Site icon Vistara News

Rajya Sabha Election: ರಾಜ್ಯಸಭಾ ಅಖಾಡಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಎಂಟ್ರಿ

Kupendra Reddy

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಐದನೇ ಅಭ್ಯರ್ಥಿಯಾಗಿ, ಜೆಡಿಎಸ್ ಬಿಜೆಪಿ ಮೈತ್ರಿ (JDS- BJP) ಮೂಲಕ ಕುಪೇಂದ್ರ ರೆಡ್ಡಿ (D. Kupendra Reddy) ಅಖಾಡಕ್ಕೆ ಇಳಿದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ (Nomination) ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ತೆರವಾಗಲಿರುವ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಅಭ್ಯರ್ಥಿಯಾದ ನಾರಾಯಣ ಬಾಂಡಗೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಜೆಡಿಎಸ್- ಬಿಜೆಪಿ ನಿನ್ನೆ ನಿರ್ಧಾರ ಮಾಡಿದ್ದವು. ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಆಯ್ಕೆ ನಡೆಯುತ್ತಿದ್ದು, ಐದನೇ ಅಭ್ಯರ್ಥಿ ಕಣಕ್ಕೆ ಇಳಿದ್ರೆ ಚುನಾವಣೆ ನಡೆಯುವುದು ಪಕ್ಕಾ ಆಗಲಿದೆ.

ರಾತ್ರಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರ ಮಾತುಕತೆ ನಡೆದಿದೆ. ಜೆಡಿಎಸ್ ಶಾಸಕರ ಮತಗಳು, ಬಿಜೆಪಿಯ ಹೆಚ್ಚುವರಿ ಮತಗಳು ಕುಪೇಂದ್ರ ರೆಡ್ಡಿಗೆ ದೊರೆಯಲಿವೆ. ಜೊತೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪುಟ್ಟಸ್ವಾಮಿಗೌಡ ಮತಗಳ ಮೇಲೆ ಕಣ್ಣು ಇದೆ. ಈಗಾಗಲೇ ನಿನ್ನೆ ಗಾಲಿ ಜನಾರ್ದನ ರೆಡ್ಡಿ ಜೊತೆ ಮಾತುಕತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಕುಪೇಂದ್ರ ರೆಡ್ಡಿ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್ ಶಾಸಕ ಶರಣ್ ಗೌಡ ಕುಂದಕೂರ್ ಮೈತ್ರಿಯನ್ನು ವಿರೋಧಿಸಿದ್ದು ಜೆಡಿಎಸ್- ಬಿಜೆಪಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತದಾನ ಮಾಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡುವಂತೆ ಕುಪೇಂದ್ರ ರೆಡ್ಡಿಗೆ ಸೂಚನೆ ನೀಡಲಾಗಿದೆ. ಕ್ರಾಸ್ ವೋಟಿಂಗ್ ಆದರೆ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವು ನಿಶ್ಚಿತವಾಗುತ್ತದೆ.

ನಾರಾಯಣ ಬಾಂಡಗೆ ನಾಮಪತ್ರ

ಬಿಜೆಪಿ ರಾಜ್ಯಸಭಾ ಚುನಾವಣೆ ಅಭ್ಯರ್ಥಿಯಾದ ನಾರಾಯಣ ಬಾಂಡಗೆ ಅವರು ಇಂದು ಬೆಳಿಗ್ಗೆ 11.00 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 121ರಲ್ಲಿ ವಿಧಾನಸಭೆಯ ಕಾರ್ಯದರ್ಶಿಯವರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರಾದ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿರಲಿದ್ದಾರೆ.

ಲೆಕ್ಕಾಚಾರದ ಪ್ರಕಾರ ಬಿಜೆಪಿ ಒಂದು ಸ್ಥಾನವನ್ನು ಪಡೆಯುವುದು ನಿಶ್ಚಿತವಾಗಿದ್ದು, ಅಭ್ಯರ್ಥಿ ಹೆಸರನ್ನು ವರಿಷ್ಠರೇ ಪ್ರಕಟಿಸಿದ್ದಾರೆ. ಒಂದು ಸ್ಥಾನಕ್ಕೆ 46 ಮತ ನಿಗದಿಗೊಳಿಸಿದರೆ ಬಿಜೆಪಿಯಲ್ಲಿ ಮೊದಲ ಪ್ರಾಶಸ್ತ್ಯದ 20 ಮತಗಳು ಉಳಿಯುತ್ತವೆ. ಜೆಡಿಎಸ್‌ನ 19 ಮತಗಳ ಜತೆಗೆ ಜನಾರ್ದನ ರೆಡ್ಡಿ ಕೈ ಜೋಡಿಸಿದರೆ 40 ಮತ ಗಳಿಸಬಹುದು. ಆದರೆ ಕೊರತೆ ಮತಗಳನ್ನು ಹೇಗೆ ತುಂಬಿಕೊಳ್ಳುತ್ತಾರೆಂಬ ಪ್ರಶ್ನೆ ಉದ್ಭವವಾಗಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆಗೆ ಮಿಲಿಂದ್ ದಿಯೋರಾರನ್ನು ಕಣಕ್ಕಿಳಿಸಿದ ಶಿಂಧೆ ಶಿವಸೇನೆ

Exit mobile version