ಬೆಂಗಳೂರು: ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ಸಂಸದ ಪ್ರತಾಪ್ ಸಿಂಹ ಅವರು ನಗರದಲ್ಲಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಧ್ಯಮಗಳ ಮುಂದೆ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದ್ದರಿಂದ ಪ್ರತಾಪ್ ಸಿಂಹ ಅವರೊಂದಿಗೆ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಚರ್ಚೆ ನಡೆಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಬಾರಿ ಪ್ರತಾಪ್ ಸಿಂಹ ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ ಅವರು, ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ಮರಿಸಿ ಭಾವುಕರಾಗಿದ್ದರು. ಹೀಗಾಗಿ ಬಂದು ಭೇಟಿಯಾಗುವಂತೆ ಪ್ರತಾಪ್ ಸಿಂಹಗೆ ಕರ್ನಾಟಕದ ಲೋಕಸಭಾ ಚುನಾವಣಾ ಉಸ್ತುವಾರಿ ಸೂಚಿಸಿದ್ದರು.
I just had a hour long meeting with Dr. RadhaMohan Das Agarwal Sir. I have said it before n saying it again, I am nothing without @narendramodi ji. Hopefully I vl get the ticket else I vl work for the party. Thank you. pic.twitter.com/mtqlC845WT
— Pratap Simha (Modi Ka Parivar) (@mepratap) March 12, 2024
ಇದನ್ನೂ ಓದಿ | Sumalatha Ambarish : ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದ್ದು ಈಗಲ್ಲ, 3 ತಿಂಗಳ ಹಿಂದೆಯೇ ಡಿಸೈಡ್ ಆಗಿತ್ತು!
ರಾಧಾಮೋಹನ್ ದಾಸ್ ಅಗರವಾಲ್ ಭೇಟಿ ಬಳಿಕ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು, ರಾಧಾ ಮೋಹನ್ ದಾಸ್ ಅಗರವಾಲ್ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ನಾನು ಮೊದಲು, ಈಗಲೂ ಹೇಳುವೆ, ಮೋದಿ ಅವರು ಇಲ್ಲದಿದ್ದರೆ ನಾನು ಶೂನ್ಯ. ಈಗಲೂ ನನಗೇ ಟಿಕೆಟ್ ಸಿಗುವ ಭರವಸೆ ಇದೆ. ಧನ್ಯವಾದ ಎಂದು ತಿಳಿಸಿದ್ದಾರೆ.
ಯದುವೀರ್‌ಗೇ ಟಿಕೆಟ್ ಪಕ್ಕಾ; ಉಗ್ರಪ್ರತಾಪಿಯಂತೆ ಸಿಡಿದೆದ್ದ ಪ್ರತಾಪ್‌ಸಿಂಹ
ಮೈಸೂರು: ಕಳೆದ ಕೆಲವು ದಿನಗಳಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ (Mysore Lokasabha Constituency) ಟಿಕೆಟ್‌ಗಾಗಿ ಶತಪ್ರಯತ್ನ ಮಾಡಿದ್ದ ಹಾಲಿ ಸಂಸದ ಪ್ರತಾಪ್‌ಸಿಂಹ (MP Pratapsimha) ಅವರು ಈಗ ಶಸ್ತ್ರತ್ಯಾಗ ಮಾಡಿದಂತೆ ಕಂಡುಬರುತ್ತಿದೆ. ಅವರು ನಂಬಿದ ಕಾರ್ಯಕರ್ತರು, ಚಾಮುಂಡೇಶ್ವರಿ ದೇವಿಯ ಕೃಪೆಯನ್ನು ಮೀರಿ ಹೈಕಮಾಂಡ್ ಟಿಕೆಟ್ (BJP Mysore Ticket) ನಿರ್ಧಾರ ಮಾಡಿದಂತಿದೆ. ಹೀಗಾಗಿ ಅವರು ಕೂಡಾ ತಮ್ಮ ಹೋರಾಟವನ್ನು ನಿಲ್ಲಿಸಿ ಪಕ್ಷ ಹೇಳಿದ ಅಭ್ಯರ್ಥಿಯನ್ನು ಒಪ್ಪಿಕೊಳ್ಳುವ ಮನೋಸ್ಥಿತಿಗೆ ಬಂದಂತಿದೆ. ಮಂಗಳವಾರ ಮೈಸೂರಿನಲ್ಲಿ ಅವರು ಆಡಿದ ಮಾತು ಈ ಸೂಚನೆಗಳನ್ನು ನೀಡಿದೆ. ಜತೆಗೆ ಅವರು ಉಗ್ರ ಪ್ರತಾಪಿಯಾಗಿ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೂಡ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್ ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆ ಎಂದು ಹೇಳುವ ಮೂಲಕ ಅವರು ತಮಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯ ಮೊದಲ ಸುಳಿವು ನೀಡಿದರು.
