ಮತದಾನ ಮಾಡಲು ಹೆಚ್ಚಿನ ಕಡೆ ಸುಶಿಕ್ಷಿತ ಯುವಜನತೆಯ ನಿರುತ್ಸಾಹ ಯಾಕೆ?
ರಾಜಮಾರ್ಗ ಅಂಕಣ: ಭಾರತದಲ್ಲಿ ಚುನಾವಣೆಗಳನ್ನು ʼಪ್ರಜಾಪ್ರಭುತ್ವದ ಹಬ್ಬ’ (Festivals of democracy) ಎಂದು ಕರೆಯುತ್ತೇವೆ. ದೇಶ ಅಭಿವೃದ್ಧಿ ಆಗಬೇಕಾದರೆ ಸಧೃಡ ಸರಕಾರಗಳು ಬೇಕು. ದೇಶದ ನಾಗರಿಕರು ಚುನಾವಣೆಯಲ್ಲಿ ಬಂದು ಮತ ಚಲಾವಣೆ (Voting) ಮಾಡಬೇಕಾದದ್ದು, ಬಲಿಷ್ಟ ಸರಕಾರ ರಚಿಸಬೇಕಾದದ್ದು ಅನಿವಾರ್ಯ.
ದೇಶದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತ ಸರಕಾರದ SVEEP (Systematic Voters’ Education and Electoral Participation) ಎಂಬ ಸಮಿತಿಯು ಇದೆ. ಅದು ವಿವಿಧ ಮಾಧ್ಯಮಗಳ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತದೆ. ಮನರಂಜನಾ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳುತ್ತದೆ. ಆದರೂ ನಗರ ಪ್ರದೇಶಗಳ ಕೆಲವು ಕಡೆಗಳಲ್ಲಿ ಮತದಾನದ ಪ್ರಮಾಣವು ಉತ್ತೇಜಕವಾಗಿ ಇಲ್ಲ. ವಿಶೇಷವಾಗಿ ಹೆಚ್ಚಿನ ವಿದ್ಯಾವಂತ ಯುವಜನತೆಯು ಮತದಾನದಲ್ಲಿ ಉತ್ಸಾಹ ತೋರುತ್ತಿಲ್ಲ ಎನ್ನುವ ಆರೋಪಗಳು ಇವೆ. ಈ ಬಾರಿ ಕೂಡ ಹೆಚ್ಚು ಟೆಕ್ಕಿಗಳು ಇರುವ ಬೆಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲು ಆಗಿದೆ. ಯಾಕೆ ಹೀಗೆ? ಯಾರು ಗೆದ್ದರೂ ನಮಗೇನು ಲಾಭ ಎಂಬ ನಕಾರಾತ್ಮಕ ಧೋರಣೆ ಯಾಕೆ?
ಭಾರತದಲ್ಲಿ ಕಡ್ಡಾಯ ಮತದಾನ ಯಾಕೆ ಸಾಧ್ಯವಿಲ್ಲ?
ಭಾರತವು ಡೆಮಾಕ್ರಟಿಕ್ ರಾಷ್ಟ್ರ ಅನ್ನುವುದು ಈ ಪ್ರಶ್ನೆಗೆ ಉತ್ತರ. ಅದಕ್ಕೆ ಪೂರಕವಾದ ಕಾನೂನು ಇನ್ನೂ ಭಾರತದಲ್ಲಿ ರೂಪುಗೊಂಡಿಲ್ಲ. ಇಲ್ಲಿ ಯಾರಿಗೂ ಒತ್ತಡ ಹಾಕುವ ಹಾಗಿಲ್ಲ. ಮನ ಒಲಿಕೆಯ ಮೂಲಕ ಮಾತ್ರ ಯಾರನ್ನಾದರೂ ಮತ ಹಾಕಲು ಕರೆದುಕೊಂಡು ಬರಬಹದು. ನಾಗರಿಕರನ್ನು ಎಜೂಕೆಟ್ ಮಾಡುವುದು ಸುಲಭದ ಕೆಲಸ ಅಲ್ಲ.
