Site icon Vistara News

ರಾಜಮಾರ್ಗ ಅಂಕಣ: ಆತನ ಬದುಕು ಆತನ ಸಿನೆಮಾ ಕಥೆಗಳಿಗಿಂತ ರೋಚಕ!

vikram ರಾಜಮಾರ್ಗ ಅಂಕಣ

ತಮಿಳು ಸೂಪರ್ ಸ್ಟಾರ್ ಚೀಯಾನ್ ವಿಕ್ರಮ್ ಬದುಕೇ ಒಂದು ಹೋರಾಟ!

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಈ ತಮಿಳು ಸಿನೆಮಾ ನಟನ (Tamil Cinema Actor) ಬದುಕೇ ಒಂದು ಅದ್ಭುತವಾದ ಹೋರಾಟ. ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು ಸತತವಾದ ಸೋಲು, ಹತಾಶೆ, ನೋವು, ಸವಾಲುಗಳು ಎಲ್ಲವನ್ನೂ ಗೆದ್ದುಬಂದಿರುವ ಚಿಯಾನ್ ವಿಕ್ರಮ್ (chiyaan vikram) ಅವರ ಬದುಕಿನಿಂದ ನಾವು ಕಲಿಯುವುದು ಬೆಟ್ಟದಷ್ಟು ಇದೆ!

ಆತನಿಗೆ ಹೆತ್ತವರು ಇಟ್ಟ ಉದ್ದವಾದ ಹೆಸರು ಜಾನ್ ಕೆನ್ನೆಡಿ ವಿನೋದ್ ರಾಜ್ ಎಂದು! ಆತನ ತಂದೆ ವಿಕ್ಟರ್ ಕೂಡ ಸಿನೆಮಾ ನಟ ಆಗುವ ಹುಚ್ಚನ್ನು ತಲೆಗೇರಿಸಿಕೊಂಡು ಮನೆ ಬಿಟ್ಟು ಓಡಿ ಹೋದವರು. ಅದರಿಂದಾಗಿ ಈ ಮಗನಿಗೂ ಚಿಕ್ಕಂದಿನಿಂದ ಹೀರೋ ಆಗುವ ಕನಸು! ‘ಓದಿನ ಕಡೆ ಹೆಚ್ಚು ಗಮನ ಕೊಡು’ ಎಂದು ಅಪ್ಪ ಎಷ್ಟೇ ಬೈದರೂ ಸಿನೆಮಾದ ಹುಚ್ಚು ಬಿಡಲಿಲ್ಲ.

ಸೇಲಂ ಕಾಲೇಜಿನಲ್ಲಿ ಓದುವಾಗ ಅಸಂಗತ ನಾಟಕಗಳನ್ನು ಮಾಡಿ ಹುಡುಗ ಹಲವಾರು ಬಹುಮಾನ ಗೆದ್ದಿದ್ದ ವಿಕ್ರಂ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ, MBA ಮುಗಿಸಿದರೂ ಕೂಡ ಅವನ ಮನಸ್ಸು ಬೆಳ್ಳಿ ಪರದೆಯ ಕಡೆಗೆ ಇತ್ತು. ಆದರೆ ಅವನ ದುರದೃಷ್ಟವು ಅವನಿಗಿಂತ ಮುಂದೆ ಇತ್ತು!

ಬದುಕಿನ ಗತಿಯನ್ನೇ ಬದಲಿಸಿದ ಬೈಕ್ ಅಪಘಾತ!

ಒಮ್ಮೆ ನಾಟಕವನ್ನು ಮುಗಿಸಿ ರಾತ್ರಿ ಬೈಕಲ್ಲಿ ಮನೆಗೆ ಬರುತ್ತಿದ್ದಾಗ ಭೀಕರವಾದ ಅಪಘಾತ. ಲಾರಿ ಬಂದು ಡಿಕ್ಕಿ ಹೊಡೆದು ಅವನ ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು! ದೇಹದಲ್ಲಿ ನೂರಾರು ಗಾಯಗಳು. ಬಲಗಾಲು ಪೂರ್ತಿ ಹುಡಿ ಹುಡಿ ಆಗಿತ್ತು! ವೈದ್ಯರು ಕಾಲು ಕತ್ತರಿಸಲೇ ಬೇಕು, ಇಲ್ಲವಾದರೆ ಜೀವಕ್ಕೆ ಅಪಾಯ ಅಂದರು!

