Site icon Vistara News

ವಿಸ್ತಾರ ಸಂಪಾದಕೀಯ: ಪಿಯು ರಿಸಲ್ಟ್, ಬಡ ವಿದ್ಯಾರ್ಥಿಗಳ ಸಾಧನೆ ಸ್ಫೂರ್ತಿದಾಯಕ

PUC Result Is inspiration for Poor Students

PUC Result Is inspiration for Poor Students

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.74.67 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 61.88 ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿಯದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ. ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಗೆ ಮೊದಲೆರಡು ಸ್ಥಾನ ದೊರೆತಿವೆ. ಸರ್ಕಾರಿ ಕಾಲೇಜುಗಳು ಉತ್ತಮ ಫಲಿತಾಂಶ ದಾಖಲಿಸಿವೆ. ರಾಜಧಾನಿಯಂತೆ ರಾಜ್ಯದ ಇತರೆಡೆಯ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಉತ್ತಮ ಅಂಕ ಗಳಿಸಿ ಟಾಪರ್‌ಗಳಾಗಿದ್ದಾರೆ. ಇವರೆಲ್ಲರಿಗೂ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

ಉತ್ತೀರ್ಣರಾದವರು ಹಾಗೂ ಉತ್ತಮ ಅಂಕ ಗಳಿಸಿದವರಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಕ್ಷರ ಜ್ಞಾನ ಸಾಧಿಸುವ ಛಲವೊಂದಿದ್ದರೆ ಪ್ರಾದೇಶಿಕ ಹಿನ್ನೆಲೆಯಾಗಲೀ, ಬಡತನವಾಗಲೀ ಎಂದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಉದಾಹರಣೆಗೆ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿಜಯಪುರದ ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿ ರಾಹುಲ್‌ ರಾಥೋಡ್‌ ಕುಟುಂಬ ಬಡತನದ ಕಾರಣದಿಂದ ಮಹಾರಾಷ್ಟ್ರಕ್ಕೆ ಗುಳೆ ಹೋಗಿ ಕೂಲಿ ಮಾಡುತ್ತಿದೆ. ಈತ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಿದ್ದಾನೆ. ಕೊಟ್ಟೂರು, ಹರಪನಹಳ್ಳಿ, ಯಾದಗಿರಿ ಮುಂತಾದ ಹಿಂದುಳಿದ ಪ್ರದೇಶಗಳ, ಗ್ರಾಮಾಂತರದಿಂದ ಬಂದ ಹಾಗೂ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ. ಇದು ನಿಜಕ್ಕೂ ಮೆಚ್ಚಬೇಕಾದ ಸಾಧನೆ. ಇವರು ನಮ್ಮೆಲ್ಲ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕ.

