ಮಾಡಿ ರಾಜ್ಯದ ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯನ್ನು ಖರೀದಿಸುವಂತೆ ವಿನಂತಿಸಿದ್ದೆ. ತಕ್ಷಣವೇ ಕೇಂದ್ರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಅನುಮತಿ ನೀಡುವಂತೆ ಸೂಚಿಸಿದರು. ಅದರಂತೆ ಕೇಂದ್ರ ಸರ್ಕಾರ ದಿನಾಂಕ 22.08.24 ರಂದು ಪತ್ರದ ಮುಖಾಂತರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಜೋಶಿ ತಿಳಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ ತಕ್ಷಣವೇ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರಿಗೆ ಧನ್ಯವಾದಗಳು. ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಕೋರುತ್ತೇನೆ. ದೇಶದ ಪ್ರತಿ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಅವರ ಪ್ರತಿ ಸಮಸ್ಯೆಗೆ ಸೂಕ್ತ ಮತ್ತು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prahlad Joshi: ಇದು 100% ಭ್ರಷ್ಟಾಚಾರದ ಸರ್ಕಾರ, ರಾಹುಲ್‌ ಗಾಂಧಿ ಬೆಂಬಲದಿಂದಲೇ ಅಕ್ರಮ: ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ

Exit mobile version