ಆದರೆ ಅರೆಪ್ರಜ್ಞೆಯ ಕೋಮಾ ಅವಸ್ಥೆಯಲ್ಲಿ ಕೂಡ ಆತ ಚೀರಿ ಹೇಳಿದ್ದ ‘ನನಗೆ ಹೀರೋ ಆಗಲೇ ಬೇಕು. ಎಷ್ಟು ನೋವು ಬೇಕಾದರೂ ಸಹಿಸಿಕೊಳ್ಳಲು ನಾನು ರೆಡಿ. ಆದರೆ ಕಾಲು ಕತ್ತರಿಸುವುದು ಬೇಡ!’

ಅವನ ಕೆಟ್ಟ ಹಟದ ಮುಂದೆ ವೈದ್ಯಕೀಯ ವಿಜ್ಞಾನವೇ ಸೋತಿತು!

ಆತನ ದೇಹದಾದ್ಯಂತ 23 ಸಂಕೀರ್ಣ ಶಸ್ತ್ರಚಿಕಿತ್ಸೆಗಳು ನಡೆದವು. ಅಸಾಧ್ಯವಾದ ನೋವು ಸಹಿಸಿಕೊಂಡು ಆತ ಮೂರು ವರ್ಷ ಆಸ್ಪತ್ರೆಯ ಹಾಸಿಗೆಯಲ್ಲಿ ಶವದ ಹಾಗೆ ಬಿದ್ದುಕೊಂಡಿದ್ದ!

ನಂತರ ಒಂದು ವರ್ಷ ಕ್ಲಚಸ್ ಹಿಡಿದುಕೊಂಡು ನಡೆಯಲು ಅಭ್ಯಾಸ ಮಾಡಿದ್ದ! ನಂತರ ಗೋಡೆ ಹಿಡಿದು ನಡೆಯುವ ಅಭ್ಯಾಸ. ಸ್ವಂತ ಕಾಲಿನ ಮೇಲೆ ನಿಂತು ನಡೆಯಲು ಆತನಿಗೆ ನಾಲ್ಕು ವರ್ಷಗಳೇ ಬೇಕಾದವು! ಹೀಗೆ ನಾಲ್ಕು ವರ್ಷಗಳ ಕಾಲ ಜಿದ್ದಿಗೆ ಬಿದ್ದು ಕಾಲು ಉಳಿಸಿಕೊಂಡು ಆತ ಮತ್ತೆ ಸಿನೆಮಾದ ಕಡೆಗೆ ಮುಖ ಮಾಡಿದ್ದ. ಆತನ ಸಂಕಲ್ಪ ಶಕ್ತಿಯ ಮುಂದೆ ದುರದೃಷ್ಟವು ಕೂಡ ಸೋತಿತ್ತು!

ಅಪ್ನಾ ಟೈಮ್ ಆಯೆಗಾ…

ಮುಂದೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಆತ ಸೂಕ್ತ ಪಾತ್ರಕ್ಕಾಗಿ ಕಾದು ಕೂತ. ಸಣ್ಣ ಪುಟ್ಟ ಪಾತ್ರಗಳು, ಪೋಷಕ ಪಾತ್ರಗಳು, ಧಾರಾವಾಹಿಗಳು ಎಲ್ಲವನ್ನೂ ಮಾಡಿದ. ಜಾಹೀರಾತುಗಳನ್ನು ಕೂಡ ಮಾಡಬೇಕಾಯಿತು. ತುಂಬಾ ನಿರೀಕ್ಷೆ ಇರಿಸಿದ್ದ ಎನ್ ಕಾದಲ್ ಕಣ್ಮಣಿ ಮತ್ತು ಮೀರಾ ಎಂಬ ಎರಡು ಸಿನೆಮಾಗಳು ಸೋತು ಹೋದವು. ಖಾಲಿ ಕಿಸೆ ಮತ್ತು ಹಸಿವಿನ ತೀವ್ರತೆಗಳು ಆತನಿಂದ ಡಬ್ಬಿಂಗ್ ಕೆಲಸವನ್ನು ಮಾಡಿಸಿತು! ಆದರೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದ ಕಾದು ಕೂತ! ಮಾಡೆಲಿಂಗ್ ಕೂಡ ಮಾಡಿದ.

