ಉಡುಪಿ: ಉಡುಪಿಯ ಕಾರ್ಕಳ ಧರ್ಮಸ್ಥಳ ಹೆದ್ದಾರಿಯ ಪಾಜೆಗುಡ್ಡೆ ಬಳಿ ಭೀಕರ ಅಪಘಾತ (Road Accident) ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ. ಬೈಕ್ ಮತ್ತು ಮಿನಿಲಾರಿ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಸುರೇಶ್ ಆಚಾರ್ಯ (36), ಸಮೀಕ್ಷಾ (7), ಸುಶ್ಮೀತಾ (5) ಮತ್ತು ಸುಶಾಂತ್ (2) ಮೃತಪಟ್ಟವರು.
ಮೀನಾಕ್ಷಿ ಆಚಾರ್ಯ (32) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುರೇಶ್ ಆಚಾರ್ಯ ಕುಟುಂಬ ಕಾರ್ಕಳದಿಂದ ವೇಣೂರು ತೆರಳುತ್ತಿದ್ದಾಗ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು
ಕೃಷಿ ಹೊಂಡದಲ್ಲಿ ಮುಳುಗಿ ಯುವಕನೊರ್ವ ಮೃತಪಟ್ಟಿದ್ದಾನೆ. ವಿನಾಯಕ (24) ಮೃತ ದುರ್ದೈವಿ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ನಾರಾಣಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಬೈಕ್ ಮತ್ತು ಮೊಬೈಲ್ ಪತ್ತೆಯಾಗಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Road Accident : ಮಂಡ್ಯದ ಉಮ್ಮಡಹಳ್ಳಿ ಗೇಟ್‌ನಲ್ಲಿ ನೋಡನೋಡುತ್ತಿದ್ದಂತೆ ಪಲ್ಟಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್
ಗದಗದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕರು
ಉಕ್ಕಿ ಹರಿಯುವ ಹಳ್ಳದಲ್ಲಿ ಯುವಕರಿಬ್ಬರು ಕೊಚ್ಚಿ ಹೋಗಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಶಿವಪ್ಪ ಅವರಾದಿ (25) ಹಾಗೂ ಮಣಿಕಂಠ (26) ಹಳ್ಳದಲ್ಲಿ ಕೊಚ್ಚಿ ಹೋದವರು. ನಿನ್ನೆ ಭಾನುವಾರ ರಾತ್ರಿ ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಚಲಾಯಿಸಿದ್ದಾರೆ.
ಹುಣಸಿಕಟ್ಟಿ ಗ್ರಾಮದಿಂದ ನರಗುಂದ ಪಟ್ಟಣಕ್ಕೆ ಹೋಗುತ್ತಿದ್ದಾಗ, ಉಕ್ಕಿ ಹರಿಯುವ ಹಳ್ಳದಲ್ಲಿ ಬೈಕ್ ಸಮೇತವಾಗಿ ಕೊಚ್ಚಿ ಹೋಗಿದ್ದಾರೆ. ಮಣಿಕಂಠ ಅವರ ಪತ್ನಿಯನ್ನು ಕರೆಯಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಇಬ್ಬರ ಪೈಕಿ, ಶಿವಪ್ಪ ಅವರಾದಿ (25) ಮೃತ ದೇಹ ಪತ್ತೆಯಾಗಿದ್ದು, ಮಣಿಕಂಠಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದು ವ್ಯಕ್ತಿ ಸಾವು
ಚಾಮರಾಜನಗರದಲ್ಲಿ ಗ್ರಾಮ ದೇವರ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಡ್ಯಾನ್ಸ್ ಮಾಡುವ ವೇಳೆ ಕುಸಿದು ಬಿದ್ದ ಯುವಕನಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಯುವಕ ಕುಸಿದು ಬೀಳುವ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಾಬು(42) ಮೃತ ದುರ್ದೈವಿ. ಚಾಮರಾಜನಗರದ ಮೂಡ್ನಾಕೂಡು ಗ್ರಾಮದಲ್ಲಿ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