ಸ್ವೀಪ್ ಸಮಿತಿಯು ಅವಿರತ ಪ್ರಯತ್ನಗಳು
SVEEP ಸಮಿತಿಯು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಆಕರ್ಷಕವಾದ ಮತದಾನ ಕೇಂದ್ರಗಳನ್ನು ತೆರೆದಿದೆ. ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನವನ್ನು ಮಾಡುವ ಸೌಲಭ್ಯವನ್ನು ನೀಡಿದೆ. ಮತದಾನ ಸಿಬ್ಬಂದಿಗಳಿಗೆ EDC ಮತ್ತು ಪೋಸ್ಟಲ್ ಬ್ಯಾಲೆಟ್ ಸೌಲಭ್ಯಗಳನ್ನು ನೀಡಿದೆ. BLOಗಳು ಮನೆ ಮನೆಗೆ ಹೋಗಿ ಗುರುತು ಚೀಟಿ ನೀಡಲು ಆದೇಶ ಮಾಡಿದೆ. No Voter to be Left Behind ಎಂಬ ಘೋಷಣಾ ವಾಕ್ಯದಡಿಯಲ್ಲಿ ಅವಿರತ ಜಾಗೃತಿ ಕೆಲಸಗಳು ಆಗಿವೆ. ಯಕ್ಷಗಾನ, ಬೀದಿ ನಾಟಕ ಮೊದಲಾದ ಮಾಧ್ಯಮಗಳು ಕೂಡ ಬಳಕೆ ಆಗಿವೆ. ಆದರೂ ಕೆಲವು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ ಎನ್ನುವುದು ನೋವಿನ ಸಂಗತಿ.
31 ರಾಷ್ಟ್ರಗಳಲ್ಲಿ ಕಡ್ಡಾಯ ಮತದಾನ ಇದೆ!
ಈ ರಾಷ್ಟ್ರಗಳಲ್ಲಿ ಹೆಚ್ಚಿನವು ಡೆಮಾಕ್ರಟಿಕ್ ರಾಷ್ಟ್ರಗಳೇ ಆಗಿವೆ. ಆದರೆ ಅಲ್ಲಿ ಕಡ್ಡಾಯ ಮತದಾನದ ಕಾನೂನು ಜಾರಿಯಲ್ಲಿದೆ. ಮತ ಹಾಕದವರಿಗೆ ಕಾರಣ ಕೇಳುವ ನೋಟೀಸ್ ಸರಕಾರ ಜಾರಿ ಮಾಡುವುದರಿಂದ ಹಿಡಿದು, ದಂಡ ವಿಧಿಸುವ, ಸರಕಾರದ ಸೌಲಭ್ಯಗಳನ್ನು ತಡೆಹಿಡಿಯುವ ಕಾನೂನು ಇವೆ. ಬೆಲ್ಜಿಯಂ, ಆಸ್ಟ್ರೇಲಿಯ, ಆಸ್ಟ್ರಿಯಾ, ಅರ್ಜೆಂಟೀನ, ಬೊಲಿವಿಯಾ, ಯುಕ್ರೇನ್, ಬ್ರೆಜಿಲ್, ಈಜಿಪ್ಟ್, ಗ್ರೀಸ್, ಇಟಲಿ, ಮೆಕ್ಸಿಕೊ, ಫಿಲಿಫೈನ್ಸ್, ಸಿಂಗಾಪುರ, ಥೈಲ್ಯಾಂಡ್, ಟರ್ಕಿ, ಸ್ವಿಜರ್ಲ್ಯಾಂಡ್….ಮೊದಲಾದ ರಾಷ್ಟ್ರಗಳು ಕಡ್ಡಾಯ ಮತದಾನದ ಕಾನೂನು ಹೊಂದಿವೆ. ಪರಿಣಾಮವಾಗಿ ಅಲ್ಲಿ ಬಲಿಷ್ಠ ಸರಕಾರಗಳು ಆರಿಸಿ ಬರುತ್ತವೆ ಮತ್ತು ಜನರ ಜೀವನಮಟ್ಟ ತುಂಬಾ ಸುಧಾರಣೆ ಆಗಿದೆ.
