Site icon Vistara News

ವಿಸ್ತಾರ ಸಂಪಾದಕೀಯ: ಅರುಣಾಚಲ ಪ್ರದೇಶದ ಸ್ಥಳಗಳ ಮರು ನಾಮಕರಣ; ಮತ್ತೆ ಚೀನಾದ ಉದ್ಧಟತನ

Renaming of places in Arunachal Pradesh; China's arrogance again

#image_title

ಭಾರತದೊಳಗಿರುವ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಪ್ರತ್ಯೇಕ ಹೆಸರಿಟ್ಟು, ಆ ಎಲ್ಲ ಪ್ರದೇಶಗಳು ದಕ್ಷಿಣ ಟಿಬೆಟ್‌ಗೆ ಸೇರಿದ್ದು ಎಂದು ಚೀನಾ ಘೋಷಿಸಿದೆ. ಇಡೀ ಅರುಣಾಚಲ ಪ್ರದೇಶವೇ ದಕ್ಷಿಣ ಟಿಬೆಟ್‌ ಎಂಬುದು ಚೀನಾದ ಹಳೇ ಪ್ರತಿಪಾದನೆ. ಆದರೆ ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ನಮಗೇ ಸೇರಿದ್ದು, ಹೆಸರು ಬದಲಿಸಿದ ಮಾತ್ರಕ್ಕೆ ವಾಸ್ತವ ಬದಲಿಸಲಾಗದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಚೀನಾದ ಸೇನೆ ಉಪಟಳ ಉಂಟುಮಾಡಿತ್ತು. ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ ನಡೆದಿದ್ದು, ಉಭಯ ಕಡೆಗಳ ಸೈನಿಕರಿಗೂ ಗಾಯಗಳಾಗಿದ್ದವು. ಅಂದರೆ ಚೀನಾ ಬರೀ ಬೊಗಳುವ ಶ್ವಾನವಲ್ಲ; ಕಚ್ಚಲೂ ಹೇಸದ ಸ್ವಭಾದ ಅದರದ್ದು. ಹೀಗಾಗಿ ಅರುಣಾಚಲದ ವಿಚಾರವನ್ನು ಎತ್ತಿ ಅದು ತಗಾದೆ ತೆಗೆಯುತ್ತ ಇರುವವರೆಗೂ ನಾವು ಕಟ್ಟೆಚ್ಚರ ವಹಿಸುತ್ತಲೇ ಇರಬೇಕಾದದ್ದು ಅಗತ್ಯ.

ಟಿಬೆಟ್‌ ಆಗಾಗ ದಲಾಯಿ ಲಾಮ ಅವರನ್ನು ನೆಪವಾಗಿಟ್ಟುಕೊಂಡು ತಗಾದೆ ಉಂಟುಮಾಡುತ್ತದೆ. ಟಿಬೆಟಿಗರ ಪರಮೋಚ್ಚ ಧರ್ಮಗುರುವಾದ ದಲಾಯಿ ಲಾಮ ಅವರಿಗೆ ಆಶ್ರಯ ಕೊಟ್ಟದ್ದು ಹಾಗೂ ಟಿಬೆಟಿಗರ ನಿರಾಶ್ರಿತ ಸರ್ಕಾರವನ್ನು ಅವರು ಭಾರತದ ಧರ್ಮಶಾಲೆಯಿಂದ ನಡೆಸುತ್ತಿರುವುದು ಅದರ ಪಾಲಿಗೆ ಇಂದಿಗೂ ಸಹಿಸಲಾಗದ ಸಂಗತಿ. ಹಾಗೆಯೇ ಇತ್ತೀಚೆಗೆ ಅವರು ಮಂಗೋಲಿಯಾದ ಬಾಲಕನೊಬ್ಬನನ್ನು ಬೌದ್ಧರ ಮೂರನೇ ಮರಮೋಚ್ಚ ಧಾರ್ಮಿಕ ನಾಯಕನಾಗಿ ನೇಮಿಸಿದ್ದು ಕೂಡ ಚೀನಾಗೆ ಕಿರಿಕಿರಿ ಉಂಟುಮಾಡಿದೆ. ಇದೆಲ್ಲದರ ಫಲವೇ ಚೀನಾದ ಈ ಹೊಸ ರಗಳೆ. ಜಿ20ಗೆ ಸಂಬಂಧಿಸಿ ಅರುಣಾಚಲ ಪ್ರದೇಶದಲ್ಲಿ ನಡೆಯುವ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಕೂಡ ಚೀನಾ ಅಧಿಕಪ್ರಸಂಗ ಮಾಡಿದೆ. ಹೀಗೆ ಮತ್ತೆ ಮತ್ತೆ ಹೊಸ ಹೊಸ ಕ್ಯಾತೆ ತೆಗೆದು ಭಾರತವನ್ನು ಪ್ರಚೋದಿಸುತ್ತಲೇ ಇರುವ ಚೀನಾದಿಂದಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ.

