ಬೀಜಿಂಗ್: ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಮದುವೆಗೆ ಹೋದರೆ ಮುಯ್ಯಿ ಮಾಡಿ ಬರುವುದು, ಉಡುಗೊರೆ ನೀಡಿ, ಶುಭ ಹಾರೈಸಿ ಬರುವುದು ವಾಡಿಕೆ. ಆದರೆ, ಮದುವೆಗೆ ಹೋದವರಿಗೇ ಯಾರೂ ಉಡುಗೊರೆ ಕೊಡುವುದಿಲ್ಲ. ಶ್ರೀಮಂತರ ಮದುವೆಯಾದರೆ ಸಣ್ಣ-ಪುಟ್ಟ ಉಡುಗೊರೆ ನೀಡುತ್ತಾರೆ. ಆದರೆ, ಚೀನಾದಲ್ಲಿ (China) ಹಾಗಲ್ಲ. ಶ್ರೀಮಂತ ಯುವಕ-ಯುವತಿಯು ಅದ್ಧೂರಿಯಾಗಿ (Rich Wedding) ಮದುವೆಯಾಗಿದ್ದು, ಮದುವೆಗೆ ಹಾಜರಾದವರಿಗೇ 66 ಸಾವಿರ ರೂ. ನಗದು ಉಡುಗೊರೆ ಸೇರಿ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ.
ಪ್ರವಾಸಿ ಇನ್‌ಫ್ಲುಯೆನ್ಸರ್ ಆಗಿರುವ ದಾನಾ ಚಾಂಗ್ ಅವರು ಶ್ರೀಮಂತರ ಮದುವೆಯೊಂದರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಏಷ್ಯಾದ ಅದ್ಧೂರಿ ಮದುವೆಯು ಅದ್ಧೂರಿಯಾಗಿದೆ. ನಾನು ನನ್ನ ಜೀವನದಲ್ಲಿಯೇ ಇಂತಹ ಅದ್ಧೂರಿ ಮದುವೆಯನ್ನು ನೋಡಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಆದರೆ, ಅದು ಯಾರ ಮದುವೆ? ಯುವಕ-ಯುವತಿಯ ತಂದೆ-ತಾಯಿ ಯಾರು? ಅವರು ಎಷ್ಟು ಶ್ರೀಮಂತರು ಎಂಬುದು ಸೇರಿ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.
ಮದುವೆಗೆ ಹಾಜರಾಗುವವರಿಗೆ ಏನೆಲ್ಲ ಸೌಲಭ್ಯ?
ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನ ಮದುವೆಗೆ ಹಾಜರಾಗಿದ್ದಾರೆ. ಮದುವೆಗೆ ಬರುವವರಿಗೆ ಎಲ್ಲರಿಗೂ ವಿಮಾನದ ಟಿಕೆಟ್ ಬುಕ್ ಮಾಡಲಾಗಿದೆ. ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ಫೈವ್ ಸ್ಟಾರ್ ಹೋಟೆಲ್‌ನಿಂದ ಮದುವೆ ನಡೆಯುವ ಸ್ಥಳಕ್ಕೆ ರೋಲ್ಸ್ ರಾಯ್ಸ್ ಕಾರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು, ಮದುವೆ ಮಂಟಪದಲ್ಲಿ ಊಟ-ತಿಂಡಿ, ಐಸ್‌ಕ್ರೀಮ್‌ಗಳ ವೈವಿಧ್ಯತೆಗಂತೂ ಲೆಕ್ಕವೇ ಇರಲಿಲ್ಲ ಎಂದು ತಿಳಿದುಬಂದಿದೆ.
ಭಾರತದಲ್ಲೂ ಮುಕೇಶ್ ಅಂಬಾನಿ ಅವರಂತಹ ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ವಿರಾಟ್ ಕೊಹ್ಲಿ, ರಣವೀರ್ ಸಿಂಗ್ ಅವರಂತಹ ಸೆಲೆಬ್ರಿಟಿಗಳು ಇಟಲಿ ಸೇರಿ ಬೇರೆ ದೇಶಗಳಲ್ಲಿ ಅದ್ಧೂರಿಯಾಗಿ ಮದುವೆಯಾಗಿ, ಭಾರತದಲ್ಲಿ ರೆಸೆಪ್ಶನ್ ಇಟ್ಟುಕೊಳ್ಳುತ್ತಾರೆ. ಆದರೆ, ಯಾರೂ ಮದುವೆಗೆ ಬಂದವರಿಗೆ ಸಾವಿರಾರು ರೂ. ನಗದು, ದುಬಾರಿ ಉಡುಗೊರೆ ಕೊಡುವುದಿಲ್ಲ. ಕೊಡಬೇಕು ಎಂಬ ಸಂಪ್ರದಾಯ ಇಲ್ಲದಿದ್ದರೂ ಚೀನಾದಲ್ಲಿ ಮಾತ್ರ ಶ್ರೀಮಂತ ಯುವಕ-ಯುವತಿಯು ಉಡುಗೊರೆ ಕೊಟ್ಟು ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: Sapthami Gowda: ʻಯುವʼ ಹೇಳಿದ್ದಕ್ಕೆ ಮುಂದುವರಿದೆ, ನನ್ನದೂ ತಪ್ಪಿದೆ; ಸಪ್ತಮಿ ಗೌಡ ಆಡಿಯೊ ವೈರಲ್!