ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ನಡೆಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆಯೆ ಇದೇ ರೀತಿಯ ದಾಳಿ ನಡೆಸಲಾಗಿತ್ತು. ಇದು ಕಳವಳಕಾರಿ. ಭಯೋತ್ಪಾದಕರು ಬಾಂಬ್ ದಾಳಿ ನಡೆಸುವುದು, ಗುಂಡಿನ ದಾಳಿ ನಡೆಸುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ರಾಕೆಟ್ ಲಾಂಚರ್ ಮೂಲಕ, ಡ್ರೋನ್‌ಗಳ ಮೂಲಕ ದಾಳಿ ನಡೆಸುವುದು ಪರಿಪೂರ್ಣ ಯುದ್ಧ ಸಾರುವಿಕೆಯ ಒಂದು ಭಾಗದಂತಿದೆ. ಪಂಜಾಬ್‌ನ ಡಿಜಿಪಿ ಗೌರವ್ ಯಾದವ್ ಅವರು ʼʼರಾಕೆಟ್ ಲಾಂಚರ್‌ನ ಮೂಲಕ ದಾಳಿ ಮಾಡುವುದು ಮಿಲಿಟರಿ ಮಟ್ಟದ ದಾಳಿ. ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ಇದು ಮಿಲಿಟರಿ ಮಟ್ಟದ್ದೆಂದು ಕಂಡುಬಂದಿದೆ. ಇದು ಗಡಿಯಾಚೆಯಿಂದ ಬಂದಿರುವ ಸಾಧ್ಯತೆಯಿದೆʼʼ ಎಂದಿದ್ದಾರೆ. ʼʼಭಾರತವನ್ನು ನೂರಾರು ಚೂರುಗಳಾಗಿ ಮಾಡುವ ನೆರೆ ದೇಶದ ಕಾರ್ಯತಂತ್ರ ಇದ್ದಂತಿದೆʼʼ ಎಂದೂ ಅವರು ಹೇಳಿದ್ದಾರೆ. ಇದು ಯುದ್ಧದ ಮಟ್ಟದ್ದು ಎಂದು ಅವರು ಹೇಳಿದ ಬಳಿಕ, ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಇದನ್ನು ಸಮರೋಪಾದಿಯಲ್ಲೇ ಅಂಗೀಕರಿಸಬೇಕಿದೆ.
ಒಂದು ಕಾಲದಲ್ಲಿ ಅಬ್ಬರಿಸಿ, ಬಳಿಕ ತಣ್ಣಗಾಗಿದ್ದ ಸಿಖ್ ಪ್ರತ್ಯೇಕತಾವಾದ ಮತ್ತೆ ತಲೆ ಎತ್ತುತ್ತಿರುವುದರ ಸೂಚನೆ ಇದು. 1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾಗಿ ಸೃಷ್ಟಿಯಾಗಿದ್ದು, ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ. ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಪಾಕಿಸ್ತಾನ ನೇರವಾಗಿ ಬೆಂಬಲ ನೀಡುತ್ತಿದೆ ಎನ್ನುವುದಕ್ಕೆ ಗಡಿಯಾಚೆಯಿಂದ ಬಂದ ಈ ರಾಕೆಟ್ ಲಾಂಚರ್ ದಾಳಿಯೇ ಸಾಕ್ಷಿ. ಪಂಜಾಬ್‌ಗೆ ಪಾಕಿಸ್ತಾನದಿಂದ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳೂ ಹರಿದುಬರುತ್ತಿವೆ. ಪಂಜಾಬ್ ಗಡಿಯಲ್ಲಿ ಇತ್ತೀಚೆಗೆ ಪಾಕಿಸ್ತಾನದ ಕಡೆಯಿಂದ ಬೇಹುಗಾರಿಕೆಗಾಗಿ ಹಾರಿಬಂದ ಡ್ರೋನ್‌ಗಳನ್ನು ಗಮನಿಸಲಾಗಿದೆ; ಅವುಗಳನ್ನು ನಮ್ಮ ಮಿಲಿಟರಿ ಹೊಡೆದುರುಳಿಸಿದೆ. ಭಾರತೀಯ ಸೇನಾಪಡೆ ಹೆಚ್ಚುಕಡಿಮೆ ದಿನವೂ ಇಂಥ ಡ್ರೋನ್‌ಗಳನ್ನು ಹೊಡೆದುರುಳಿಸುತ್ತಿದೆ. ಇನ್ನೊಂದೆಡೆ ಬಹು ಸಂಖ್ಯೆಯಲ್ಲಿರುವ ಸಿಕ್ಖರನ್ನು ಓಲೈಸಲು ಕೆನಡಾದ ರಾಜಕೀಯ ಪಕ್ಷಗಳೂ ಖಲಿಸ್ತಾನಿಗಳಿಗೆ ಅಶ್ರಯ ನೀಡಿ ಪ್ರೋತ್ಸಾಹಿಸುತ್ತಿವೆ. ಇದೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸನ್ನಿವೇಶ ಒದಗಿಬಂದಿದೆ.
