ಮುಂಬಯಿ: ದೇಶದ ಷೇರು ಮಾರುಕಟ್ಟೆ (Share Market) ವರ್ಷದ ಮೊದಲ ದಿನವಾದ ಯುಗಾದಿಯಂದು (Ugadi 2024) ಐತಿಹಾಸಿಕ ಜಿಗಿತವನ್ನು ದಾಖಲಿಸಿತು. ಬಿಎಸ್‌ಇ ಸೆನ್ಸೆಕ್ಸ್ (BSE Sensex) ಆರಂಭಿಕ ವಹಿವಾಟಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 75,000 ಮಾರ್ಕ್ ಅನ್ನು ದಾಟಿತು.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 381.78 ಪಾಯಿಂಟ್‌ಗಳ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 75,124.28 ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 99 ಪಾಯಿಂಟ್‌ಗಳ ಏರಿಕೆಯೊಂದಿಗೆ ತನ್ನ ದಾಖಲೆಯ ಗರಿಷ್ಠ 22,765.30 ಅನ್ನು ತಲುಪಿದೆ. ಬೆಂಚ್‌ಮಾರ್ಕ್ (Benchmark) ಇಕ್ವಿಟಿ ಸೂಚ್ಯಂಕಗಳು (Equity) ಮಂಗಳವಾರ ತಮ್ಮ ದಾಖಲೆಯ ರ್ಯಾಲಿಯನ್ನು ಮುಂದುವರಿಸಿದವು. ನಿಫ್ಟಿ ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು.
ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆಗಳ ಏರಿಕೆಗೆ ಐಟಿ ಷೇರುಗಳಲ್ಲಿನ ಖರೀದಿಯು ಹೆಚ್ಚಿನ ಕೊಡುಗೆ ನೀಡಿದೆ. ಸೆನ್ಸೆಕ್ಸ್ ಸೂಚಿಯಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಮೋಟಾರ್ಸ್, ವಿಪ್ರೋ, ಐಸಿಐಸಿಐ ಬ್ಯಾಂಕ್ ಮತ್ತು ನೆಸ್ಲೆ ಪ್ರಮುಖ ಲಾಭ ಗಳಿಸಿದವು. ಜೆಎಸ್‌ಡಬ್ಲ್ಯೂ ಸ್ಟೀಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಲಾರ್ಸನ್ ಆಂಡ್ ಟೂಬ್ರೊ ಹಿಂದುಳಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ ಮತ್ತು ಹಾಂಗ್ ಕಾಂಗ್ ಧನಾತ್ಮಕ ರೀತಿಯಲ್ಲಿ ವಹಿವಾಟು ನಡೆಸಿದರೆ, ಸಿಯೋಲ್ ಮತ್ತು ಶಾಂಘೈ ಸ್ವಲ್ಪ ಹಿನ್ನಡೆಯಲ್ಲಿದ್ದವು. ವಾಲ್ ಸ್ಟ್ರೀಟ್ ಸೋಮವಾರ ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ₹684.68 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ ಎಂದು ವಿನಿಮಯ ಮಾಹಿತಿ ದೊರೆತಿದೆ.
ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲದ ದರ ಶೇಕಡಾ 0.19ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ USD 90.55ಕ್ಕೆ ತಲುಪಿದೆ. “ನಿನ್ನೆ ಮಾರುಕಟ್ಟೆಯ ಹೊಸ ದಾಖಲೆಗಳು ಗೂಳಿ ಮಾರುಕಟ್ಟೆಯ ಗುಪ್ತಗಾಮಿನಿಯನ್ನು ದೃಢೀಕರಿಸುತ್ತವೆ. ನಿನ್ನೆ ಮಾರುಕಟ್ಟೆಯ ಚಲನೆಯಲ್ಲಿ ಆರೋಗ್ಯಕರ ಮತ್ತು ಅಪೇಕ್ಷಣೀಯ ಪ್ರವೃತ್ತಿ ಕಂಡುಬಂತು. ಲಾರ್ಜ್‌ಕ್ಯಾಪ್‌ಗಳ ಉತ್ತಮ ಪ್ರದರ್ಶನವಾಗಿದೆ. ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ” ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ ವಿಜಯಕುಮಾರ್ ಹೇಳಿದ್ದಾರೆ.
ಬಿಎಸ್‌ಇ ಬೆಂಚ್‌ಮಾರ್ಕ್ 494.28 ಪಾಯಿಂಟ್‌ಗಳು ಅಥವಾ ಶೇಕಡಾ 0.67ರಷ್ಟು ಜಿಗಿದು ಸೋಮವಾರ 74,742.50 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 152.60 ಪಾಯಿಂಟ್‌ಗಳು ಅಥವಾ ಶೇಕಡಾ 0.68ರಷ್ಟು ಏರಿಕೆಯಾಗಿ 22,666.30ಕ್ಕೆ ತಲುಪಿತ್ತು.
ಇದನ್ನೂ ಓದಿ: Stock Market: ರಜಾ ದಿನವೂ ಸ್ಪೆಷಲ್ ಟ್ರೇಡಿಂಗ್, ಸೆನ್ಸೆಕ್ಸ್, ನಿಫ್ಟಿ ಅಬ್ಬರ ಜೋರು