Site icon Vistara News

ವಿಸ್ತಾರ ಸಂಪಾದಕೀಯ: ಕೋವಿಡ್ ಲಸಿಕೆ ಅಡ್ಡಪರಿಣಾಮ, ಸರ್ಕಾರ ಹೊಣೆಗಾರಿಕೆ ಹೊರಲಿ

ಸಂಪಾದಕೀಯ

ಕೋವಿಡ್ ಲಸಿಕೆಯಿಂದ ಆಗುವ ಸಾವು ನೋವಿಗೆ ನಾವು ಹೊಣೆಯಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿತ್ ಸಲ್ಲಿಸಿದೆ. ಕಳೆದ ವರ್ಷ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಅನಾರೋಗ್ಯ ಉಲ್ಬಣಿಸಿ ಇಬ್ಬರು ಯುವತಿಯರು ಮೃತಪಟ್ಟಿದ್ದು, ಅವರ ಪೋಷಕರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ ಹೀಗೆಂದಿದೆ. ಹೀಗೆ ಸಾವಿನ ಪ್ರಕರಣಗಳಿದ್ದಲ್ಲಿ ಅದಕ್ಕೆ ಪರಿಹಾರ ನೀಡಲು ಸರ್ಕಾರ ಹೊಣೆಯಲ್ಲ, ಇವುಗಳನ್ನು ಒಂದೊಂದೇ ಪ್ರಕರಣದಂತೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಅನ್ನುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಇದು ಜವಾಬ್ದಾರಿಯುತ ಸರ್ಕಾರದ ವರ್ತನೆಯಲ್ಲ ಎಂದೇ ಹೇಳಬೇಕಿದೆ.

ಕೋವಿಡ್ ಲಸಿಕೆಯ ಸೈಡ್ ಎಫೆಕ್ಟ್ ಏನು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಕೇಳಿದಾಗಲೂ ಕೇಂದ್ರ ಹಾರಿಕೆಯ ಉತ್ತರ ನೀಡಿತ್ತು. ಆದರೆ, ಕೊರೊನಾ ಲಸಿಕೆ ಸೈಡ್ ಎಫೆಕ್ಟ್‌ನಿಂದ ಸಂಪೂರ್ಣ ಮುಕ್ತವೆಂದು ಅದನ್ನು ತಯಾರಿಸಿದ ಲಸಿಕೆ ಕಂಪನಿಗಳು ಕೂಡ ಹೇಳಿಲ್ಲ. ಪ್ರತಿ ಔಷಧಕ್ಕೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಕೋವಿಡ್ ಲಸಿಕೆ ಸೈಡ್ ಎಫೆಕ್ಟ್ ಬಗ್ಗೆಯೂ ದೂರುಗಳಿವೆ. ಅಲ್ಲಿ ಇಲ್ಲಿ ಹಲವು ತಜ್ಞರು ಇದರ ಸೈಡ್ ಎಫೆಕ್ಟ್‌ಗಳ ಬಗ್ಗೆ ಮಾತನಾಡಿದ್ದರು. ಆದರೆ ಲಸಿಕೆಯಿಂದಾಗುವ ಸಾಮೂಹಿಕ ಧನಾತ್ಮಕ ಉಪಯೋಗಗಳ ವಿಜೃಂಭಣೆಯ ಮುಂದೆ ಈ ದನಿಗಳು ಕ್ಷೀಣವಾಗಿ ಹೋಗಿದ್ದವು. ಲಸಿಕೆಯಿಂದಾಗಿ ದೇಶ ಬಹುತೇಕ ಕೊರೊನಾ ಮುಕ್ತವಾಗಿರುವುದು ನಿಜ. ಆದರೆ ಈಗಲಾದರೂ ನಾವು ಅದರ ಅಡ್ಡ ಪರಿಣಾಮಗಳ ಬಗ್ಗೆ ಧೈರ್ಯವಾಗಿ ಮಾತನಾಡಬೇಕಿದೆ.

ಅಫಿಡವಿತ್‌ನಲ್ಲಿ ಸರ್ಕಾರವೇ ಕೆಲವು ಅಂಕಿ ಅಂಶಗಳನ್ನು ನೀಡಿದೆ. ಇದುವರೆಗೂ ದೇಶದಲ್ಲಿ 219.86 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 92,114 ಅಡ್ಡಪರಿಣಾಮದ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 2782 ಪ್ರಕರಣಗಳಲ್ಲಿ ಸಾವು ನೋವು, ಅತಿ ಗಂಭೀರ ಹಾಗೂ ಗಂಭೀರ ಅನಾರೋಗ್ಯಗಳು ಉಂಟಾಗಿವೆ. ಅಂದರೆ ಒಟ್ಟಾರೆ ಡೋಸ್ ಪ್ರಮಾಣದ 0.00013%. ಇದೊಂದು ಅತಿ ಸಣ್ಣ ಸಂಖ್ಯೆ ಎಂದು ಕೇಂದ್ರ ನುಣುಚಿಕೊಳ್ಳಲು ಯತ್ನಿಸಿದೆ. ಆದರೆ 2782 ಗಂಭೀರ ಪ್ರಕರಣಗಳು ಸಣ್ಣ ಪ್ರಮಾಣದ್ದು ಎಂಬ ಗ್ರಹಿಕೆಯೂ ತಪ್ಪಿನದೇ. ಒಂದು ಸಾವು ಸಂಭವಿಸಿದರೂ ಅಡ್ಡ ಪರಿಣಾಮವಿದೆಯೆಂದು ಅರ್ಥ ಹಾಗೂ ಅದರ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತದೆ.