1999ರ ಹೊತ್ತಿಗೆ ತಮಿಳಲ್ಲಿ ‘ಸೇತು’ ಎಂಬ ಕಡಿಮೆ ಬಜೆಟಿನ ಸಿನೆಮಾ ಆರಂಭವಾಯಿತು. ವಿಕ್ರಮ್ ಆ ಸಿನೆಮಾದಲ್ಲಿ ಭಾರೀ ಸವಾಲಿನ ಪಾತ್ರವನ್ನು ಮಾಡಬೇಕಾಗಿತ್ತು. ಶೂಟಿಂಗ್ ಎರಡು ವರ್ಷಗಳಷ್ಟು ದೀರ್ಘ ಕಾಲ ನಡೆಯಿತು. ವಿಕ್ರಮ್ ತನ್ನ ಪಾತ್ರಕ್ಕಾಗಿ ತಲೆಯನ್ನು ನುಣ್ಣನೆ ಬೋಳಿಸಿಕೊಂಡ. ಉದ್ದುದ್ದ ಉಗುರುಗಳನ್ನು ಬಿಟ್ಟ. ಕೇವಲ ಬೀಟ್ರೂಟ್ ರಸ, ಒಂದು ಚಪಾತಿ, ಮೊಟ್ಟೆಯ ಬಿಳಿ ತಿರುಳು ತಿಂದು ದೇಹದ ತೂಕವನ್ನು ಹದಿನಾರು ಕೆಜಿಯಷ್ಟು ಇಳಿಸಿಕೊಂಡ! ಎರಡು ವರ್ಷ ಬೇರೆ ಯಾವ ಸಿನೆಮಾ ಕೂಡ ಒಪ್ಪಿಕೊಳ್ಳದೆ ಆ ಪಾತ್ರದಲ್ಲಿ ಮುಳುಗಿಬಿಟ್ಟ! ಸೇತು ಸಿನೆಮಾ ಸೂಪರ್ ಹಿಟ್ ಆಯ್ತು! ಅಲ್ಲಿಂದ ಮುಂದೆ ವಿಕ್ರಮ್ ಸೂಪರ್ ಸ್ಟಾರ್ ಆದ! ಜನ ಅವನನ್ನು ಚಿಯಾನ್ (ಸೇತು ಸಿನೆಮಾದಲ್ಲಿ ವಿಕ್ರಂ ಮಾಡಿದ ಪಾತ್ರದ ಅಡ್ಡ ಹೆಸರದು) ವಿಕ್ರಮ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು. ಮುಂದೆ ಸೇತು ಸಿನೆಮಾವು ಭಾರತದ ಹಲವು ಭಾಷೆಗೆ ರೀಮೇಕ್ ಆಯಿತು. (ಕನ್ನಡದಲ್ಲಿ ಸುದೀಪ್ ಅಭಿನಯದ ಹುಚ್ಚ ಸಿನೆಮಾ).

ವಿಕ್ರಂ ಮಾಡಿದ ಪಾತ್ರಗಳು ಒಂದರ ಹಾಗೆ ಇನ್ನೊಂದಿಲ್ಲ.

ಮುಂದೆ ಸಾಲಾಗಿ ಕಠಿಣ ಸವಾಲಿನ ಪಾತ್ರಗಳು! ಹುಚ್ಚ, ತಲೆ ಹಿಡುಕ, ರೌಡಿ, ಡಾನ್, ಬುದ್ದಿಮಾಂದ್ಯ, ಕುಡುಕ, ಪೋಲಿಸ್, ಪಿಂಪ್, ವಕೀಲ, ಸೀರಿಯಲ್ ಕಿಲ್ಲರ್, ವೃದ್ಧ, ಪತ್ತೇದಾರ, ಆದಿವಾಸಿ, ಕಾಲೇಜ್ ಲವರ್, ಮಾಡೆಲ್ ಮೊದಲಾದ ಸಂಕೀರ್ಣವಾದ ಪಾತ್ರಗಳನ್ನು ಗೆಲ್ಲಿಸಿದ ಚಿಯಾನ್!

ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಆತನಿಗೆ ಈಗ 58 ವರ್ಷ ತುಂಬಿದೆ! ಆತನ ಯಶಸ್ಸಿನ ಗ್ರಾಫ್ ಇಂದಿಗೂ ಏರುಗತಿಯಲ್ಲಿ ಇದೆ. ಆತನಷ್ಟು ವೈವಿಧ್ಯಮಯ ಪಾತ್ರಗಳನ್ನು ಭಾರತದ ಬೇರೆ ಯಾವ ನಟನೂ ಮಾಡಿಲ್ಲ ಎನ್ನುವುದು ವಿಕ್ರಮ್ ಹೆಚ್ಚುಗಾರಿಕೆ!

