ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ (Prajwal Revanna Case) ಮತ್ತೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾಲ್ಕು ದಿನಗಳ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ 42ನೇ ಎಸಿಎಂಎಂ ಕೋರ್ಟ್ಗೆ ಶನಿವಾರ ಎಸ್ಐಟಿ ಅಧಿಕಾರಿಗಳು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಜುಲೈ 8 ರವರೆಗೆ ಪ್ರಜ್ವಲ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶ ನೀಡಿದ್ದಾರೆ.
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಪ್ರಜ್ವಲ್ ಪರ ವಕೀಲರ ಮನವಿ ಮಾಡಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡಲು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಇನ್ನು ಹೊಳೆನರಸೀಪುರ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜೂನ್ 26ರಂದು 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ವಜಾಗೊಳಿಸಿದ್ದರು. ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪವನ್ನು ಪ್ರಕರಣದಲ್ಲಿ ಸೇರಿಸಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಪ್ರಜ್ವಲ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದೀಗ ಕಸ್ಟಡಿಯಲ್ಲಿದ್ದ ಪ್ರಜ್ವಲ್‌ಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಾಲ್ಮೀಕಿ ನಿಗಮ ಹಗರಣ; ಇನ್ನೂ 10 ಕೋಟಿ ಎಸ್ಐಟಿ ವಶಕ್ಕೆ, ಇದುವರೆಗೆ ರಿಕವರಿ ಆಗಿದ್ದೆಷ್ಟು?
ಬೆಂಗಳೂರು: ವಾಲ್ಮೀಕಿ ನಿಗಮ ಬಹುಕೋಟಿ ಹಗರಣದಲ್ಲಿ (Valmiki Corporation Scam) ಇನ್ನು 10 ಕೋಟಿ ರೂ.ಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಬಾರ್‌ಗಳು, ಚಿನ್ನದ ಅಂಗಡಿಗಳಿಗೆ ವರ್ಗಾವಣೆ ಆಗಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ, ಆಂಧ್ರದಲ್ಲಿನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ಚುರುಕಗೊಳಿಸಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ರಿಕವರಿ ಮಾಡಿರುವ ಹಣ ಕೋರ್ಟ್ ಅಕೌಂಟ್‌ಗೆ ಜಮೆ ಮಾಡಲಾಗುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸಿಐಡಿ ಕಚೇರಿಯಲ್ಲಿಡುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕೋರ್ಟ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡಿದ್ದಾರೆ. ನೆನ್ನೆಯಿಂದ ದಿನಕ್ಕೆ ನಾಲ್ಕು ಕೋಟಿಯಂತೆ ಹಣ ಜಮೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 28 ಕೋಟಿ ಹಣ ರಿಕವರಿ ಆಗಿದೆ.
28 ಕೋಟಿ ಹಣವಮ್ನ ಒಟ್ಟಿಗೆ ಜಮೆ ಮಾಡೋದು ಕಷ್ಟ. ಹೀಗಾಗಿ ಅಷ್ಟು ಹಣ ಎಣಿಕೆ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ನಾಲ್ಕು ಕೋಟಿ ಹಣವನ್ನು ಮಾತ್ರ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತಿದೆ.
ಮಾರ್ಚ್ 30ರಂದು ನವೀನ್ ಜಿ ಮಾಲೀಕತ್ವದ ಜಿ.ಎನ್ ಇಂಡಸ್ಟ್ರೀಸ್ ಕಂಪನಿ ಹೆಸರಲ್ಲಿ 4.42 ಕೋಟಿ ವರ್ಗಾವಣೆ ಆಗಿತ್ತು. ವಿಜಯ್ ಕೃಷ್ಣ ಆರ್ ಮಾಲೀಕತ್ವದ ರಾಮ್ ಎಂಟರ್ ಪ್ರೈಸಸ್ ಖಾತೆಗೆ 5.7 ಕೋಟಿ ಹಣ, ರಾಘವೇಂದ್ರ ಅವರ ನೋವೆಲ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿ.ಕಂಪನಿ ಹೆಸರಿನ ಖಾತೆಗೆ 4 ಕೋಟಿ ಹಣ ವರ್ಗಾವಣೆಯಾಗಿತ್ತು. ರೇಖಾ ಎಂಬುವವರ ಮಾಲೀಕತ್ವದ ಸುಜಲ್ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ 5.63 ಕೋಟಿ ಹಣ ವರ್ಗಾವಣೆಯಾಗಿತ್ತು.
ಎಲ್ಲಾ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆಗೆದು ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆ ಓಪನ್ ಮಾಡಿದ್ದ ಆಸಾಮಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.