ನವದೆಹಲಿ: ಜೂನ್ 4 ರಂದು ಷೇರು ಮಾರುಕಟ್ಟೆ ಏಕಾಏಕಿ ಪತನಗೊಂಡು (Stock market Crash) ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವುದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಸೇರಿಕೊಂಡು ಮಾಡಿರುವ ಹಗರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗುರುವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು ಈ ಬಗ್ಗೆ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯ ಬಗ್ಗೆ ಏಕೆ ಹೇಳಿಕೆ ನೀಡಿದ್ದರು. ಭಾರತೀಯ ಚುನಾವಣಾ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಆಗಿದೆ ಎಂದು ಹೇಳಿದರು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಷೇರುಗಳನ್ನು ತಿರುಚಿದ್ದಕ್ಕಾಗಿ ಸೆಬಿಯಿಂದ ತನಿಖಗೆ ಒಳಪಟ್ಟಿರುವ ವ್ಯವಹಾರ ಗುಂಪಿನ ಒಡೆತನದ ಒಂದೇ ಮಾಧ್ಯಮಕ್ಕೆ ಅವರಿಬ್ಬರೂ ಏಕೆ ಸಂದರ್ಶನ ನೀಡಿದರು ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಲೋಕ ಚುನಾವಣೆಯ ಸಮಯದಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರು ಷೇರು ಮಾರುಕಟ್ಟೆಯ ಬಗ್ಗೆ ಹೇಳಿಕೆ ನೀಡಿದ್ದು ಇದೇ ಮೊದಲ ಬಾರಿಗೆ. ನಾವು ಈ ಬಗ್ಗೆ ತನಿಖೆ ನಡೆಸಲು ಜಂಟಿ ಸಮಿತಿಯನ್ನು ಒತ್ತಾಯಿಸುತ್ತೇವೆ. ಇದು ಹಗರಣ ಎಂದು ನಮಗೆ ಮನವರಿಕೆಯಾಗಿದೆ. ಭಾರತೀಯ ಚಿಲ್ಲರೆ ಹೂಡಿಕೆದಾರರ ವೆಚ್ಚದಲ್ಲಿ ಯಾರೋ ಸಾವಿರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಇದಕ್ಕೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಕುಮ್ಮಕ್ಕು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೇ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಹೊಸ ಎತ್ತರವನ್ನು ತಲುಪಲಿದೆ ಎಂದು ಹೇಳಿದ್ದರು. ಜೂನ್ 4 ರಂದು, ಬಿಜೆಪಿ ದಾಖಲೆಯ ಮತಗಳೊಂದಿಗೆ ಗೆಲ್ಲುವಾಗ ಷೇರು ಮಾರುಕಟ್ಟೆಯೂ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ಎನ್ಡಿಟಿವಿ ಸಂದರ್ಶನದಲ್ಲಿ ಹೇಳಿದ್ದರು.
ಮೇ 13 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ನನ್ನ ಅಭಿಪ್ರಾಯದಲ್ಲಿ, ಜೂನ್ 4 ರೊಳಗೆ ಷೇರು ಖರೀದಿಸಿ. ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಹೆಚ್ಚಾಗಲಿದೆ” ಎಂದು ಎನ್ಡಿಟಿವಿ ಸಂದರ್ಶನದಲ್ಲೇ ಹೇಳಿದ್ದರು. ಈ ಮಾಧ್ಯಮ ವ್ಯವಹಾರ ಸಂಸ್ಥೆಯೊಂದರ ಒಡೆತನಕ್ಕೆ ಸೇರಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಹುಲ್ ಹೇಳಿದ್ದಾರೆ.
ದೊಡ್ಡ ಹಗರಣ : ರಾಹುಲ್ ಆರೋಪ
ಕೋಟ್ಯಂತರ ಜನರ ದುಡ್ಡು ನಷ್ಟವಾಗಲು ನೇರವಾಗಿ ಪ್ರಧಾನಿ, ಕೇಂದ್ರ ಗೃಹ ಸಚಿವರೇ ಹೊಣೆ. ಚುನಾವಣಾ ಫಲಿತಾಂಶಗಳ ನೈಜ ಡೇಟಾವನ್ನು ಹೊಂದಿರುವವರು, ಐಬಿ ವರದಿಗಳನ್ನು ಹೊಂದಿರುವವರು, ತಮ್ಮದೇ ಆಂತರಿಕ ಅಂಕಿ ಅಂಶಗಳನ್ನು ಹೊಂದಿರುವವರು, ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಸಲಹೆ ನೀಡಿರುವುದು ದೊಡ್ಡ ಹಗರಣ ಎಂದು ಅವರು ಆರೋಪಿಸಿದ್ದಾರೆ.
ಷೇರು ಖರೀದಿ ಮಾಡಲು ಹೇಳಿಕೆ ನೀಡುವ ಮೊಲದು ಚುನಾವಣೋತ್ತರ ಸಮೀಕ್ಷೆಗಳನ್ನು ಬಿತ್ತರಿಸಲಾಯಿತು. ನೈಜ ಅಂಕಿ- ಅಂಶ ಮೋದಿ ಸೇರಿದಂತೆ ಬಿಜೆಪಿಯ ಬಳಿ ಇತ್ತು. ಅವರಿಗೆ ಏನಾಗುತ್ತದೆ ಎಂದು ಗೊತ್ತಿತ್ತು. ಆದರೂ 5 ಲಕ್ಷ ಹೂಡಿಕೆದಾರರಿಗೆ ವಂಚನೆ ಮಾಡಲಾಗಿದೆ ಎಂದು ರಾಹುಲ್ ಅರೋಪಿಸಿದ್ದಾರೆ.