ನ್ಯೂಯಾರ್ಕ್: ಭೂಗರ್ಭದ ಸುಮಾರು 700 ಕಿಲೋಮೀಟರ್ ಆಳದಲ್ಲಿ ಹುದುಗಿರುವ ಸುಪ್ತ ಸಾಗರ ಅಂದರೆ ಬೃಹತ್ ಜಲಾಶಯವನ್ನು (Ocean Reservoir Underground) ವಿಜ್ಞಾನಿಗಳು (Scientists) ಪತ್ತೆಹಚ್ಚಿದ್ದಾರೆ. ಈ ಭೂಗತ ನೀರಿನ ಮೂಲದ ಗಾತ್ರ, ಭೂಮಿಯ (Earth) ಮೇಲಿರುವ ಎಲ್ಲಾ ಸಾಗರಗಳ (Oceans) ಒಟ್ಟು ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚು (threefold) ಎಂದು ಅಂದಾಜಿಸಲಾಗಿದೆ!
ಇಲಿನಾಯ್ಸ್‌ನ ಇವಾನ್‌ಸ್ಟನ್‌ನಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದ (Northwestern University in Evanston) ಸಂಶೋಧಕರು ಈ ಸಂಶೋಧನೆ ಮಾಡಿದ್ದಾರೆ. ಈ ಜಲಾಶಯ ಭೂಮಿಯ ಮೇಲ್ಮೈಯಿಂದ ಸುಮಾರು 700 ಕಿಲೋಮೀಟರ್ ಕೆಳಗೆ ಇದೆಯಂತೆ. ಈ ಸಂಶೋಧನೆಯು ಗ್ರಹದ ಭೂವಿಜ್ಞಾನ ಮತ್ತು ನೀರಿನ ಚಕ್ರವನ್ನು ಗ್ರಹಿಸಲು ಹೊಸ ಮಾರ್ಗಗಳನ್ನು ತೆರೆಯುವಂತಿದೆ.
ಭೂಮಿಯ ನೀರಿನ ಮೂಲವನ್ನು ಸಂಶೋಧನೆ ಮಾಡುವಾಗ ಇದು ಕಂಡುಬಂದಿದೆ. ರಿಂಗ್‌ವುಡೈಟ್ ಎಂಬ ಖನಿಜದೊಳಗೆ ಈ ಗುಪ್ತ ಸಾಗರ ಅಡಗಿದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ಭೂಮಿಯ ನೀರಿನ ಮೂಲದ ಬಗ್ಗೆ ನಾವು ಗ್ರಹಿಸಿದ್ದನ್ನೂ ಈ ಆವಿಷ್ಕಾರ ಪ್ರಶ್ನಿಸುತ್ತದೆ. ಕೆಲವು ವಿಜ್ಞಾನಿಗಳು ಧೂಮಕೇತುವಿನ ಪ್ರಭಾವದಿಂದ ನೀರು ಹುಟ್ಟಿಕೊಂಡಿರಬಹುದು ಎಂದು ನಂಬಿದ್ದರು. ಈ ಸಂಶೋಧನೆಯು, ಭೂಮಿಯ ಸಾಗರಗಳು ಗ್ರಹದ ಆಳದಿಂದ ಹೊರಹೊಮ್ಮಿರಬಹುದು ಎಂಬ ಸುಳಿವು ನೀಡುತ್ತವೆ. ಮೇಲ್ಮೈ ಸಾಗರಗಳು ಕ್ರಮೇಣ ಅದರ ಮಧ್ಯಭಾಗದಿಂದ ಹೊರಬಂದಿರಬಹುದು.
ಸಂಶೋಧನೆಯ ನೇತೃತ್ವ ವಹಿಸಿದ್ದ ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿ ಸ್ಟೀವನ್ ಜಾಕೋಬ್‌ಸೆನ್ ಸಂದರ್ಶನವೊಂದರಲ್ಲಿ, “ಭೂಮಿಯ ನೀರು ಗ್ರಹದ ಒಳಗಿನಿಂದ ಬಂದಿದೆ ಎಂಬುದಕ್ಕೆ ಇದು ಬಲವಾದ ಪುರಾವೆಗಳನ್ನು ತೋರಿಸುತ್ತದೆ” ಎಂದು ಹೇಳಿದರು.
ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಇರಿಸಲಾಗಿರುವ 2000 ಸೀಸ್ಮೋಗ್ರಾಫ್‌ಗಳನ್ನು (ಭೂಕಂಪನ ಅಳೆಯುವ ಸಾಧನ) ಬಳಸಿಕೊಂಡು ಸಂಶೋಧಕರು ಈ ಸಂಗತಿಯನ್ನು ಕಂಡುಕೊಂಡಿದ್ದಾರೆ. 500 ಭೂಕಂಪನಗಳ ಅಲೆಗಳನ್ನು ಅಳೆಯಲಾಗಿದೆ. ಈ ಅಲೆಗಳು ಭೂಮಿಯ ಒಳಭಾಗದ ಮೂಲಕ ಚಲಿಸಿದಾಗ ಅವು ನಿಧಾನಗೊಂಡವು. ಕೆಳಗಿನ ಬಂಡೆಗಳಲ್ಲಿ ನೀರಿದೆ ಎಂದು ಇದು ತೋರಿಸಿದೆ.
ನೀರು ಭೂಮಿಯ ಗರ್ಭದಲ್ಲಿರಬಹುದು ಮತ್ತು ಕಲ್ಲಿನ ಮೂಲಕ ಮೂಲಕ ಚಲಿಸಬಹುದು ಎಂಬ ಪರಿಕಲ್ಪನೆಯು, ಭೂಮಿಯ ನೀರಿನ ಚಕ್ರವನ್ನು ನಾವು ಅರ್ಥ ಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಬಹುದು. ಜಾಕೋಬ್ಸೆನ್ ಈ ಜಲಾಶಯದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ. ಈ ನೀರಿಲ್ಲದಿದ್ದರೆ, ಭೂಮಿಯ ಮೇಲಿನ ಎಲ್ಲಾ ನೀರು ಮೇಲ್ಮೈಯಲ್ಲಿರುತ್ತಿತ್ತು; ಆಗ ಪರ್ವತ ಶಿಖರಗಳು ಮಾತ್ರ ನೀರಿನಿಂದ ಹೊರಗಿರುತ್ತಿತ್ತು ಎಂದು ಜಾಕೋಬ್ಸನ್ ವಿವರಿಸಿದ್ದಾರೆ.
ವಿಜ್ಞಾನಿಗಳು ವಿಶ್ವಾದ್ಯಂತ ವಿವಿಧ ಪ್ರದೇಶಗಳಿಂದ ಹೆಚ್ಚುವರಿ ಭೂಕಂಪನ ಡೇಟಾವನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದಾರೆ. ಅವರ ಸಂಶೋಧನೆಯ ಫಲಿತಾಂಶಗಳು ಭೂಮಿಯ ಜಲಚಕ್ರದ ಗ್ರಹಿಕೆಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ಸಮುದ್ರ ಕಾಣಲ್ಲ ಎಂದು 118 ಕೋಟಿ ರೂ.ಗೆ ಎದುರಿನ ಮನೆ ಖರೀದಿಸಿದ ರೇಖಾ ಜುಂಜುನ್‌ವಾಲಾ!