MP Pratapsimha : ಯದುವೀರ್ ಜನಪ್ರತಿನಿಧಿಯಾದರೆ ಒಳ್ಳೆಯದು ಎಂದ ಪ್ರತಾಪ್‌ಸಿಂಹ
ಇದರ ಜತೆಗೆ ರಾಜವಂಶಸ್ಥ ಯದುವೀರ್‌ಗೆ (BJP Ticket for Yaduveer) ಬಿಜೆಪಿ ಟಿಕೆಟ್ ನೀಡಬಹುದು ಎಂಬ ಪರೋಕ್ಷ ಘೋಷಣೆಯನ್ನು ಸ್ವತಃ ಪ್ರತಾಪ್ ಸಿಂಹ ಅವರೇ ಮಾಡಿದ್ದಾರೆ. ʻʻರಾಜವಂಶಸ್ಥರು ಮತ್ತು ಸರ್ಕಾರದ ನಡುವೆ ವ್ಯಾಜ್ಯ ಇದೆ. ಯದುವೀರ್ ಜನಪ್ರತಿನಿಧಿಯಾದ್ರೆ ಎಲ್ಲ ಬಗೆಹರಿಯುತ್ತದೆʼʼ ಎಂದು ಹೇಳುವ ಮೂಲಕ ಯದುವೀರ್ ಅವರಿಗೇ ಟಿಕೆಟ್ ಸಿಗಲಿದೆ ಎಂದು ಪರೋಕ್ಷವಾಗಿ ಹೇಳಿದರು.
ʻʻಯದುವೀರ್ ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಇದ್ದವರು. ದೊಡ್ಡಗಡಿಯಾರದ ಬಳಿ ಬಿಜೆಪಿ ಕಾರ್ಯಕರ್ತರ ಜತೆ ಕುಳಿತು ಧಿಕ್ಕಾರ ಕೂಗುತ್ತಾರೆ. ರಾಜರಾಗಿದ್ದೂ ಪ್ರಜೆಯಾಗಲು ರೆಡಿ ಆಗಿದ್ದಾರೆʼʼ ಎಂದು ಹೇಳಿದರು ಪ್ರತಾಪ್ ಸಿಂಹ.
ಕೆಣಕುತ್ತಲೇ ಸ್ವಾಗತ ಕೋರಿದ ಪ್ರತಾಪ್ ಸಿಂಹ, ಇನ್ನು ಮೈಸೂರಿನ ಜಾಗ ಸರ್ಕಾರಕ್ಕೆ ಬರುತ್ತೆ!
ಪ್ರತಾಪ್ ಸಿಂಹ ಅವರು ಯದುವೀರ್ ಅವರಿಗೆ ಸ್ವಾಗತ ನೀಡುತ್ತಲೇ ಒಂದಿಷ್ಟು ಕೆಣಕುವ ಮಾತುಗಳನ್ನೂ ಆಡಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಹೊಸ ಪೈಪ್ ಲೈನ್ ಆಗಲು ಪ್ರಮೋದಾದೇವಿ ಒಡೆಯರ್ ಬಿಟ್ಟಿರಲಿಲ್ಲ. ಮುಂದೆ ಹೊಸ ಪೈಪ್ ಲೈನ್ ಆಗುತ್ತದೆ ಎಂದು ಕೆಣಕಿದ್ದಾರೆ ಪ್ರತಾಪ್ ಸಿಂಹ.
ಮೈಸೂರಿನ ಲಲಿತ ಮಹಲ್ ಅರಮನೆ, ಸಮೀಪದ ಹೆಲಿಪ್ಯಾಡ್ ಜಾಗ, ಸರ್ವೇ ನಂಬರ್ 4ರ ಸುಮಾರು 1200 ಎಕರೆ ಜಾಗ, ವಿಜಯಶ್ರೀಪುರದ ಮನೆಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗ ಎಲ್ಲದರ ಬಗ್ಗೆ ವ್ಯಾಜ್ಯಗಳು ಇವೆ. ಯದುವೀರ್ ಜನಪ್ರತಿನಿಧಿಯಾದ್ರೆ ಆ ಎಲ್ಲ ಜಾಗವನ್ನೂ ಜನರಿಗೆ ಬಿಟ್ಟು ಕೊಡಬೇಕಾಗುತ್ತೆ. ಹೀಗಾಗಿ ಯದುವೀರ್ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
MP Pratapsimha : ನೀವು ಅವರ ಮನೆ ಕಾಯೋ ಸ್ಥಿತಿ ಬರಬಾರದು: ಯದುವೀರ್‌ಗೆ ಟಾಂಗ್
ನಿಮ್ಮ ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯುವ ಸ್ಥಿತಿ ಬರಬಾರದು ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಅವರು ಯದುವೀರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಾಯಕರಿಗೆ ತೊಡೆ ನಡುಗುತ್ತದೆ
ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಏಕೈಕ ವ್ಯಕ್ತಿ ಪ್ರತಾಪ್ ಸಿಂಹ. ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಮ್ಮ ನಾಯಕರಿಗೆ ತೊಡೆ ನಡುಗುತ್ತದೆ ಎಂದು ಟಿಕೆಟ್ ಕಳೆದುಕೊಂಡ ಆಕ್ರೋಶದಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ದಾರೆ.
