Site icon Vistara News

Sudha Murthy: ʼಹೆಣ್ಣುಮಕ್ಕಳಿಗೆ ಇದೊಂದು ಕೊಟ್ಟುಬಿಡಿ, ಪ್ಲೀಸ್‌ʼ ಎಂದ ಸುಧಾ ಮೂರ್ತಿ; ರಾಜ್ಯಸಭೆಯಲ್ಲಿ ಭಾಷಣಕ್ಕೆ ಮೋದಿ ಮೆಚ್ಚುಗೆ

sudha murthy pm narendra modi

ಹೊಸದಿಲ್ಲಿ: ರಾಜ್ಯಸಭೆಯಲ್ಲಿ (Rajya Sabha) ನೂತನ ಸಂಸದೆ ಸುಧಾ ಮೂರ್ತಿ (Sudha Murthy) ಅವರು ಮಾಡಿದ ಚೊಚ್ಚಲ ಭಾಷಣ (Speech) ಸಂಸದರ ಮೆಚ್ಚುಗೆಗೆ ಪಾತ್ರವಾಯಿತು. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಶ್ಲಾಘನೆ ವ್ಯಕ್ತಪಡಿಸಿದರು.

ಮಂಗಳವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸುಧಾ ಮೂರ್ತಿ, ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದರು. “ಒಂಬತ್ತರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡಲಾಗುವ ಗರ್ಭಕಂಠದ ಕ್ಯಾನ್ಸರ್‌ (Cervical cancer) ಪ್ರತಿರೋಧ ಲಸಿಕೆ (Cervical Vaccine) ಎಲ್ಲರಿಗೂ ಒದಗಿಸುವ ತೀವ್ರ ಅವಶ್ಯಕತೆ ಇದೆʼ ಎಂದು ಅವರು ಸರಕಾರವನ್ನು ಒತ್ತಾಯಿಸಿದರು. ತಮ್ಮ ತಂದೆಯ ಮಾತನ್ನು ಉಲ್ಲೇಖಿಸಿದ ಅವರು, ʼತಾಯಿ ಸತ್ತಾಗ ಅದನ್ನು ಆಸ್ಪತ್ರೆಯಲ್ಲಿ ಒಂದು ಸಾವು ಎಂದು ಪರಿಗಣಿಸಲಾಗುತ್ತದೆ. ಆದರೆ ಒಂದು ಕುಟುಂಬ ತಾಯಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ. ಹೀಗಾಗಿ ಮಹಿಳೆಯ ಆರೋಗ್ಯ ಅತ್ಯಂತ ಮುಖ್ಯʼ ಎಂದು ಹೇಳಿದರು.

ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರ ಪ್ರಾಯೋಜಿತ ಲಸಿಕೆ ಕಾರ್ಯಕ್ರಮಕ್ಕಾಗಿ ಸುಧಾ ಮೂರ್ತಿ ಒತ್ತಾಯಿಸಿದರು. “ಒಂಬತ್ತರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡಲಾಗುವ ಸರ್ವಿಕಲ್‌ ಗರ್ಭಕಂಠದ ಲಸಿಕೆ ಅಭಿಯಾನವನ್ನು ನಾವು ಉತ್ತೇಜಿಸಬೇಕು. ಅದರಿಂದ ಗರ್ಭಕೊರಳಿನ ಕ್ಯಾನ್ಸರ್ ತಪ್ಪಿಸಬಹುದು. ನಮ್ಮ ಪ್ರಯೋಜನಕ್ಕಾಗಿ ನಾವು ಲಸಿಕೆಯನ್ನು ಉತ್ತೇಜಿಸಬೇಕು. ಕ್ಯಾನ್ಸರ್‌ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ” ಎಂದು ಅವರು ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದರು.

“ಸರ್ಕಾರವು ಕೋವಿಡ್ ಸಮಯದಲ್ಲಿ ಬೃಹತ್‌ ವ್ಯಾಕ್ಸಿನೇಷನ್ ಅಭಿಯಾನವನ್ನು ನಿರ್ವಹಿಸಿದೆ. ಹೀಗೆಯೇ 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಲಸಿಕೆಯನ್ನು ನೀಡುವುದು ಕಷ್ಟಕರವಲ್ಲ. ಇದರ ಗುಣಮಟ್ಟ ತುಂಬಾ ಚೆನ್ನಾಗಿದೆ. ಇವತ್ತು ಅದರ ಬೆಲೆ ಸುಮಾರು ₹1,400 ಇದೆ. ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ₹700-800ಕ್ಕೆ ತರಬಹುದು. ನಮ್ಮಲ್ಲಿ ಇಷ್ಟು ದೊಡ್ಡ ಜನಸಂಖ್ಯೆಯಿರುವುದರಂದ ಭವಿಷ್ಯದಲ್ಲಿ ನಮ್ಮ ಸ್ತ್ರೀಯರಿಗೆ ಇದು ಪ್ರಯೋಜನಕಾರಿಯಾಗಿದೆ. ಗರ್ಭಕಂಠದ ಲಸಿಕೆಯನ್ನು ಪಶ್ಚಿಮದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಳೆದ 20 ವರ್ಷಗಳಿಂದ ಇದನ್ನು ಬಳಸಲಾಗುತ್ತಿದೆ” ಎಂದು ಅವರು ತಮ್ಮ 13 ನಿಮಿಷಗಳ ಭಾಷಣದಲ್ಲಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ಅಧ್ಯಕ್ಷೆ ದ್ರೌಪದಿ ಮುರ್ಮು (President Draupadi Murmu) ಅವರು ಸುಧಾ ಮೂರ್ತಿಯವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

“ಮಹಿಳೆಯರ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಿದ್ದಕ್ಕಾಗಿ ನಾನು ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಪಿಎಂ ಮೋದಿ ಹೇಳಿದರು. ತಾಯಂದಿರ ಕುರಿತು ಮೂರ್ತಿ ಅವರ “ಭಾವನಾತ್ಮಕ” ಹೇಳಿಕೆಯನ್ನು ಉಲ್ಲೇಖಿಸಿ, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯವನ್ನು ಆದ್ಯತೆಯ ವಲಯವಾಗಿ ಕೇಂದ್ರೀಕರಿಸಿದೆ ಎಂದು ಹೇಳಿದರು.

ಕಳೆದ ವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಮಾಡಿದ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, “ನಮ್ಮ ದೇಶದ ಮಹಿಳೆಯರು ನಾವು ನಿರ್ಮಿಸಿದ ಶೌಚಾಲಯಗಳಿಂದ ಪ್ರಯೋಜನ ಪಡೆದಿದ್ದಾರೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಅವರಿಗೆ ಒದಗಿಸಲಾಗಿದೆ. ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ನೀಡಲಾಗುವ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Sudha Murthy : ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ ಸುಧಾ ಮೂರ್ತಿ; ನಾರಾಯಣಮೂರ್ತಿ ಸಾಥ್‌

Exit mobile version