ದೇಶದ ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಜಗತ್ತಿನಲ್ಲೇ ತಮ್ಮದು ಅತ್ಯಂತ ಪರಿಣಾಮಕಾರಿ ಲಸಿಕಾ ಅಭಿಯಾನ ಎಂದೂ ಎದೆ ತಟ್ಟಿಕೊಂಡಿದೆ. ಸಾಧನೆಯನ್ನು ಹೇಳಿ ಎದೆ ತಟ್ಟಿಕೊಳ್ಳುವಾಗ ಲಸಿಕೆ ತಮ್ಮದು, ಅಡ್ಡ ಪರಿಣಾಮಗಳು ಉಂಟಾದಾಗ ತಮ್ಮದಲ್ಲ ಎನ್ನುವುದು ಹಾಸ್ಯಾಸ್ಪದವಲ್ಲವೇ? ಇದು ದ್ವಂದ್ವ ನಿಲುವು ಅಲ್ಲವೇ? ಲಸಿಕೆ ಕಡ್ಡಾಯವಲ್ಲ, ಆದ್ದರಿಂದ ಸರ್ಕಾರ ಹೊಣೆಯಲ್ಲ ಎಂದು ಕೇಂದ್ರ ಹೇಳಬಹುದು. ಆದರೆ ಸಾರ್ವಜನಿಕ ಆರೋಗ್ಯದ ಹೊಣೆ ಸರ್ಕಾರದ್ದೇ ಆಗಿದೆ. ಕೋವಿಡ್ ಸಾಂಕ್ರಾಮಿಕ ಒಂದು ಸಾಮಾಜಿಕ, ಸಾಮೂಹಿಕ ಆರೋಗ್ಯ ದುರಂತ. ಆದ್ದರಿಂದ ಇದರ ಉತ್ತರದಾಯಿತ್ವವೂ ಸರ್ಕಾರದ್ದೇ ಆಗಬೇಕಿರುವುದು ಸ್ವಾಭಾವಿಕ.

ಕೋವಿಡ್ ನಂತರ, ಕೋವಿಡ್ ಲಸಿಕೆಯ ಸ್ವೀಕಾರದ ನಂತರ ದೇಶದ ಯುವಜನತೆಯಲ್ಲಿ ಅಸಹಜ ಸಾವುಗಳು ಹೆಚ್ಚಿರುವುದನ್ನು ಜನತೆ ಗಮನಿಸುತ್ತಿದ್ದಾರೆ. ಅತ್ಯಂತ ಆರೋಗ್ಯಯುತ ದೇಹ ಹೊಂದಿರುವ ಯುವಜನ ಮೃತಪಡುತ್ತಿರುವುದು ಕಂಡುಬಂದಿದೆ. ಈ ಸಾವುಗಳು ಕಡೇ ಪಕ್ಷ ನಮ್ಮ ಆರೋಗ್ಯ ಇಲಾಖೆಯಿಂದ ಗಂಭೀರ ಸಮೀಕ್ಷೆಗೆ, ಅಧ್ಯಯನಕ್ಕೆ ವಸ್ತುವಾಗಬೇಕಲ್ಲವೇ? ಈ ಕುರಿತು ಯಾವುದೇ ಪ್ರಯತ್ನ ಎಲ್ಲೂ ನಡೆದಂತಿಲ್ಲ. ಕನಿಷ್ಠ ಪಕ್ಷ ಖಾಸಗಿ ವೈದ್ಯಕೀಯ ತಂಡಗಳು ಮಾಡಿದರೆ ಅದಕ್ಕೆ ಸಹಾಯವನ್ನಾದರೂ ಒದಗಿಸಬೇಕು.

ಕೇಂದ್ರ ಸರ್ಕಾರ ಹೀಗೆ ನುಣುಚಿಕೊಳ್ಳುವುದನ್ನು ಬಿಟ್ಟು, ಈ ಲಸಿಕೆಯಿಂದ ನಿಜಕ್ಕೂ ಆಗುತ್ತಿರುವ ಹಾನಿ ಏನು, ಇದಕ್ಕೆ ಏನು ಪರಿಹಾರ ಎಂಬ ಬಗ್ಗೆ ಅಧ್ಯಯನ ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲವಿದೆ; ಸರ್ಕಶರ ತಾನು ಹೊಣೆಯಲ್ಲ ಎಂದ ಕೂಡಲೇ ಆತಂಕವೂ ಉಂಟಾಗುತ್ತದೆ. ಈ ಗೊಂದಲ ಆತಂಕಗಳನ್ನು ನಿವಾರಿಸಿಕೊಳ್ಳಲು ಸರ್ಕಾರ ಮುಂದಾಗಬೇಕೇ ಹೊರತು ನುಣುಚಿಕೊಂಡು ಪ್ರಜೆಗಳ ದೃಷ್ಟಿಯಲ್ಲಿ ಸಣ್ಣದಾಗಬಾರದು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರೌಡಿ – ರಾಜಕಾರಣ ನಂಟು ಪ್ರಜಾಪ್ರಭುತ್ವಕ್ಕೆ ಆಪತ್ತು

Exit mobile version