ಬೆಂಗಳೂರು: ನೋ ಯುವರ್ ಕಸ್ಟಮರ್ (ಕೆವೈಸಿ) ಅಪ್ಡೇಟ್ ಮಾಡುವುದಾಗಿ ಹೇಳಿ ಖಾತೆಯಿಂದ ದುಡ್ಡು ಎಗರಿಸುವ ಜಾಲಗಳು ಕಾರ್ಯಾಚರಿಸುತ್ತಿವೆ. ಇಂಥ ಮಹಾನ್ ವಂಚನೆ ತಡೆಗಟ್ಟಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಎಚ್ಚರಿಕೆ ವಹಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಗರಿಕರಿಗೆ ಸೂಚನೆ ನೀಡಿದೆ. ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಗ್ರಾಹಕರು ಬಲಿಯಾಗುತ್ತಿರುವ ಘಟನೆಗಳು ಮತ್ತು ವರದಿಗಳ ಹಿನ್ನೆಲೆಯಲ್ಲಿ, ಆರ್ಬಿಐ ಫೆಬ್ರವರಿ 02 ರಂದು ಬಿಡುಗಡೆ ಮಾಡಿದೆ. ಇದರೊಂದಿಗೆ ಸೆಪ್ಟೆಂಬರ್ 13, 2021 ರಂದು ಹೊರಡಿಸಿದ ತನ್ನ ಮಾಹಿತಿಯನ್ನು ಮತ್ತೊಮ್ಮೆ ಪ್ರಕಟಿಸಿದೆ.
KYC ಅಪ್ಡೇಟ್ ಹೆಸರಲ್ಲಿ ವಂಚನೆ ಹೇಗೆ ಮಾಡುತ್ತಾರೆ?
ಕೆವೈಸಿ ವಂಚಕರು ಸಾಮಾನ್ಯವಾಗಿ ಫೋನ್ ಕರೆಗಳು, ಎಸ್ಎಂಎಸ್. ಇಮೇಲ್ ಸೇರಿದಂತೆ ಅನಪೇಕ್ಷಿತ ಸಂಪರ್ಕವನ್ನು ಮಾಡುತ್ತಾರೆ. ಈ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ. ಲಾಗಿನ್ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ಅನಧಿಕೃತವಲ್ಲದ ಲಿಂಕ್ಗಳನ್ನು ಕಳುಹಿಸಿ ಅದನ್ನು ಫೋನ್ಗೆ ಹಾಕಿಸಿಕೊಂಡು ಅಲ್ಲಿಂದ ಎಲ್ಲ ಮಾಹಿತಿಗಳನ್ನು ಕದಿಯುತ್ತಾರೆ.
ವಂಚಕರು ಬಹುಪಾಲು ಬೆದರಿಕೆ ತಂತ್ರವನ್ನು ಒಡ್ಡುತ್ತಾರೆ. ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ. ಹಣ ಕಳೆದುಕೊಳ್ಳುತ್ತೀರಿ ಎಂದೆಲ್ಲ ಗ್ರಾಹಕರನ್ನು ಭಯಭೀತಿಗೊಳಿಸುತ್ತಾರೆ. ಮಾಹಿತಿ ಕೊಡದೇ ಹೋದರೆ ಖಾತೆಯಲ್ಲಿರುವ ಹಣ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ.
ಕೆಲವು ವಂಚರು ನಯವಾಗಿ ಮಾತನಾಡಿ ಒಂದು ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಒತ್ತುವ ಮೂಲಕ ಅನಧಿಕೃತವಾಗಿ ಖಾತೆಗೆ ಪ್ರವೇಶ ಪಡೆಯುವಂತೆ ಹೇಳುತ್ತಾರೆ. ಅಲ್ಲದೆ ಮೋಸದ ಚಟುವಟಿಕೆಯಲ್ಲಿ ತೊಡಗುತ್ತಾರೆ.
ಗ್ರಾಹಕರು ಏನು ಮಾಡಬೇಕು?
