Site icon Vistara News

Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್‌- ನಿಫ್ಟಿ ದಾಖಲೆ ಏರಿಕೆ

stock market news narendra modi

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market news) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು.

ಬಿಎಸ್‌ಇ ಸೆನ್ಸೆಕ್ಸ್ (BSE Sensex) 2,622 ಪಾಯಿಂಟ್‌ಗಳಷ್ಟು ಏರಿದೆ. ಶೇಕಡಾ 3.5ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ 76,583 ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು 23,337 ಮಟ್ಟಕ್ಕೆ ತಲುಪಿದೆ.

ಪವರ್ ಗ್ರಿಡ್, ಎಲ್&ಟಿ, ಎನ್‌ಟಿಪಿಸಿ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಂ&ಎಂ, ಐಸಿಐಸಿಐ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೆನ್ಸೆಕ್ಸ್‌ನಲ್ಲಿ ಮುನ್ನುಗ್ಗಿದವು. ಈ ಷೇರುಗಳು ಶೇ.3ರಿಂದ ಶೇ.7ರ ಏರಿಕೆ ಕಂಡವು. ವಿದೇಶಿ ಮಾರುಕಟ್ಟೆಗಳಲ್ಲಿ ನಿಫ್ಟಿ ಸ್ಮಾಲ್‌ಕ್ಯಾಪ್ ಶೇಕಡಾ 2.73ರಷ್ಟು ಏರಿದರೆ ಮಿಡ್‌ಕ್ಯಾಪ್ ಶೇಕಡಾ 2.5 ರಷ್ಟು ಜಿಗಿದಿದೆ. ವಲಯವಾರು ನಿಫ್ಟಿಯಲ್ಲಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ (ಶೇ. 5), ನಿಫ್ಟಿ ರಿಯಾಲ್ಟಿ (ಶೇ. 4), ಮತ್ತು ನಿಫ್ಟಿ ಬ್ಯಾಂಕ್ (ಶೇ. 3) ಗಳು ಏರಿಕೆ ರ್ಯಾಲಿಯನ್ನು ಮುನ್ನಡೆಸಿದವು.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು 9 ಪ್ರತಿಶತ ಲಾಭ ಗಳಿಸಿದವು.

ತಜ್ಞರ ಪ್ರಕಾರ, ಮೇ ತಿಂಗಳಲ್ಲಿ ಕಂಡುಬಂದಿರುವ ಮಾರುಕಟ್ಟೆಯ ಚಂಚಲತೆಯು, ಜೂನ್ 4ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಕಡಿಮೆಯಾಗಬಹುದು. “ಚುನಾವಣಾ ಫಲಿತಾಂಶದವರೆಗೆ ನಮ್ಮ ಮಾರುಕಟ್ಟೆಗಳು ದುರ್ಬಲವಾಗಿರುತ್ತವೆ ಮತ್ತು ಈ ಸಮಯದಲ್ಲಿ ಚಂಚಲವಾಗಿರುವ ಸಾಧ್ಯತೆಯಿದೆ” ಎಂದು ಏಂಜೆಲ್ ಒನ್‌ನ ಹೆಡ್ ರಿಸರ್ಚ್ ಸಮೀತ್ ಹೇಳಿದ್ದಾರೆ. ಚುನಾವಣೆಯ ನಂತರ ಮಾರುಕಟ್ಟೆಯ ಗಮನವು ಹೊಸ ಸರ್ಕಾರ ಮತ್ತು ಯೂನಿಯನ್ ಬಜೆಟ್‌ನ ಮೊದಲ 100 ದಿನಗಳತ್ತ ಬದಲಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ನಿಫ್ಟಿ ಕೂಡ 23,800 ತಲುಪಬಹುದು ಎಂದು ಅಂದಾಜಿಸಲಾಗಿದೆ.

ಮಾರುಕಟ್ಟೆಯ ಇನ್ನಷ್ಟು ರ್ಯಾಲಿಯನ್ನು ಲಾರ್ಜ್‌ಕ್ಯಾಪ್‌ಗಳು ಮುನ್ನಡೆಸುವ ಸಾಧ್ಯತೆಯಿದೆ. RIL, ICICI ಬ್ಯಾಂಕ್, HDFC ಬ್ಯಾಂಕ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, L&T, M&M, Tata Motors, Bajaj Auto, Eicher Motors ನಂತಹ ಸ್ಟಾಕ್‌ಗಳು ಮೂಲಭೂತವಾಗಿ ಪ್ರಬಲ ಲಾರ್ಜ್‌ಕ್ಯಾಪ್‌ಗಳು. TCS, Infy, HCL Tech, Coforge, Persistent ಮತ್ತು L&T ಟೆಕ್‌ನಂತಹ IT ಸ್ಟಾಕ್‌ಗಳು ವ್ಯತಿರಿಕ್ತ ಖರೀದಿ ಅವಕಾಶಗಳನ್ನು ನೀಡುತ್ತವೆ. ಶುಕ್ರವಾರ ಬಂದ ಜಿಡಿಪಿ ಸಂಖ್ಯೆ 8.2% ಬೆಳವಣಿಗೆಯೊಂದಿಗೆ ನಿರೀಕ್ಷೆಗಿಂತ ಉತ್ತಮವಾಗಿವೆ. ಇದು ಮಾರುಕಟ್ಟೆಗೆ ಮೂಲಭೂತ ಬೆಂಬಲವನ್ನು ನೀಡಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

Exit mobile version