ನವದೆಹಲಿ: ಷೇರು ಮಾರುಕಟ್ಟೆ ಜೂ. 4ಕ್ಕೆ ಪತನಗೊಂಡಿರುವುದು (Stock Market Crash) ಒಂದು ಹಗರಣ. ಮೋದಿ ಹಾಗೂ ಅಮಿತ್ ಶಾ ಇದನ್ನು ನಡೆಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಮಾಡಿದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಲೋಕಸಭಾ ಚುನಾವಣೆಯಲ್ಲಿನ ಸೋಲಿನಿಂದ ರಾಹುಲ್ ಗಾಂಧಿ ಇನ್ನೂ ಹೊರಬಂದಿಲ್ಲ. ಈಗ, ಅವರು ಮಾರುಕಟ್ಟೆ ಹೂಡಿಕೆದಾರರನ್ನು ದಾರಿತಪ್ಪಿಸಲು ಪಿತೂರಿ ನಡೆಸುತ್ತಿದ್ದಾರೆ. ಇಂದು, ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅದನ್ನು ತಡೆಯಲು ರಾಹುಲ್ ಯತ್ನಿಸುತ್ತಿದ್ದಾರೆ ಎಂದು ಎಂದು ಬಿಜೆಪಿ ಮುಖಂಡ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೋದಿ ಸರ್ಕಾರದ ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ನಮ್ಮ ಮಾರುಕಟ್ಟೆ ಸಾಮರ್ಥ್ಯ 5 ಟ್ರಿಲಿಯನ್ ಡಾಲರ್ ದಾಟಿದೆ. ಇಂದು, ಭಾರತದ ಷೇರು ಮಾರುಕಟ್ಟೆ ವಿಶ್ವದ ಅಗ್ರ 5 ಆರ್ಥಿಕತೆಗಳ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮೋದಿ ಸರ್ಕಾರದ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಪಿಎಸ್ಯುಗಳ ಮಾರುಕಟ್ಟೆ ಮೊತ್ತ 4 ಪಟ್ಟು ಹೆಚ್ಚಾಗಿದೆ. ಆದರೆ ರಾಹುಲ್ ಅದನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗೋಯಲ್ ಹೇಳಿದರು.
ಷೇರು ಮಾರುಕಟ್ಟೆ ಹಗರಣ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ ನಂತರ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆ ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಷೇರುಗಳನ್ನು ತಿರುಚಿದ್ದಕ್ಕಾಗಿ ಸೆಬಿ ತನಿಖೆಯಲ್ಲಿರುವ ಒಂದೇ ವ್ಯವಹಾರ ಗುಂಪಿನ ಒಡೆತನದ ಒಂದೇ ಮಾಧ್ಯಮಕ್ಕೆ ಎರಡೂ ಸಂದರ್ಶನಗಳನ್ನು ಏಕೆ ನೀಡಲಾಯಿತು ಎಂದು ರಾಹುಲ್ ಗಾಂಧಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಗೋಯಲ್, 10 ವರ್ಷಗಳ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆ ಸಮಯದಲ್ಲಿ ಭಾರತದ ಮಾರುಕಟ್ಟೆ ಕ್ಯಾಪ್ 67 ಲಕ್ಷ ಕೋಟಿ ರೂ. ಇಂದು ಮಾರುಕಟ್ಟೆ ಕ್ಯಾಪ್ 415 ಲಕ್ಷ ಕೋಟಿ ರೂ.ಗೆ ಏರಿದೆ.
ಇದನ್ನೂ ಓದಿ: Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ
“ಜೂನ್ 4 ರಂದು ಬಿಜೆಪಿ ದಾಖಲೆಯ ಸಂಖ್ಯೆಯನ್ನು ತಲುಪುತ್ತಿದ್ದಂತೆ, ಷೇರು ಮಾರುಕಟ್ಟೆಯೂ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ಪ್ರಧಾನಿ ಮೋದಿ ಮೇ 23 ರಂದು ಹೇಳಿದ್ದರು.
ಕೇಂದ್ರ ಗೃಹ ಸಚಿವ ಶಾ, ಈ ಹಿಂದೆಯೂ ಮಾರುಕಟ್ಟೆ ಕುಸಿದಿದೆ. ಆದ್ದರಿಂದ ಇದನ್ನು ನೇರವಾಗಿ ಚುನಾವಣೆಗೆ ಲಿಂಕ್ ಮಾಡಬಾರದು. ಕೆಲವು ವದಂತಿಗಳು ಪತನ ಹೆಚ್ಚಿಸಿರಬಹುದು. ನನ್ನ ಅಭಿಪ್ರಾಯದಲ್ಲಿ, ಜೂನ್ 4 ರೊಳಗೆ ಖರೀದಿಸಿ. ಮಾರುಕಟ್ಟೆಯು ಉತ್ತುಂಗಕ್ಕೇರಲಿದೆ.” ಎಂದು ಹೇಳಿದ್ದರು.