Site icon Vistara News

Sedition Case: ವಿಧಾನಸೌಧದೊಳಗೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ‌ ದೃಢ; ಮೂವರು ಅರೆಸ್ಟ್

Sedition Case Pakistan Zindabad slogans confirmed inside Vidhana Soudha Three arrested

ಬೆಂಗಳೂರು: ನಾಸಿರ್‌ ಹುಸೇನ್‌ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ವಿಧಾನಸೌಧ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇಲ್ತಾಜ್, ಮುನಾವರ್ ಹಾಗೂ ಮೊಹಮದ್ ಶಫಿ ನಾಶಿ ಪುಡಿ ಬಂಧಿತರು ಎನ್ನಲಾಗಿದೆ. ದೆಹಲಿ ಮೂಲದ ಇಲ್ತಾಜ್, ಆರ್‌.ಟಿ. ನಗರದ ಮುನಾವರ್ ಹಾಗೂ ಮೊಹಮ್ಮದ್ ಶಫಿ ನಾಶಿ ಪುಡಿ ಬ್ಯಾಡಗಿಯವನಾಗಿದ್ದಾನೆ.

ಏನಿದು ಘಟನೆ?

ಫೆ. 27ರಂದು ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದರು. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ನಡೆದಿತ್ತು. ಇದಕ್ಕೆ ಬಿಜೆಪಿ ಸೇರಿದಂತೆ ನಾಗರಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೆ, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು.

ಆರೋಪವನ್ನು ತಳ್ಳಿಹಾಕಿದ್ದ ಕಾಂಗ್ರೆಸ್‌

ಆದರೆ, ಈ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದ್ದು, ಪೊಲೀಸರು ವಿಡಿಯೊವನ್ನು ನೋಡಿದ್ದು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಲೇ ಇಲ್ಲ ಎಂದು ಹೇಳಿತ್ತು. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟನೆ ನೀಡಿದ್ದರು. ಸದನದಲ್ಲೂ ಪ್ರಸ್ತಾಪವಾದಾಗ ಉತ್ತರ ನೀಡಿದ್ದ ಪರಮೇಶ್ವರ್‌, ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಎಫ್‌ಎಸ್‌ಎಲ್‌ ವರದಿ ಬಗ್ಗೆ ಗಮನ ಸೆಳೆದಿದ್ದ ವಿಸ್ತಾರ ನ್ಯೂಸ್‌

“ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ (FSL Expert) ಡಾ.ಬಿ.ಎನ್‌.ಫಣೀಂದ್ರ (Dr B N Phaneendar) ಅವರು ಮಾ. 1ರಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಎಫ್‌ಎಸ್‌ಎಲ್‌ ವರದಿಯಲ್ಲೂ (FSL Report) ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಸಹ ಇದೇ ವರದಿಯನ್ನು ಉಲ್ಲೇಖಿಸಿ, ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಡಿಜಿಪಿ ಅಲೋಕ್‌ ಮೋಹನ್‌ಗೆ ಮನವಿಯನ್ನೂ ಸಲ್ಲಿಸಿತ್ತು. ಈಗ FSL ವರದಿಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಅನ್ನು ಕೂಗಿರುವುದು ದೃಢಪಟ್ಟಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ವಾದ ಏನಾಗಿತ್ತು?

ಕಾಂಗ್ರೆಸ್‌ ಪಕ್ಷದ ಪ್ರಕಾರ ಅಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಲಾಗಿಲ್ಲ. ಬದಲಾಗಿ ನಾಸಿರ್‌ ಸಾಬ್‌ ಜಿಂದಾಬಾದ್‌ (Nasir saab Zindabad) ಎಂಬ ಘೋಷಣೆಯನ್ನು ತಿರುಚಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದಂತೆ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ವಾದಿಸುತ್ತಾ ಬಂದಿತ್ತು.

ಕಾಂಗ್ರೆಸ್‌ ನಾಯಕರು ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ, ಜತೆಗೆ ಫ್ಯಾಕ್ಟ್‌ ಚೆಕ್‌ ಮಾಡಿದ್ದನ್ನು ಬಿಡುಗಡೆ ಮಾಡಿದ್ದಾರೆ. ಫ್ಯಾಕ್ಟ್‌ ಚೆಕ್‌ ವಿಡಿಯೊದಲ್ಲಿ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದಂತೆ ಕೇಳಿಸಿದೆ ಎಂದು ಕಾಂಗ್ರೆಸ್‌ ಹೇಳಿತ್ತು.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಾದವೇನಾಗಿತ್ತು?

ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಪೋಸ್ಟ್‌ ಮಾಡಿ ಅಲ್ಲಿ ತಮ್ಮ ವಾದದ ವಿಚಾರವನ್ನು ಮುಂದಿಟ್ಟಿದ್ದರು. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದಿದ್ದಾರೆ. ಮಾಧ್ಯಮಗಳಿಗೂ ಹಲವು ಪ್ರಶ್ನೆ ಕೇಳಿದ್ದರು. ಅಂತಿಮವಾಗಿ ಅಲ್ಲಿ ಏನೂ ನಡೆದಿಲ್ಲ. ಏನೋ ನಡೆದಿದೆ ಎಂಬಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: FSL Report : ಸರ್ಕಾರಿ FSL ವರದಿ ಬಂದಿಲ್ಲ, ಖಾಸಗಿ ವರದಿ ಒಪ್ಪಲ್ಲ; ಬಿಜೆಪಿಗೆ ಪರಮೇಶ್ವರ್‌ ತಿರುಗೇಟು

  1. ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ!
  2. ಮಾಧ್ಯಮ ಸ್ನೇಹಿತರಲ್ಲಿ ಕೇಳಬೇಕು ಎನಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ,
    -ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ.
    -ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ?
    – ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ,
    -ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು.
    – ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ,
    – ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ“ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು.
    ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ.- ಎಂದಿದ್ದಾರೆ ಪ್ರಿಯಾಂಕ್‌ ಖರ್ಗೆ.
  3. ಇದರ ಜತೆಗೆ ಪ್ರಿಯಾಂಕ್‌ ಖರ್ಗೆ ಅವರು ಕೆಲವೊಂದು ಮಾಧ್ಯಮದ ತುಣುಕುಗಳನ್ನು ಟ್ಯಾಗ್‌ ಮಾಡಿದ್ದರು.

Exit mobile version