Site icon Vistara News

ವಿಸ್ತಾರ ಸಂಪಾದಕೀಯ: ವಸತಿ ಶಾಲೆಗಳು ಕಿರುಕುಳದ ಕೂಪಗಳಾಗದಿರಲಿ

Residential schools should not be dens of harassment

#image_title

ಹಾಸನ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ (Residential School) ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪ್ರಾಂಶುಪಾಲರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‌ನಲ್ಲಿ ಎಂಟು ಮಂದಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಾಂಶುಪಾಲರ ಬದಲಾವಣೆಗಾಗಿ ವಿದ್ಯಾರ್ಥಿನಿಯರು ತೀವ್ರ ಹೋರಾಟ ನಡೆಸಿದಾಗ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ, ಕೊಡಗಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹೈಸ್ಕೂಲ್‌ ಹೆಡ್‌ಮಾಸ್ಟರ್‌ ಒಬ್ಬನ ಮೇಲೂ ಪೋಕ್ಸೋ ಕೇಸ್‌ ಬಿದ್ದಿದೆ. ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಇವೆಲ್ಲ ಗಂಭೀರ, ಆಘಾತಕರ ಹಾಗೂ ತಕ್ಷಣದ ವಿಚಾರಣೆ ನಿರೀಕ್ಷಿಸುವ ಪ್ರಕರಣಗಳಾಗಿವೆ.

ವಸತಿ ಶಾಲೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಡಿಸೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲನೊಬ್ಬನನ್ನು ಪೋಕ್ಸೋ ಕೇಸ್‌ನಲ್ಲಿ ಬಂಧಿಸಲಾಗಿತ್ತು. ಕಲಬುರಗಿ ಚಿಂಚೋಳಿಯಲ್ಲೂ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಪ್ರಾಚಾರ್ಯ ಸೇರಿದಂತೆ ಇಬ್ಬರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಹೀಗೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಇದು ನಮ್ಮಲ್ಲಿ ಆತಂಕ ಉಂಟುಮಾಡಬೇಕಲ್ಲವೇ? ವಸತಿ ಶಾಲೆಗಳು ಹೀಗೆ ಲೈಂಗಿಕ ಪೀಡಕರ ನೆಲೆಯಾಗುತ್ತಿರುವುದೇಕೆ? ಇಲ್ಲಿಗೆ ಅಡ್ಮಿಷನ್‌ ಮಾಡಿಸಿಕೊಳ್ಳುವವರು ಹೆಚ್ಚಾಗಿ ಬಡ, ಸೌಲಭ್ಯವಂಚಿತ ಹಾಗೂ ದಲಿತ ಕುಟುಂಬಗಳಿಂದ ಬಂದ ಮಕ್ಕಳು. ದುಬಾರಿ ಫೀಸ್‌ ತೆತ್ತು ಖಾಸಗಿ ಶಾಲೆಗಳಿಗೆ ಹೋಗಲಾಗದ ಮಕ್ಕಳು ಹೇಗೋ ಪ್ರವೇಶ ಪರೀಕ್ಷೆ ಬರೆದು, ಸರ್ಕಾರ ಇಂಥವರಿಗಾಗಿಯೇ ನೀಡಿದ ಸೌಲಭ್ಯದಡಿ ಇಲ್ಲಿ ಸೇರಿಕೊಳ್ಳುತ್ತಾರೆ. ಇಂಥ ಮಕ್ಕಳು ಎಂಥ ದೌರ್ಜನ್ಯ ನಡೆಸಿದರೂ ಬಾಯಿ ಮುಚ್ಚಿಕೊಂಡಿರುತ್ತಾರೆ, ಪ್ರತಿಭಟಿಸುವುದಿಲ್ಲ ಎಂಬ ಅನಿಸಿಕೆಯೂ ಈ ಕಿರುಕುಳಗಳ ಹಿಂದೆ ಇರುವಂತಿದೆ. ಹೀಗಾಗಿ ಆಸರೆಯಾಗಬೇಕಾದ ತಾಣಗಳು ನರಕಗಳಾಗುತ್ತಿವೆ.

