ಮುಂಬೈ: ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್ (Pooja Khedkar) ಅವರ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ. ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್ ಡಾಕ್ಯುಮೆಂಟ್ ತಯಾರಿಸಿದ ಆರೋಪಗಳನ್ನೂ ಎದುರಿಸುತ್ತಿದ್ದಾರೆ.
ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್ ಕಲೆಕ್ಟರ್) ವಾಶಿಂಗೆ ವರ್ಗಾವಣೆಗೊಂಡಿರುವ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್ ಡಾಕ್ಯುಮೆಂಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್ ಟೆಸ್ಟ್ ಪ್ರಕಾರ ಪೂಜಾ ಖೇಡ್ಕರ್ ಅವರು ಫಿಟ್ ಇದ್ದಾರೆ ಎಂದು ಹೇಳಲಾಗುತ್ತಿದೆ. 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
#WATCH | Maharashtra: On FIR filed against her parents for allegedly threatening a local farmer, trainee IAS officer Pooja Khedkar says, "I have said earlier also that I cannot comment on this. Rules do not allow me to say anything. I cannot share anything with the media,… pic.twitter.com/LWhvta3vA7
— ANI (@ANI) July 15, 2024
ವಯಸ್ಸಿನ ಕುರಿತೂ ಸುಳ್ಳು ದಾಖಲೆ
ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ.
27 ಸಾವಿರ ರೂ. ದಂಡ ಬಿದ್ದಿದ್ದೇಕೆ?
ಅಧಿಕಾರದ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಜತೆಗೆ ಸಂಚಾರ ದಟ್ಟಣೆ ನಿಯಮಗಳ ಉಲ್ಲಂಘನೆಯಲ್ಲೂ ಮುಂದಿದ್ದಾರೆ. ವಾಶಿಂ ಮಹಿಳಾ ಪೊಲೀಸರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಪೂಜಾ ಖೇಡ್ಕರ್ ಅವರು ಎರಡು ತಾಸು ಚರ್ಚಿಸಿದ್ದಾರೆ. ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗದಿದ್ದರೂ, ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 27 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅದರ ನೋಟಿಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಪೂಜಾ ಖೇಡ್ಕರ್ ಪ್ರತಿಕ್ರಿಯೆ ಏನು?
ನಕಲಿ ದಾಖಲೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಮೊದಲ ಬಾರಿಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಯಾರೇ ಆಗಲಿ, ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯೇ. ಮಾಧ್ಯಮಗಳ ವರದಿಗಳು, ತೀರ್ಪುಗಳು ನಾನು ಏನೆಂಬುದನ್ನು ತೀರ್ಮಾನಿಸುವುದಿಲ್ಲ. ತನಿಖೆಗೆ ರಚನೆಯಾಗಿರುವ ಸಮಿತಿಯ ತೀರ್ಮಾನದ ಬಳಿಕವೇ ಸತ್ಯ ಏನೆಂಬುದು ಗೊತ್ತಾಗುತ್ತದೆ. ಮಾಧ್ಯಮಗಳು ಅಥವಾ ಜನರು ನನ್ನನ್ನು ತೀರ್ಮಾನಿಸುವುದಿಲ್ಲ” ಎಂದು ಮಾಧ್ಯಮಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್