ಕೇಂದ್ರ ಮತ್ತು ಪಂಜಾಬ್ ಸರಕಾರಗಳು ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು. ಭಿಂದ್ರನ್‌ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಮುಂದೆ ಅವನೇ ದೇಶದ ಭದ್ರತೆಗೆ ಸವಾಲೆನಿಸಿದ ಭಯೋತ್ಪಾದಕನಾದ. ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯದಲ್ಲೇ ಬಿಡಾರ ಹೂಡಿ, ಅಲ್ಲಿಂದಲೇ ಕಾರ್ಯಾಚರಿಸುತ್ತಿದ್ದ ಆತನ ಪಡೆಯನ್ನು ಮಟ್ಟ ಹಾಕಲು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ದಿಟ್ಟ ನಿರ್ಧಾರ ಕೈಗೊಂಡಿದ್ದು ಇಲ್ಲಿ ಸ್ಮರಣೀಯ. ಭದ್ರತೆಯಲ್ಲಿ ಲೋಪ, ಅನಗತ್ಯ ಉದಾರತೆಯಿಂದ ಅವರು ಜೀವ ತೆರಬೇಕಾಯಿತು. ಆದರೆ ಚಿಗುರಿನಲ್ಲಿ ಚಿವುಟದೇ ಬಿಟ್ಟ ಉಗ್ರಗಾಮಿ ಚಟುವಟಿಕೆಯಿಂದ ಮುಂದೆ ಎಂಥ ಭಾರಿ ಅನಾಹುತವಾಯಿತೆಂಬುದು ಇಲ್ಲಿ ಉಲ್ಲೇಖನೀಯ. ಪಾಕಿಸ್ತಾನ- ಚೀನಾ ದೇಶಗಳು ಇಂಥ ದೇಶದ್ರೋಹಿಗಳ ಸಿಟ್ಟಿನ ಲಾಭ ಮಾಡಿಕೊಳ್ಳಲು ಸದಾ ಕಾಯುತ್ತಿವೆ. ಖಲಿಸ್ತಾನಿಗಳಿಗೆ ಆಯುಧ- ಹಣಕಾಸು ಒದಗಿಸಲು ಅವು ಹಿಂದೆ ಮುಂದೆ ನೋಡವು. ಹೀಗಾಗಿ, ಭದ್ರತೆಯ ವಿಚಾರದಲ್ಲಿ ಎಳ್ಳಿನಷ್ಟೂ ಲೋಪವಾಗದಂತೆ ನೋಡಿಕೊಳ್ಳಬೇಕು. ಪಾಕ್‌ಗೂ ತಕ್ಕ ಉತ್ತರ ನೀಡಬೇಕು; ಉಗ್ರರನ್ನು ಪ್ರೋತ್ಸಾಹಿಸದಂತೆ ಕೆನಡಾ ಸರಕಾರಕ್ಕೂ ಖಡಕ್ ಎಚ್ಚರಿಕೆ ನೀಡಬೇಕು. ಚಿಗುರೊಡೆಯುತ್ತಿರುವ ಖಲಿಸ್ತಾನಿ ಚಳವಳಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