- ಕೆವೈಸಿ ನವೀಕರಣಕ್ಕಾಗಿ ಯಾವುದೇ ವಿನಂತಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ತಕ್ಷಣವೇ ಕಡೊದೆ ದೃಢೀಕರಣ ಅಥವಾ ಸಹಾಯಕ್ಕಾಗಿ ನೇರವಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬೇಕು.
- ಬ್ಯಾಂಕ್, ಹಣಕಾಸು ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ಕಸ್ಟಮರ್ ಕೇರ್ ಫೋನ್ ಸಂಖ್ಯೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಪಡೆದುಕೊಳ್ಳಬೇಕು.
- ಯಾವುದೇ ಸೈಬರ್ ವಂಚನೆ ಘಟನೆ ಸಂಭವಿಸಿದಲ್ಲಿ ತಕ್ಷಣ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಮಾಹಿತಿ ನೀಡಿ ಖಾತೆಯನ್ನು ನಿಷ್ಕ್ರಿಯಗೊಳಿಸಬೇಕು.
- ಕೆವೈಸಿ ವಿವರಗಳನ್ನು ನವೀಕರಿಸಲು ಲಭ್ಯವಿರುವ ವಿಧಾನಗಳು ಅಥವಾ ಆಯ್ಕೆಗಳನ್ನು ತಿಳಿದುಕೊಳ್ಳುವುದಕ್ಕೆ ಬ್ಯಾಂಕ್ ಶಾಖೆಯೊಂದಿಗೆ ಮಾತ್ರ ಸಂವಹನ ನಡೆಸಬೇಕು.
- ಇದನ್ನೂ ಓದಿ : EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ಈ ತಪ್ಪುಗಳನ್ನು ಮಾಡಲೇಬೇಡಿ
- ಖಾತೆ ಲಾಗಿನ್ ರುಜುವಾತುಗಳು, ಕಾರ್ಡ್ ಮಾಹಿತಿ, ಪಿನ್ ಗಳು, ಪಾಸ್ ವರ್ಡ್ ಗಳು, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಅಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ KYC ದಾಖಲೆಗಳು ಅಥವಾ KYC ದಾಖಲೆಗಳ ನಕಲು ಪ್ರತಿಗಳನ್ನು ಹಂಚಿಕೊಳ್ಳಬೇಡಿ.
- ಪರಿಶೀಲಿಸದ ಅಥವಾ ಅನಧಿಕೃತ ವೆಬ್ಸೈಟ್ಗಳು ಅಥವಾ ಅಪ್ಲಿಕೇಶನ್ಗಳ ಮೂಲಕ ಯಾವುದೇ ಗೌಪ್ಯ ಡೇಟಾ ಅಥವಾ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಮೊಬೈಲ್ ಅಥವಾ ಇಮೇಲ್ ನಲ್ಲಿ ಸ್ವೀಕರಿಸಿದ ಅನುಮಾನಾಸ್ಪದ ಅಥವಾ ಪರಿಶೀಲಿಸದ ಲಿಂಕ್ ಗಳನ್ನು ಕ್ಲಿಕ್ ಮಾಡಲೇಬಾರದು. ಅಂತಹ ಯಾವುದೇ ಮನವಿ ಸ್ವೀಕರಿಸಿದರೆ, ಗ್ರಾಹಕರು ಬ್ಯಾಂಕ್, ಶಾಖೆಗೆ ಮಾಹಿತಿ ನೀಡಬೇಕು.
ಯಾರಿಗೆ ದೂರು ನೀಡಬೇಕು?
ಹಣಕಾಸು ಸೈಬರ್ ವಂಚನೆಯ ಸಂದರ್ಭದಲ್ಲಿ, ಸಾರ್ವಜನಿಕರು ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅಥವಾ ಸೈಬರ್ ಕ್ರೈಮ್ ಸಹಾಯವಾಣಿ (1930) ಮೂಲಕ ದೂರು ದಾಖಲಿಸಬೇಕು.