ಭಾರತೀಯ ಮೂಲದ 24 ವರ್ಷದ ವಿದ್ಯಾರ್ಥಿಯನ್ನು ಕಾರಿನಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿದೆ. ಕೆನಡಾದ ವ್ಯಾಂಕೋವರ್‌ನಲ್ಲಿ ಈ ಘಟನೆ ನಡೆದಿದೆ. ಚಿರಾಗ್ ಆಂಟಿಲ್ ಮೃತನಾದ ವಿದ್ಯಾರ್ಥಿ(Student Death). ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.
ಚಿರಾಗ್ ಆಂಟಿಲ್ ಶವ ಕಾರಿನಲ್ಲಿ ಪತ್ತೆಯಾಗಿದ್ದು, ಗುಂಡಿಕ್ಕಿ ಕೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವ್ಯಾಂಕೋವರ್‌ನ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 12ರಂದು ರಾತ್ರಿ 11 ಗಂಟೆಯ ಸುಮಾರಿಗೆ ಪೂರ್ವ 55ನೇ ಅವೆನ್ಯೂ ಹಾಗೂ ಮುಖ್ಯ ರಸ್ತೆಯಲ್ಲಿ ಗುಂಡಿನ ಶಬ್ದ ಕೇಳಿ ಬಂದಿದೆ. ಗಾಬರಿಗೊಂಡ ಸ್ಥಳೀಯರು ಪೊಲೀಸರನ್ನು ಕರೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ 24 ವರ್ಷದ ಚಿರಾಗ್ ಆಂಟಿಲ್ ಕಾರಿನೊಳಗೆ ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ ಮತ್ತು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿರಾಗ್ ಆಂಟಿಲ್ ಅವರ ಮೃತದೇಹವನ್ನು ಭಾರತಕ್ಕೆ ಸಾಗಿಸಲು ಅವರ ಕುಟುಂಬ ಕ್ರೌಡ್ ಫಂಡಿಂಗ್ ಪ್ಲಾಟ್ ಫಾರ್ಮ್ (ಗೋ ಫಂಡ್ ಮಿ) ಮೂಲಕ ಹಣವನ್ನು ಸಂಗ್ರಹಿಸುತ್ತಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಚಿರಾಗ್ ಆಂಟಿಲ್ ಸೆಪ್ಟೆಂಬರ್ 2022ರಲ್ಲಿ ವ್ಯಾಂಕೋವರ್ ಗೆ ಬಂದು ಕೆನಡಾ ವೆಸ್ಟ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ ಇತ್ತೀಚೆಗಷ್ಟೇ ಕೆಲಸಕ್ಕೆ ಪರವಾನಗಿಯನ್ನು ಪಡೆದಿದ್ದರು ಎಂಬುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿಯ ಹತ್ಯೆಗೈದ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಮುಖ್ಯಸ್ಥ ವರುಣ್ ಚೌಧರಿ ಅವರು ಎಕ್ಸ್ ಟ್ಯಾಗ್ ಮಾಡುವ ಪೋಸ್ಟ್ ನಲ್ಲಿ ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವಿನಂತಿಸಿದ್ದಾರೆ. ಅಲ್ಲದೇ “ಕೆನಡಾದ ವ್ಯಾಂಕೋವರ್ ನಲ್ಲಿ ಭಾರತೀಯ ವಿದ್ಯಾರ್ಥಿ ಚಿರಾಗ್ ಆಂಟಿಲ್ ಅವರ ಹತ್ಯೆಯ ಬಗ್ಗೆ ತುರ್ತು ಗಮನ ಹರಿಸುವಂತೆ ಮತ್ತು ತನಿಖೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿ ಶ್ರೀಘ್ರದಲ್ಲಿಯೇ ನ್ಯಾಯವನ್ನು ದೊರಕುವಂತೆ ಮಾಡಲು ವಿದೇಶಾಂಗ ಸಚಿವಾಲಯಕ್ಕೆ ಒತ್ತಾಯಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ. ಹಾಗೇ ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ನೀಡಲು ಸಚಿವಾಲಯವನ್ನು ಕೋರಿಕೊಳ್ಳುತ್ತೇವೆ ಎಂಬುದಾಗಿ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಎಚ್‌ಡಿಕೆ ಹೇಳಿಲ್ಲ; ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ
ಸಹೋದರನಿಗೆ ಒದಗಿದ ಈ ದುರ್ಗತಿ ಕಂಡು ಮರುಗಿದ ಚಿರಾಗ್ ಸಹೋದರ ಹರಿಯಾಣ ನಿವಾಸಿ ರೋಮಿತ್ ಆಂಟಿಲ್, “ನನ್ನ ಸಹೋದರ ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಹಾಗೂ ಅವನ ಬಾಂಧವ್ಯ ತುಂಬಾ ಚೆನ್ನಾಗಿತ್ತು. ನಾವು ಪ್ರತಿ ದಿನ ಫೋನಿನಲ್ಲಿ ಮಾತನಾಡುತ್ತಿದ್ದೇವು. ಈ ಘಟನೆ ಸಂಭವಿಸುವ ಮೊದಲು ನಾನು ಅವನೊಂದಿಗೆ ಕೊನೆಯದಾಗಿ ಮಾತನಾಡಿದ್ದೆ. ಅವನು ತುಂಬಾ ಖುಷಿಯಾಗಿದ್ದ. ಅವನು ಎಂದಿಗೂ ಯಾರೊಂದಿಗೂ ಯಾವುದೇ ವಿಚಾರಕ್ಕೂ ಜಗಳವಾಡುತ್ತಿರಲಿಲ್ಲ. ಅವನು ಅತ್ಯಂತ ಸಭ್ಯ ವ್ಯಕ್ತಿ” ಎಂದು ಸಿಟಿ ನ್ಯೂಸ್‌ಗೆ ತಿಳಿಸಿದ್ದಾರೆ.