ಜುಲೈ 17 ವಿಶ್ವ ಇಮೋಜಿ ದಿನ
ರಾಜಮಾರ್ಗ ಅಂಕಣ: ʻಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ’ ಎನ್ನುತ್ತದೆ ಚೈನೀಸ್ (Chinese) ಭಾಷೆ. ನಾವು, ನೀವೆಲ್ಲ ವಾಟ್ಸ್ಯಾಪ್ (WhatsApp), ಫೇಸ್ ಬುಕ್ (Facebook), ಟ್ವಿಟರ್ (Twitter) ಎಲ್ಲ ಕಡೆಗಳಲ್ಲಿ ಮೆಸೇಜ್ (Message) ರವಾನೆ ಮಾಡುವಾಗ, ಸ್ವೀಕಾರ ಮಾಡುವಾಗ ಈ ಚಂದ ಚಂದವಾದ ಎಮೋಜಿಗಳನ್ನು (Emojis) ಬಳಕೆ ಮಾಡಿಯೇ ಮಾಡಿರುತ್ತೇವೆ. ಉದ್ದುದ್ದ ಮೆಸೇಜ್ ಟೈಪಿಸಲು ಆಸಕ್ತಿ ಇಲ್ಲದೆ ಹೋದಾಗ, ಸಮಯದ ಕೊರತೆ ಇದ್ದಾಗ ಒಂದು ಎಮೋಜಿ ಹಾಕಿ ಭಾವನೆಗಳನ್ನು ವ್ಯಕ್ತಪಡಿಸಿದ್ದು ಇದೆ. ಈ ಎಮೋಜಿಗಳು ಉಂಟುಮಾಡುತ್ತಿರುವ ಮೂಡ್ ಇದೆಯಲ್ಲ ಅದು ವರ್ಣನಾತೀತ ಮತ್ತು ಭಾವನಾತೀತ.
ಈ ಎಮೋಜಿಗಳು ಇಂದು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ!
ಈ ಎಮೋಜಿಗಳಿಗೂ ಒಂದು ಇತಿಹಾಸ ಇದೆ ಎಂದರೆ ನಮಗೆ ನಂಬುವುದು ಕಷ್ಟ ಆಗಬಹುದು. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.
ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.
ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.
ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು. ಹಲವು ಮೊಬೈಲ್ ಕಂಪೆನಿಗಳು ಎಮೋಜಿಗಳನ್ನು ಜನಪ್ರಿಯ ಮಾಡಲು ಕೇವಲ ಅವುಗಳನ್ನು ಬಳಸಿ ಪ್ರೇಮಪತ್ರಗಳನ್ನು ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದವು! ಚಿತ್ರಕಲಾ ಸ್ಪರ್ಧೆಗಳೂ ಹಲವೆಡೆ ನಡೆದವು.
ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.
ಜುಲೈ 17 ಎಮೋಜಿ ದಿನ ಯಾಕೆ?
11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಈಗ ಜನಪ್ರಿಯವಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ನ ಭಾಗವಾಗಿ ಕೂಡ ಈ ಎಮೋಜಿಗಳು ಉಂಟುಮಾಡುತ್ತಿರುವ ಪ್ರಭಾವವನ್ನು ಮತ್ತು ಸಂತೋಷವನ್ನು ನಾನು ಮತ್ತೆ ಬರೆಯುವ ಅಗತ್ಯವೇ ಇಲ್ಲ.
ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…