Site icon Vistara News

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

vishwas ks rajamarga

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Exit mobile version