ಆತನ ಸಿನೆಮಾಗಳನ್ನು ಬೇರೆ ಭಾಷೆಗೆ ರಿಮೇಕ್ ಮಾಡುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಮಾಡಿದರೂ ಸಕ್ಸೆಸ್ ಆದ ಉದಾಹರಣೆ ಕಡಿಮೆ. ಯಾಕೆಂದರೆ ವಿಕ್ರಮ್ ಪ್ರತೀ ಒಂದು ಪಾತ್ರಕ್ಕೂ ಬೇರೆ ಬೇರೆ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾನೆ. ಅವನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ನಡಿಗೆ, ನಗು, ಹಾವಭಾವ ಬೇರೆ ಬೇರೆ ಪಾತ್ರಕ್ಕೆ ಬೇರೆ ಬೇರೆ ರೀತಿ ಆಗಿರುತ್ತದೆ. ವಿಕ್ರಮ್ ಅಭಿನಯವನ್ನು ಯಾರಿಂದಲೂ ಕಾಪಿ ಮಾಡಲು ಸಾಧ್ಯವೇ ಇಲ್ಲ!

ಆತನ ಪಿತಾಮಗನ್, ಐ, ದಿಲ್, ಜೆಮಿನಿ, ಅರುಲ್, ಸಾಮಿ, ಆನಿಯನ್, ರಾವಣ್, ಕಿಂಗ್, ಧೂಳ್, ಕಾಸಿ, ಕಾಂತಾ, ಪೊನ್ನಿಯನ್ ಸೆಲ್ವಂ, ಕೋಬ್ರಾ, ತಿರುಮಗಲ್……..ಮೊದಲಾದ ಸಿನೆಮಾಗಳನ್ನು ನೋಡಿದರೆ ವಿಕ್ರಮ್ ಎಷ್ಟು ಅದ್ಭುತ ನಟ ಎಂಬ ಅರಿವಾಗುತ್ತದೆ. ಆತನಿಗೆ ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ಬಾರಿ ರಾಜ್ಯಪ್ರಶಸ್ತಿ, ಪಿತಾಮಗನ್ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ, ತಮಿಳುನಾಡಿನಲ್ಲಿ ಮಹಾನ್ ಕಲಾವಿದರಿಗೆ ಮಾತ್ರ ನೀಡುವ ಕಲೈಮಾಮಣಿ ಪ್ರಶಸ್ತಿ, ಎಲ್ಲವೂ ಈಗಾಗಲೇ ದೊರೆತಿವೆ!

ತಾನೇ ಸ್ಥಾಪನೆ ಮಾಡಿರುವ ವಿಕ್ರಮ್ ಫೌಂಡೇಶನಿನ ಮೂಲಕ ಆತ ನಡೆಸುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳು, ಉಚಿತ ಹೃದಯದ ಸರ್ಜರಿಗಳು, ಹಲವು ವಿಶೇಷ ಮಕ್ಕಳ ಶಾಲೆ, ನೇತ್ರದಾನ ಸಂಕಲ್ಪ ಶಿಬಿರಗಳು…….ಇವುಗಳ ಬಗ್ಗೆ ಬರೆಯುತ್ತ ಹೋದಂತೆ ವಿಕ್ರಮ್ ನನಗೆ ವಿಶ್ವಮಾನವರಾಗಿ ಕಾಣುತ್ತಾರೆ.

ವಿಕ್ರಮ್ ಬಹುಮುಖಿ ಪ್ರತಿಭೆಯ ‘ತಂಗಲಾನ್ ‘ ಬಂದಿದೆ.

ವಿಕ್ರಮ್ ಅಭಿನಯಿಸಿದ ತಂಗಲಾನ್ ಸಿನೆಮಾ ಈ ವಾರ ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಆದರೆ ವಿಕ್ರಮ್ ಅಭಿನಯವು ಮತ್ತೆ ಅದ್ಭುತವಾಗಿ ಮೂಡಿಬಂದಿದೆ. ಆ ಸಿನೆಮಾವನ್ನು ಒಮ್ಮೆ ನೋಡಿ ವಿಕ್ರಮ್ ಪ್ರತಿಭೆಗೆ ಜೈ ಎಂದು ಹೇಳೋಣ ಅಲ್ಲವೇ?

ಆತನ ಬದುಕಿನ ಕಥೆಯು ಆತನ ಸಿನೆಮಾಗಳ ಕಥೆಗಿಂತ ಹೆಚ್ಚು ರೋಚಕವಾಗಿದೆ ಎಂದು ನನಗೆ ಅನಿಸುತ್ತದೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಹೇಗಿದ್ದವನು ಹೇಗಾಗಿ ಹೋದ ಕ್ರಿಕೆಟರ್ ವಿನೋದ್ ಕಾಂಬ್ಳಿ?

Exit mobile version