ನಾನು ದುಡ್ಡು ಮಾಡಿಲ್ಲ, ಅಡ್ಜಸ್ಟ್‌ಮೆಂಟ್ ಮಾಡಲಿಲ್ಲ!
ʻʻನಾನು ರಿಯಲ್ ಎಸ್ಟೇಟ್ ಮಾಡ್ಲಿಲ್ಲ, ಕಮಿಷನ್ ಪಡೆದಿಲ್ಲ. ಭಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಅಭಿವೃದ್ಧಿ ಮಾತ್ರ ಮಾಡಿದ್ದೇನೆ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲʼʼ ಎಂದು ಪ್ರತಾಪ್ ಸಿಂಹ ನುಡಿದರು. ʻʻಈ ಹಿಂದೆ ಬಿಜೆಪಿಯಿಂದ ಗೆದ್ದವರು ಪಕ್ಷವನ್ನು ಹೇಗೆ ಕಟ್ಟಿದ್ರು, ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಿ?ʼʼ ಎಂದು ಪ್ರಶ್ನಿಸಿದರು.
ನನ್ನ ಬಗ್ಗೆ ಗಾಸಿಪ್ ಹರಡಿಸಬೇಡಿ, ನಾನು ಓಡಿ ಹೋಗಲ್ಲ
ʻʻನಾನು ಪಲಾಯನವಾದಿಯಲ್ಲ. ನಿಮ್ಮ ಜತೆ ನಾನು ಸದಾ ಇರುತ್ತೇನೆ. ಮುಂದಿನ ದಿನಗಳಲ್ಲಿ ಗಾಸಿಪ್‌ಗಳನ್ನು ಹರಡಿಸಬೇಡಿ. ಜನರ ಪ್ರೀತಿಯನ್ನು ಸಂಪಾದನೆ ಮಾಡಿದ್ದೇನೆʼʼ ಎಂದು ಅವರು ಹೇಳಿದರು.
ಇದನ್ನೂ ಓದಿ : Lok Sabha Election 2024: ಮೋದಿ ಇದ್ದ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಬಗ್ಗೆ ಚರ್ಚೆ! ಅಶೋಕ್ ಹೇಳಿದ್ದೇನು?
ಯಾರೂ ತಲೆ ಕೆಡಿಸಿಕೊಳ್ಳಬೇಡಿ, ಗಟ್ಟಿ ಪಿಂಡ ನಾನು ಎಂದ ಪ್ರತಾಪ್
ಕೊಡಗು- ಮೈಸೂರು ಬಿಜೆಪಿ ಭದ್ರ ಕೋಟೆ. ಇವತ್ತು ನನಗೆ ಟಿಕೆಟ್ ಕೊಟ್ರೆ ಮೂರು ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಆಲ್ ಪಾರ್ಟಿ ಮೆಂಬರ್ ನಾನು. ಒಳ್ಳೆಯ ಕೆಲಸ ಮಾಡಿದ್ದೇನೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ಅವಕಾಶ ಸಿಕ್ಕರೆ ಕೊಡಗಿನ ಜನರನ್ನ ಋಣ ತೀರಿಸುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
ʻʻಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಯಾರು ತಲೆ ಕಡೆಸಿಕೊಳ್ಳಬೇಡಿ. ಗಟ್ಟಿ ಪಿಂಡ ನಾನು. ಯಾವ ಹಿನ್ನೆಲೆಯೂ ಇಲ್ಲದೆ ಇಲ್ಲಿ ತನಕ ಬಂದಿದ್ದೇನೆ. ನಾನು ಪಾರ್ಟಿಗೋಸ್ಕರ ಬಾವುಟ ಕಟ್ಟುತ್ತೇನೆ. ಕೈ ಮುಗಿದು ಬೇಡಿಕೊಳ್ಳುತ್ತೇನೆ, ಲೀಡರ್ ಗಳ ಹಿಂದೆ ಹೋಗಬೇಡಿ. ಪಕ್ಷದ ಜತೆ ಹೋಗಿ. ಅಪಪ್ರಚಾರ ಮಾಡಬೇಡಿ. ನಾನೇ ಆಗಲಿ ಮತ್ತೊಬ್ಬರೇ ಆಗಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ.ʼʼ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.