ಬಹುತೇಕ ವಸತಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು, ವಾರ್ಡನ್‌ಗಳು, ಪ್ರಾಚಾರ್ಯರು ಇರಬಹುದು. ಆದರೆ ಗಣನೀಯ ಸಂಖ್ಯೆಯ ಶಾಲೆಗಳಲ್ಲಿ ಶಿಕ್ಷಕರು, ಪ್ರಾಚಾರ್ಯರು ಲೈಂಗಿಕ ಕಿರುಕುಳ ಪ್ರಕರಣಗಳ ರೂವಾರಿಗಳಾಗಿರುವುದು ನಿಜ. ಸಾಕ್ಷಿಗಳು ಸರಿಯಾಗಿ ದೊರಕದೇ ಹೋದರೆ ಇಂಥವರಿಗೆ ಶಿಕ್ಷೆಯೂ ಆಗಲಿಕ್ಕಿಲ್ಲ. ಆದರೆ ಇಂಥ ಕಿರುಕುಳ ಅನುಭವಿಸುವ ಹಾಗೂ ಇದನ್ನು ನೋಡುವ ಮಕ್ಕಳ ಮನಸ್ಥಿತಿ, ಭವಿಷ್ಯ ಮುಂದೆ ಏನಾಗಬಹುದು? ಆರೋಗ್ಯವಂತ ಪ್ರಜೆಗಳನ್ನು ರೂಪಿಸಬೇಕಾದ ತಾಣಗಳಲ್ಲಿ ನಾವು ದುಷ್ಟರಿಗೆ ಎಡೆ ಮಾಡಿಕೊಡುತ್ತಿದ್ದೇವೆಯೇ? ವಸತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಲು ಅಗತ್ಯ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಇವುಗಳ ಮೇಲೆ ನಿಗಾ ಇಡಬೇಕು. ಇದಕ್ಕಾಗಿಯೇ ಒಂದು ಪ್ರತ್ಯೇಕ ನಿಗಾ ಸಮಿತಿ ರಚಿಸಬೇಕು. ಇಂಥ ಕಡೆ ಮಹಿಳಾ ಸಿಬ್ಬಂದಿಯನ್ನೇ ಕಡ್ಡಾಯವಾಗಿ ನೇಮಿಸಬೇಕು. ತಪ್ಪಿತಸ್ಥರಿಗೆ ಶೀಘ್ರವೇ ವಿಚಾರಣೆಯಾಗಿ ಶಿಕ್ಷೆಯಾಗಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಕ್ಷಾಂತರ ರಾಜಕಾರಣ; ನೈತಿಕತೆಯ ಅಧಃಪತನ!

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳನ್ನು ನಡೆಸುತ್ತವೆ. ಇವುಗಳಿಗೆ ಪ್ರವೇಶ ಪರೀಕ್ಷೆಯೂ ಇರುತ್ತದೆ. ಇತ್ತೀಚೆಗೆ ವಸತಿ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆಸಕ್ತಿ ಹೆಚ್ಚಾಗಿದೆ. ಪ್ರವೇಶ ಪರೀಕ್ಷೆಗೂ ಪೈಪೋಟಿ ಉಂಟಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು 6ರಿಂದ 10ನೇ ತರಗತಿವರೆಗೆ ಉತ್ತಮ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ಇಲ್ಲಿನ ಸದಾಶಯ. ಆದರೆ ಕೆಲವೆಡೆ ವಸತಿ ಶಾಲೆಗಳಿಗೆ ಕಟ್ಟಡಗಳಿಲ್ಲ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ, ಶೌಚಾಲಯ- ಕುಡಿಯುವ ನೀರು ಸರಿಯಾಗಿಲ್ಲ, ಮುಂತಾದ ಸಮಸ್ಯೆಗಳೂ ಇವೆ. ಇವುಗಳೂ ಸರಿಯಾಗಬೇಕಿವೆ. ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ಈ ಶಾಲೆಗಳು ಸಕಲ ಸೌಲಭ್ಯ ಹಾಗೂ ಸುರಕ್ಷತೆಗಳೊಂದಿಗೆ ಮುನ್ನಡೆಯಬೇಕಿವೆ.

Exit mobile version