ಬೆಲ್ಜಿಯಂ ಮಾದರಿ
ಅಲ್ಲಿ ಮೊದಲ ಬಾರಿಗೆ ಮತದಾನ ಮಾಡದಿದ್ದರೆ 4,000 ಯುರೋ ದಂಡ ಸರಕಾರ ವಿಧಿಸುತ್ತದೆ. ಎರಡನೇ ಬಾರಿಗೆ ಮತದಾನ ಮಾಡದಿದ್ದರೆ 10,000 ಯುರೋ ದಂಡ ಕಟ್ಟಬೇಕು. ಎಲ್ಲ ಸರಕಾರಿ ಸೌಲಭ್ಯಗಳು ಅವರಿಗೆ ಕಡಿತ ಆಗುತ್ತವೆ. 4 ಬಾರಿ ಮತದಾನಕ್ಕೆ ಬಾರದಿದ್ದರೆ ಅವರ ಹೆಸರು ಮತದಾನ ಪಟ್ಟಿಯಲ್ಲಿ ಕಡಿತ ಆಗುತ್ತದೆ.
ಬೊಲಿವಿಯಾ ಮಾದರಿ
ಈ ರಾಷ್ಟ್ರವು ಮತದಾನ ಮಾಡುವರಿಗೆ ಒಂದು ಗುರುತು ಚೀಟಿ ನೀಡುತ್ತದೆ. ಅವರಿಗೆ ಮಾತ್ರ ರೇಶನ್ ಸೌಲಭ್ಯ, ವಿದ್ಯುತ್, ವಸತಿ, ಇತರ ಸರಕಾರಿ ಸೌಲಭ್ಯಗಳು ದೊರೆಯುತ್ತವೆ. ಸರಕಾರಿ ನೌಕರರು ಮತದಾನಕ್ಕೆ ಬಾರದಿದ್ದರೆ ಅವರಿಗೆ ವೇತನ ಕಡಿತ ಆಗುತ್ತದೆ.
ಆಸ್ಟ್ರೇಲಿಯ ಮಾದರಿ
ಈ ದೇಶದಲ್ಲಿ ಶಕ್ತಿಶಾಲಿ ಡೆಮಾಕ್ರಟಿಕ್ ಸರಕಾರ ಇದೆ. ಮತದಾನ ಕಡ್ಡಾಯ ಕಾನೂನು ಇದೆ. ಮತದಾನದ ಪ್ರಮಾಣ ಅಲ್ಲಿ 96%ಕ್ಕಿಂತ ಕೆಳಗೆ ಬಂದದ್ದೇ ಇಲ್ಲ!
ಗ್ರೀಸ್ ಮಾದರಿ
ಅಲ್ಲಿ ಮತದಾನ ಮಾಡದಿದ್ದರೆ ಸರಕಾರ ನಾಗರಿಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತದೆ. ತೃಪ್ತಿಕರವಾದ ಉತ್ತರ ಬಾರದೆ ಹೋದರೆ ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್ಪೋರ್ಟ್ ರದ್ದು ಆಗುತ್ತದೆ.
ಸಿಂಗಾಪುರ ಮಾದರಿ
ಇಲ್ಲಿ ಬಲಿಷ್ಟವಾದ ಸರಕಾರ ಇದೆ. ಮತದಾನ ಮಾಡದವರಿಗೆ ಕಾರಣ ಕೇಳಿ ನೋಟಿಸ್ ನೀಡಿದ ನಂತರ ತೃಪ್ತಿಕರ ಉತ್ತರ ಬಾರದಿದ್ದರೆ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗುತ್ತದೆ.
ಅಮೇರಿಕಾ ಮಾದರಿ
ಇಲ್ಲಿ ಯಾವುದೇ ಕಡ್ಡಾಯ ಕಾನೂನು ಇಲ್ಲ. ವೋಟಿಂಗ್ ದಿನ ರಜೆಯು ಕೂಡ ಇಲ್ಲ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮತದಾನ ಕೇಂದ್ರಗಳು ತೆರೆದಿರುತ್ತವೆ. ಅಲ್ಲಿ ಮತದಾನದ ಪ್ರಮಾಣವು ಉತ್ತಮವಾಗಿಯೇ ಇದೆ.
ಭಾರತದಲ್ಲಿ ಕಡ್ಡಾಯ ಮತದಾನದ ಕಾನೂನು ಜಾರಿಗೆ ಬರಲಿ ಮತ್ತು ಸುಸ್ಥಿರ ಸರಕಾರಗಳು ಆರಿಸಿಬರಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ ಆಗಬೇಕು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?