Site icon Vistara News

Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

Aravind Kejriwal

ನವದೆಹಲಿ: ಏಳು ಹಂತದ ಲೋಕಸಭೆ ಚುನಾವಣೆಯ (Lok Sabha Election 2024) ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್ (Supreme court) ಮಧ್ಯಂತರ ಜಾಮೀನು ನೀಡಿದೆ. ದೆಹಲಿ ಅಬಕಾರಿ ನೀತಿ (Delhi Excise policy) ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ (ED) ಬಂಧಿಸಲ್ಪಟ್ಟಿರುವ ಆಮ್ ಆದ್ಮಿ ಪಕ್ಷದ (Aam Admi Party) ನಾಯಕ ಜೂನ್ 2ರೊಳಗೆ ಜೈಲು ಅಧಿಕಾರಿಗಳಿಗೆ ಶರಣಾಗಬೇಕಿದೆ.

ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ (Illegal money transaction) ವರ್ಗಾವಣೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌(Supreme Court)ನಲ್ಲಿ ನಡೆಯಿತು. ಸದ್ಯ ತಿಹಾರ್‌ ಜೈಲಿನಲ್ಲಿರುವ ಕೇಜ್ರಿವಾಲ್‌ ಲೋಕಸಭೆ ಚುನಾವಣೆ ಹಿನ್ನೆಲೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ಎರಡು ಭಾಗಗಳಾಗಿ ವಿಂಗಡಿಸಿದೆ. ಅವರ ಪ್ರಮುಖ ಅರ್ಜಿಯು ಕೇಂದ್ರ ತನಿಖಾ ಸಂಸ್ಥೆಯಿಂದ ತನ್ನ ಬಂಧನವನ್ನು ಪ್ರಶ್ನಿಸಿದೆ ಮತ್ತು ಅದನ್ನು “ಕಾನೂನುಬಾಹಿರ” ಎಂದು ಘೋಷಿಸುವಂತೆ ಕೋರಿದೆ. ಎರಡನೇ ಅಂಶವು ನಡೆಯುತ್ತಿರುವ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಜಾಮೀನು ಮಂಜೂರು ಮಾಡಲು ಸಂಬಂಧಿಸಿದೆ. ಎರಡನೇ ಭಾಗಕ್ಕೆ ಸಂಬಂಧಿಸಿ ಇಂದು ಕೋರ್ಟ್‌ ತೀರ್ಪು ನೀಡಿದೆ.

ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದೆ. ED ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅರವಿಂದ ಕೇಜ್ರಿವಾಲ್‌ ಅವರಿಗೆ ಚುನಾವಣೆ ದೃಷ್ಟಿಯಿಂದ ಜಾಮೀನು ನೀಡಿದರೆ ಜನರಿಗೆ ತಪ್ಪು ಸಂದೇಶ ಹೋದಂತಾಗುತ್ತದೆ. ರಾಜಕಾರಣಿಗಳಿಗೊಂದು ನ್ಯಾಯ, ಜನರಿಗೊಂದು ನ್ಯಾಯ ಎಂದು ಜನ ಭಾವಿಸುತ್ತಾರೆ ಎಂದು ಈಗಾಗಲೇ ವಾದ ಮಂಡಿಸಿದ್ದರು. ಇದಾದ ಬಳಿಕ ಈ ಪ್ರಕರಣವನ್ನು ನ್ಯಾಯಪೀಠ ಎರಡು ಭಾಗವನ್ನಾಗಿ ವಿಭಜಿಸಿತ್ತು. ಒಂದು ಇಡಿ ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿದ ಅರ್ಜಿ. ಮತ್ತೊಂದು ಮಧ್ಯಂತರ ಜಾಮೀನು ಅರ್ಜಿ. ಮಂಗಳವಾರ ವಿಚಾರಣೆ ನಡೆಸಿದ ಕೋರ್ಟ್‌ ಕೇಜ್ರಿವಾಲ್‌ ಅವರ ನ್ಯಾಯಾಂಗ ಬಂಧನವನ್ನು ಮೇ 20ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು ಮತ್ತು ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ನಡೆಸುವುದಾಗಿ ಹೇಳಿತ್ತು.

ಏ.9ರಂದು ಇದೇ ಪ್ರಕರಣ ವಿಚಾರಣೆ ನಡೆಸಿದ್ದ ದಿಲ್ಲಿ ಹೈಕೋರ್ಟ್‌, ಅಕ್ರಮ ಹಣ ವರ್ಗಾವಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಸಮನ್ಸ್‌ ನೀಡಿದರೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಇಡಿ ಕೊನೆಗೆ ಅವರನ್ನು ಅರೆಸ್ಟ್‌ ಮಾಡಲೇಬೇಕಾಗಿತ್ತು. ಅದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಹೀಗಾಗಿ ಕೇಜ್ರಿವಾಲ್‌ ಕೊನೆಗೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ:Char Dham Yatra: ಇಂದಿನಿಂದ ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭ

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೊತೆಗೆ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ ಜಾಮೀನು ಅರ್ಜಿ ಇಂದು ವಿಚಾರಣೆ; ದಿಲ್ಲಿ ಸಿಎಂಗೆ ಜೈಲಾ…? ಬೇಲಾ?

Exit mobile version