ಅರುಣಾಚಲ ಪ್ರದೇಶದ ಬಗೆಗೆ ಚೀನಾದ ದಾಹ ಇಂದು ನಿನ್ನೆಯದಲ್ಲ. ಅದು ಅರುಣಾಚಲದ 90,000 ಎಕರೆ ಪ್ರದೇಶವನ್ನು ತನ್ನದೆಂದು ವಾದಿಸುತ್ತದೆ. ಅರುಣಾಚಲದಲ್ಲಿ ಕೆಲವು ಕಡೆ ಗಡಿ ಸರಿಯಾಗಿ ನಿರ್ಧಾರವಾಗಿಲ್ಲ ಎಂಬುದು ನಿಜ. ಇಲ್ಲಿ ಚೀನಾ ಸೈನ್ಯ ಸುಲಭವಾಗಿ ಒಳತೂರಿ ಬರುವುದಕ್ಕೆ ಸಾಕಷ್ಟು ಆಸ್ಪದವಿದೆ ಎಂಬುದೂ ನಿಜ. 1962ರ ಯುದ್ಧದ ವೇಳೆಗೆ ಚೀನಾದ ಸೈನಿಕರು ಸುಮಾರು 20 ಕಿಲೋಮೀಟರ್‌ನಷ್ಟು ಒಳಬಂದು, ಯುದ್ಧವಿರಾಮದ ಬಳಿಕ ಹಿಂದೆ ಸರಿದಿದ್ದರು. ಆಗ ಅಂತಾರಾಷ್ಟ್ರೀಯ ಸಮುದಾಯ ಭಾರತದ ಜತೆಗೆ ನಿಂತಿತ್ತು. ಟಿಬೆಟ್‌ ವಿಚಾರದಲ್ಲಿ ದಲಾಯಿ ಲಾಮ ಅವರಿಗೆ ಆಶ್ರಯ ನೀಡಿರುವ ಭಾರತದ ಕ್ರಮ ಇಂದಿಗೂ ಚೀನಾಗೆ ಇರಸುಮುರಸು. ಭಾರತವನ್ನು ಆಗಾಗ ಕೆಣಕುವುದು ಚೀನಾದ ಯುದ್ಧತಂತ್ರಗಳಲ್ಲಿ ಒಂದು. ನೆರೆರಾಷ್ಟ್ರಕ್ಕೆ ಕಾಟ ಕೊಡುವಲ್ಲಿ ಚೀನಾದ ಯುದ್ಧನೀತಿ ಬಹುಮುಖಿಯಾಗಿದೆ. ಭಾರತದ ಸುತ್ತಮುತ್ತಲಿನ ಪುಟ್ಟ ದೇಶಗಳಿಗೆ ಸಾಲ ನೀಡಿ, ತನ್ನ ಸಾಲದಿಂದ ಅವುಗಳು ಮುಳುಗುವಂತೆ ಮಾಡಿ, ಅಲ್ಲಿ ತನ್ನ ವ್ಯಾಪಾರ ಹಾಗೂ ಮಿಲಿಟರಿ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಂದ ಭಾರತದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸೈಬರ್‌ ಕಾರಸ್ಥಾನಗಳ ಮೂಲಕ ನಮ್ಮ ದೇಶದ ಸರಕಾರಿ- ವ್ಯೂಹಾತ್ಮಕ ವೆಬ್‌ಸೈಟ್‌ಗಳಿಗೆ ಲಗ್ಗೆ ಹಾಕಲು ಯತ್ನಿಸುತ್ತದೆ. ವೈರಿ ದೇಶ ಪಾಕಿಸ್ತಾನಕ್ಕೆ ಮಿಲಿಟರಿ ಬೆಂಬಲ ಹಾಗೂ ಅಲ್ಲಿಂದ ಕಾರ್ಯಾಚರಿಸುವ ಉಗ್ರರ ಶಿಬಿರಗಳಿಗೆ ಧನಸಹಾಯ ಮಾಡುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ದಾಖಲೆಗಳನ್ನು ನೀಡಿ, ತನ್ನ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತಂದಾಗಲೂ ಚೀನಾ ಅದಕ್ಕೆ ಅಡ್ಡಗಾಲು ಹಾಕುತ್ತದೆ. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಕಿರುಕುಳ ಕೊಡಲು ಅದು ಸದಾ ಸಿದ್ಧವಾಗಿಯೇ ಇರುತ್ತದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಬಿಹಾರ, ಬಂಗಾಲದ ಕೋಮು ಹಿಂಸಾಚಾರ ನಿಯಂತ್ರಿಸಿ

