Site icon Vistara News

Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

Narendra Modi And stock market news

ಮುಂಬಯಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಐತಿಹಾಸಿಕ ಮೂರನೇ ಅವಧಿಗೆ ಪ್ರಮಾಣ ವಚನ (Oath taking) ಸ್ವೀಕರಿಸಿದ ನಂತರ ಬೆಂಚ್‌ಮಾರ್ಕ್ ಷೇರು ಮಾರುಕಟ್ಟೆ (Stock Market News) ಸೂಚ್ಯಂಕಗಳು ಸೋಮವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದವು. ಸೆನ್ಸೆಕ್ಸ್ (Sensex) ಮೊದಲ ಬಾರಿಗೆ ದಾಖಲೆ 77,000 ಗಡಿಯನ್ನು ಮೀರಿದೆ. ನಿಫ್ಟಿ 50 (Nifty 50) ಸಹ ಹೊಸ ಶಿಖರವನ್ನು ತಲುಪಿತು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ನೇತೃತ್ವದಲ್ಲಿ ಷೇರುಗಳ ಬೆಲೆಗಳು ಇಂದು ಮುಂಜಾನೆಯಿಂದ ಮುನ್ನುಗ್ಗಿ ಸೂಚ್ಯಂಕಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿದವು. ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಸಂಭವಿಸಿದೆ. ಎನ್‌ಎಸ್‌ಇ ನಿಫ್ಟಿ 50 ತಾಜಾ ಗರಿಷ್ಠ 23,411.90 ಕ್ಕೆ ಏರಿತು ಮತ್ತು ಸೆನ್ಸೆಕ್ಸ್ ಜೀವಿತಾವಧಿಯ ದಾಖಲೆ 77,079.04 ಕ್ಕೆ ಏರಿತು.

ನಿಫ್ಟಿಯಲ್ಲಿ ಅದಾನಿ ಪೋರ್ಟ್ಸ್, ಪವರ್ ಗ್ರಿಡ್ ಕಾರ್ಪ್, ಬಜಾಜ್ ಆಟೋ, ಕೋಲ್ ಇಂಡಿಯಾ ಮತ್ತು ಶ್ರೀರಾಮ್ ಫೈನಾನ್ಸ್ ಪ್ರಮುಖ ಲಾಭ ಗಳಿಸಿದವು. ನಿಫ್ಟಿಯಲ್ಲಿ ಟೆಕ್ ಮಹೀಂದ್ರಾ, ಇನ್ಫೋಸಿಸ್, ಡಾ ರೆಡ್ಡೀಸ್ ಲ್ಯಾಬ್ಸ್, ಎಲ್‌ಟಿಐಮಿಂಡ್‌ಟ್ರೀ ಮತ್ತು ಹಿಂಡಾಲ್ಕೊ ಅತಿ ಹೆಚ್ಚು ನಷ್ಟ ಅನುಭವಿಸಿದವು.

ಐಟಿ ಮತ್ತು ಲೋಹವನ್ನು ಹೊರತುಪಡಿಸಿ ಎಲ್ಲಾ ವಲಯದ ಸೂಚ್ಯಂಕಗಳು ಏರಿಕೆಯ ಬೆಲೆಗಳಲ್ಲಿ ವಹಿವಾಟಾಗುತ್ತಿವೆ. ಶುಕ್ರವಾರದಂದು (ಜೂನ್ 7), 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,720.8 ಪಾಯಿಂಟ್‌ಗಳು ಅಥವಾ 2.29 ಶೇಕಡಾ ಜಿಗಿದು 76,795.31 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು.

ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳ ನಂತರ ಕೌಂಟಿಯಲ್ಲಿ ಕ್ಷಿಪ್ರ ಚುನಾವಣೆಯನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕರೆದಿದ್ದರಿಂದ ಯುರೋ ತುಸು ದುರ್ಬಲವಾಗಿದೆ. ಚೀನಾ, ಹಾಂಗ್ ಕಾಂಗ್, ತೈವಾನ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಸೋಮವಾರ ಮುಚ್ಚಲ್ಪಟ್ಟಿವೆ. US ಉದ್ಯೋಗಗಳ ವರದಿಯು ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಬಗ್ಗೆ ಮರುಚಿಂತನೆಗೆ ಮುಂದಾದ ನಂತರ ಮಾರುಕಟ್ಟೆಯಲ್ಲಿ ಇಳಿಕೆ ಉಂಟಾಗಿದೆ. ಹೂಡಿಕೆದಾರರು ಪ್ರಮುಖ ಉದ್ಯಮ ವರದಿಗಳು ಮತ್ತು ಫೆಡ್‌ನ ದರ ನಿರ್ಧಾರವನ್ನು ಎದುರು ನೋಡುವುದರಿಂದ, ಒಂದು ವಾರದಿಂದ ತೈಲ ದರ ಕುಸಿಯುತ್ತಾ ಹೋಗಿ ಇಂದು ಸ್ಥಿರವಾಗಿದೆ.

ಇಂದು ನರೇಂದ್ರ ಮೋದಿ ಹೊಸ ಸಂಪುಟದ ಮೊದಲ ಸಭೆ

ಹೊಸದಿಲ್ಲಿ: ಇಂದು ಸಂಜೆ 5 ಗಂಟೆಗೆ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅವಧಿಯ ಸರ್ಕಾರದ (Modi 3.0) ಮೊದಲ ಸಂಪುಟ ಸಭೆ (Cabinet meeting) ನಡೆಯಲಿದೆ. ಪ್ರಧಾನಿಯವರ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಸಭೆ ಆಯೋಜನೆಗೊಂಡಿದೆ.

ನಿನ್ನೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಪ್ರಧಾನಿಯಾಗಿ ಮೋದಿ ಇನ್ನಿತರ 72 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕರ್ನಾಟಕದ ಐವರೂ ಸೇರಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೊಂದಿಗೆ ಇಂದು ಮೋದಿ ಸಭೆ ನಡೆಸಲಿದ್ದಾರೆ.

ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜೆಡಿಯುಗೆ ಕೃಷಿ ಖಾತೆ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೆ ಕರ್ನಾಟಕದ ಎಚ್‌.ಡಿ ಕುಮಾರಸ್ವಾಮಿ ಅವರೂ ಕೃಷಿ ಖಾತೆ ನೀಡಿದರೆ ನಿರ್ವಹಿಸಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೂ ಮಹತ್ವದ ಖಾತೆಗಳನ್ನು ಕೇಳಿದ್ದಾರೆ.

ಆದರೆ ಈಗ ಪ್ರಮಾಣ ವಚನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಕ್ಯಾಬಿನೆಟ್‌ ದರ್ಜೆಯ 11 ಸ್ಥಾನಗಳನ್ನು ಬಿಜೆಪಿ ತನ್ನ ಜೊತೆಗೇ ಇಟ್ಟುಕೊಂಡಿದೆ. ಟಿಡಿಪಿಗೆ 2, ಜೆಡಿಯುಗೆ 2, ಜೆಡಿಎಸ್‌, ಶಿವಸೇನೆ, ಎಲ್‌ಜೆಪಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ನೀಡಿದೆ. ಈಗ ಯಾವ ಖಾತೆ ಯಾರಿಗೆ ಎಂಬ ನಿರ್ಣಯ ಇನ್ನು ಆಗಬೇಕಿದೆ. ಮಿತ್ರಪಕ್ಷಗಳು ಮಹತ್ವದ ಖಾತೆಗಾಗಿ ಪಟ್ಟು ಹಿಡಿಯುತ್ತವೆಯೇ ಅಥವಾ ಕೊಟ್ಟದ್ದಕ್ಕೆ ತೃಪ್ತವಾಗುತ್ತವೆಯೇ ಎಂದು ನೋಡಬೇಕಿದೆ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

Exit mobile version