ಬೆಂಗಳೂರು: ಬರೋಬ್ಬರಿ 40 ದಿನಗಳ ಬೇಸಿಗೆ ರಜೆಯ (Summer holidays) ಬಳಿಕ ಇಂದು ಮಕ್ಕಳು ಮತ್ತೆ ಶಾಲೆಯ (School reopen) ಮುಖ ಕಾಣುತ್ತಿದ್ದಾರೆ. ಇಷ್ಟು ದಿನ ರಜೆಯ ಮಜದಲ್ಲಿದ್ದ ಮಕ್ಕಳು ಇದೀಗ ಪುಸ್ತಕ, ಪೆನ್, ಬ್ಯಾಗ್ ರೆಡಿ ಮಾಡಿಕೊಂಡಿದ್ದು, ಇಂದು ಸ್ಕೂಲ್ ಕಾಂಪೌಂಡ್ ಒಳಗೆ ಮತ್ತೆ ಹೆಜ್ಜೆ ಹಾಕಲಿದ್ದಾರೆ.
ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಿನ್ನೆಯೇ ನಡೆದಿದ್ದು, ಇವತ್ತು ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿಗಳು ಮಾಡಿದ್ದಾರೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಚಗೊಳಿಸಬೇಕು. ಅಲ್ಲದೆ ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಮೇ 29ರಿಂದ 2024- 25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ. ಸರಕಾರಿ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿದ್ಯಾವಿಕಾಸ ಯೋಜನೆಯಡಿ 2024-25ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2024-25ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆಗಳ ಸರಬರಾಜು ಕಾರ್ಯಕ್ರಮವನ್ನು ಕೈಗೊಳ್ಳಲಾಗಿರುತ್ತದೆ.
ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ಮೊದಲನೇ ಅವಧಿ ಮೇ 29 ಹಾಗೂ ಎರಡನೇ ಅವಧಿ ಅಕ್ಟೋಬರ್ 21ಕ್ಕೆ ಶುರುವಾಗಲಿದೆ. ಅಕ್ಟೋಬರ್ 3ರಿಂದ 20ರವರಗೆ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್ 11ರಿಂದ ಬೇಸಿಗೆ ರಜೆ ಶುರುವಾಗಲಿದೆ.
ಮೊಬೈಲ್‌ನಿಂದ ದೂರವಿರಿ
ಇದರ ಜೊತೆಗೆ, ಶಾಲೆ ಆರಂಭದಲ್ಲಿಯೇ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವಂತೆ ಪೋಷಕರಿಗೆ ಮನವಿ ಮಾಡಿವೆ ಖಾಸಗಿ ಶಾಲೆ ಒಕ್ಕೂಟಗಳು. ಖಾಸಗಿ ಶಾಲಾ ಒಕ್ಕೂಟದಿಂದ ಪೋಷಕರಿಗೆ ಪತ್ರ ಬರೆಯಲಾಗಿದೆ. ಮಕ್ಕಳಲ್ಲಿ ಹೆಚ್ಚಾಗಿರುವ ಮೊಬೈಲ್ ಗೀಳಿನಿಂದ ಭವಿಷ್ಯ ಹಾಳು ಎಂದು ಪೋಷಕರು ಎಚ್ಚರಿಕೆ ವಹಿಸುವಂತೆ ಖಾಸಗಿ ಶಾಲಾ ಒಕ್ಕೂಟ ಮನವಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲೆ ಮುಳುಗಿರುವ ಮಕ್ಕಳು ಸದಾ ಸಾಮಾಜಿಕ ಜಾಲತಾಣದಲ್ಲಿ ಹೈ ಆಕ್ಟಿವ್ ಆಗಿರುತ್ತಾರೆ. ಇದರಿಂದ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಮಿತಗೊಳಿಸುವಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