Site icon Vistara News

Swami Smaranananda Maharaj: ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್‌ ನಿಧನ; ಮೋದಿ ಸಂತಾಪ

Swami Smaranananda Maharaj with narendra modi

ಕೋಲ್ಕತ್ತಾ: ವಿಶ್ವವಿಖ್ಯಾತ ರಾಮಕೃಷ್ಣ ಮಠ (Ramakrishna Math) ಮತ್ತು ರಾಮಕೃಷ್ಣ ಮಿಷನ್ (Ramakrishna Mission) ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್ (Swami Smaranananda Maharaj) ಅವರು ಸೋಮವಾರ ಸಂಜೆ ಕೋಲ್ಕತ್ತಾದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಸ್ವಾಮಿ ಸ್ಮರಣಾನಂದ ಮಹಾರಾಜ್ (Swami Smaranananda Maharaj) ಅವರು ಸ್ವಾಮಿ ಆತ್ಮಸ್ಥಾನಂದರ ಮರಣದ ನಂತರ 2017ರಲ್ಲಿ ರಾಮಕೃಷ್ಣ ಮಿಶನ್‌ನ 16ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸ್ವಾಮಿ ಸ್ಮರಣಾನಂದರು 1929ರಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿ ಜನಿಸಿದರು. ಅವರು 1952ರಲ್ಲಿ, ತಮ್ಮ 22ನೇ ವಯಸ್ಸಿನಲ್ಲಿ ರಾಮಕೃಷ್ಣ ಮಿಷನ್‌ಗೆ ಸೇರಿದರು.

ಅವರು ಇತ್ತೀಚೆಗೆ ವಯಸ್ಸಿಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಅವರನ್ನು ರಾಮಕೃಷ್ಣ ಮಿಷನ್ ನಡೆಸುತ್ತಿರುವ ದಕ್ಷಿಣ ಕೋಲ್ಕತ್ತಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಮಾರ್ಚ್ 5ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗ, ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಅವರ ನಿಧನದ ನಂತರ ಪ್ರಧಾನ ಮಂತ್ರಿಗಳು Xನಲ್ಲಿ ಸಂತಾಪ ಸೂಚಕ ಸಂದೇಶವನ್ನು ಪ್ರಕಟಿಸಿದ್ದಾರೆ.

“ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಪೂಜ್ಯ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದ ಜಿ ಮಹಾರಾಜ್ ಅವರು ತಮ್ಮ ಜೀವನವನ್ನು ಆಧ್ಯಾತ್ಮಿಕತೆ ಮತ್ತು ಸೇವೆಗೆ ಮುಡಿಪಾಗಿಟ್ಟರು. ಅವರು ಅಸಂಖ್ಯಾತರ ಹೃದಯ ಮತ್ತು ಮನಸ್ಸಿನ ಮೇಲೆ ಅಳಿಸಲಾಗದ ಗುರುತು ಮೂಡಿಸಿದ್ದಾರೆ. ಅವರ ಸಹಾನುಭೂತಿ ಮತ್ತು ಬುದ್ಧಿವಂತಿಕೆಯು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಕಳೆದ ವರ್ಷಗಳಲ್ಲಿ ನಾನು ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೆ. ನಾನು 2020ರಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಕೆಲವು ವಾರಗಳ ಹಿಂದೆ ಕೋಲ್ಕತ್ತಾದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ನನ್ನ ಸಹಾನುಭೂತಿ ಬೇಲೂರು ಮಠದ ಅಸಂಖ್ಯಾತ ಭಕ್ತರೊಂದಿಗೆ ಇವೆ. ಓಂ ಶಾಂತಿ” ಎಂದು ಮೋದಿ ಬರೆದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ಸೂಚಿಸಿದ್ದಾರೆ. “ರಾಮಕೃಷ್ಣ ಮಠ ಮತ್ತು ಮಿಷನ್‌ನ ಪೂಜ್ಯ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದಜಿ ಮಹಾರಾಜ್ ಅವರ ನಿಧನದ ಸುದ್ದಿಯಿಂದ ತೀವ್ರ ದುಃಖವಾಗಿದೆ. ಈ ಮಹಾನ್ ಸನ್ಯಾಸಿ ತನ್ನ ಜೀವಿತಾವಧಿಯಲ್ಲಿ ರಾಮಕೃಷ್ಣರ ಮಠಕ್ಕೆ ಜಾಗತಿಕ ಆಧ್ಯಾತ್ಮಿಕ ನಾಯಕತ್ವವನ್ನು ನೀಡಿದ್ದಾರೆ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರಿಗೆ ಸಾಂತ್ವನದ ಮೂಲವಾಗಿದ್ದಾರೆ. ಅವರ ಎಲ್ಲಾ ಸಹ ಸನ್ಯಾಸಿಗಳು, ಅನುಯಾಯಿಗಳು ಮತ್ತು ಭಕ್ತರಿಗೆ ನನ್ನ ಆಳವಾದ ಸಂತಾಪವನ್ನು ತಿಳಿಸುತ್ತೇನೆ,” ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದ್ದು, ಸ್ವಾಮಿ ಸ್ಮರಣಾನಂದ ಜಿ ಮಹಾರಾಜ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಡ್‌ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ

Exit mobile version