ಆದರೆ ಪ್ರತಿ ಬಾರಿಯೂ ಭಾರತ ಚೀನಾಗೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಚೀನಾದ ಕಪಟ ಕಾರ್ಯತಂತ್ರಗಳನ್ನೂ ಯುದ್ಧನೀತಿಗಳನ್ನೂ ಅರ್ಥ ಮಾಡಿಕೊಂಡಿರುವ ನೂತನ ಭಾರತದ ಎದಿರೇಟುಗಳು ಚೀನಾವನ್ನು ಅಚ್ಚರಿಯಲ್ಲಿ ಕೆಡವಿರುವ ಸಾಧ್ಯತೆ ಇದೆ. ಗಲ್ವಾನ್‌ನಲ್ಲಿ ಚೀನಾ ಸೈನಿಕರ ಪಾಶವೀ ದಾಳಿಗೆ ಅದೇ ಮಾದರಿಯ ಉತ್ತರ ನೀಡುವಲ್ಲಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಒತ್ತಡ ಹಾಕಿಸುವವರೆಗೂ ಭಾರತದ ರಾಜನೀತಿ, ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆಗಳು ಹಬ್ಬಿವೆ. ಠಕ್ಕ ಚೀನಾದ ಬಗ್ಗೆ ಸದಾ ಎಚ್ಚರ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಾಜನೀತಿಯ ಮಾದರಿ ಹೀಗೇ ಮುಂದುವರಿಯುವುದು ಅಗತ್ಯ. ಜತೆಗೆ ಅಕ್ಕಪಕ್ಕದ ದೇಶಗಳ ಜತೆಗಿನ ಆತ್ಮೀಯ ರಾಜನೀತಿ, ಅಮೆರಿಕದಂಥ ಮಿತ್ರ ರಾಷ್ಟ್ರಗಳನ್ನು ಕಾಪಾಡಿಕೊಳ್ಳುವ ಜಾಣ್ಮೆ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವಿವೇಕದ ಮೂಲಕ ಇಂಥ ಸಂದಿಗ್ಧತೆಗಳನ್ನು ಎದುರಿಸಬಹುದಾಗಿದೆ.

Exit mobile version