ಸಹಜವಾಗಿಯೇ ಈ ಸಾಧಕರ ಮೇಲೆ ಲೈಮ್‌ಲೈಟ್‌ಗಳು ಬೀಳುತ್ತವೆ. ಆದರೆ ಇದರಾಚೆಗೆ ಅಗಾಧ ವಿದ್ಯಾರ್ಥಿ ವರ್ಗವೊಂದಿದೆ. ಇವರು ಒಂದು ಅಂಕದಿಂದ ಟಾಪರ್‌ ಸ್ಥಾನ ತಪ್ಪಿಸಿಕೊಂಡವರಿರಬಹುದು; ನಿರೀಕ್ಷೆಗಿಂತ ಕಡಿಮೆ ಅಂಕ ಪಡೆದವರಿರಬಹುದು; ಅನುತ್ತೀರ್ಣರಾದವರಿರಬಹುದು. ಇಂಥವರು ತಮ್ಮ ಬದುಕೇ ಮುಗಿಯಿತು ಎಂದುಕೊಳ್ಳಬೇಕಿಲ್ಲ. ಖಿನ್ನತೆಗೊಳಗಾಗುವುದು, ದುಡುಕಿ ಅನಾಹುತ ಮಾಡಿಕೊಳ್ಳುವುದು ಬೇಕಿಲ್ಲ. ವಿದ್ಯಾರ್ಥಿನಿಯೊಬ್ಬಳು ಅನುತ್ತೀರ್ಣಳಾದ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ವರದಿ ಬಂದಿದೆ; ಇದು ಆಘಾತ, ದುಃಖದ ವಿಷಯ. ಬದುಕಿ ಉಳಿದರೆ ಕಟ್ಟಿಕೊಳ್ಳಬಹುದಾಗಿದ್ದ ಭವ್ಯ ಭವಿಷ್ಯದ ಒಂದು ಭರವಸೆ ಆಕೆಯಲ್ಲಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಅನುತ್ತೀರ್ಣರಾದರೆ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾಗಬಹುದು; ಕಡಿಮೆ ಅಂಕ ಬಂದರೆ ಮರುಮೌಲ್ಯಮಾಪನ ಮಾಡಿಸಬಹುದು. ಕಲಿಕೆಯ ದಾರಿಯಲ್ಲಿ ಇವ್ಯಾವುದೂ ತಡೆಗಳೇ ಅಲ್ಲ. ಕಡಿಮೆ ಅಂಕ ತೆಗೆದೂ ಜೀವನದಲ್ಲಿ ಸಾಧನೆ ಮಾಡಿದವರ ಪಟ್ಟಿ ದೊಡ್ಡದಿದೆ. ಫೇಲಾದರೂ ದೊಡ್ಡ ಉದ್ಯಮಗಳನ್ನು ಕಟ್ಟಿ ಸಾಧಕರೆನಿಸಿದವರಿದ್ದಾರೆ. ಅಂದರೆ ಪಿಯುಸಿ ಪರೀಕ್ಷೆ ಎಂಬುದು ಬದುಕಿನ ಒಂದು ಹಂತವೇ ಹೊರತು ಅದೇ ಎಲ್ಲವೂ ಅಲ್ಲ. ಅದರಾಚೆಗೂ ವಿಸ್ತಾರವಾದ ಬದುಕಿನ ಅವಕಾಶಗಳು ತೆರೆದೇ ಇವೆ.

ಇದನ್ನೂ ಓದಿ: 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ; ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ, ಡಿಕೆಶಿ ಅಭಿನಂದನೆ

ಆದರೆ ಇದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಆದ್ದರಿಂದಲೇ ಪಿಯುಸಿ ಪರೀಕ್ಷೆ ಎಂದರೆ ವಿಪರೀತ ಒತ್ತಡ ಸೃಷ್ಟಿಯಾಗುತ್ತದೆ. ಇತ್ತೀಚೆಗಂತೂ 90%ಗಿಂತ ಅಧಿಕ ಅಂಕಗಳು ಎಂಬುದು ಅತೀ ಸಾಮಾನ್ಯವಾಗಿ ಹೋಗಿದೆ. ಹೀಗಾಗಿ 80%ಗಿಂತ ಕಡಿಮೆ ಅಂಕ ಪಡೆದ ಮಕ್ಕಳು ಕೂಡ ಫೇಲಾದವರಂತೆ ಗಾಬರಿಗೀಡಾಗುವುದನ್ನು ನಾವು ಕಾಣಬಹುದು. ಕುಟುಂಬ, ಕಾಲೇಜು, ಸಮಾಜದ ಒತ್ತಡಗಳು ಉಂಟುಮಾಡುವ ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡಲಾಗದೆ ಹೋದ ವಿದ್ಯಾರ್ಥಿಗಳು ಖಿನ್ನತೆಗೆ ಗುರಿಯಾಗುತ್ತಾರೆ. ಇಂಥ ಮಕ್ಕಳಿಗೆ ಸೂಕ್ತ ಕೌನ್ಸೆಲಿಂಗ್‌ ದೊರೆಯಬೇಕು. ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸುವ ಪೋಷಕರು ಕೂಡ ಇಲ್ಲಿ ಅಪಾಯಕ್ಕೆ ಕಾರಣೀಭೂತರು. ಪೋಷಕರು ಇಂಥವರನ್ನು ಅನಾದರಕ್ಕೆ ಈಡುಮಾಡದೆ ಸಹಜವಾಗಿ ನೋಡಿಕೊಂಡಾಗ ಅನಗತ್ಯ ಅನಾಹುತಗಳು ತಪ್ಪುತ್ತವೆ.

Exit mobile version