Site icon Vistara News

Sumalatha Ambarish : ಮಾರ್ಚ್‌ 25ರವರೆಗೆ ಸುಮಲತಾ ಸೈಲೆಂಟ್‌, ನಂತರ ಏನಾಗಲಿದೆ?

sumalatha ambareesh

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ (Mandya Lokasabha Constituency) ಸಂಸದೆ ಮತ್ತು ಈಗಲೂ ತನಗೆ ಮಂಡ್ಯದಿಂದಲೇ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಸುಮಲತಾ ಅಂಬರೀಷ್‌ (Sumalatha Ambarish) ಅವರು ಮಾರ್ಚ್‌ 25ರವರೆಗೂ ಸೈಲೆಂಟ್‌ (Sumalatha will be silent upto March 25) ಆಗಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಆವತ್ತಿನವರೆಗೆ ಸೈಲೆಂಟ್‌ ಆಗಿರುವುದರ ಹಿಂದಿನ ರಹಸ್ಯವೇನು? ಮುಂದೆ ಏನು ಮಾಡಲಿದ್ದಾರೆ ಎನ್ನುವುದು ಕುತೂಹಲಕಾರಿ.

ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಕಾರ (Lok Sabha Election 2024), ಹಾಸನ‌, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮಂಡ್ಯ‌ ಜೆಡಿಎಸ್‌ನ ಭದ್ರ ಕೋಟೆಯಾಗಿರುವುದರಿಂದ ಯಾವ ಕಾರಣಕ್ಕೂ ಅದು ಆ‌ ಕ್ಷೇತ್ರ‌ವನ್ನು ಬಿಟ್ಟು ಕೊಡುವ ಸಾಧ್ಯತೆಗಳೂ ಇಲ್ಲ. ಇದನ್ನು ತಿಳಿದಿದ್ದರೂ ಸುಮಲತಾ ಅವರು ಮಂಡ್ಯ ಕ್ಷೇತ್ರಕ್ಕಾಗಿಯೇ ಪಟ್ಟು ಹಿಡಿದು ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಕಳೆದ ಭಾನುವಾರ (ಮಾರ್ಚ್‌ 17ರಂದು) ಕೇಂದ್ರ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿದ್ದ ಸುಮಲತಾ ಅವರು ಅಲ್ಲಿ ಬಿಜೆಪಿ ಹಿರಿಯ ನಾಯಕ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸ್ವತಃ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ನಡ್ಡಾ ಅವರು ತಮ್ಮನ್ನು ಕರೆಸಿಕೊಂಡಿದ್ದಾರೆ ಎಂದು ಸುಮಲತಾ ಅವರು ಹೇಳಿದ್ದರು.

ಈ ನಡುವೆ ಬುಧವಾರ ಸಂಜೆ ದಿಲ್ಲಿಯಿಂದ ಮರಳುವ ವೇಳೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ಇದನ್ನೂ ಓದಿ : Sumalatha Ambarish : ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌ ಆಗಿದ್ದು ಈಗಲ್ಲ, 3 ತಿಂಗಳ ಹಿಂದೆಯೇ ಡಿಸೈಡ್‌ ಆಗಿತ್ತು!

sumalatha ambareesh ವಿಮಾನ ನಿಲ್ದಾಣದಲ್ಲಿ ಸುಮಲತಾ ಹೇಳಿದ್ದೇನು?

  1. ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ಮಾಡಿದ್ದೀನಿ. ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಅಂತ ಹೇಳಿದ್ದಾರೆ. ವಿಜಯೇಂದ್ರ ಅವರು ಸಹ 22 ರ‌ವರೆಗೂ ಪೈನಲ್ ಆಗಲ್ಲ ಅಂದಿದ್ದಾರೆ.
  1. ಪ್ರಧಾನಿ ಹಾಗೂ ಗೃಹ ಸಚಿವರು ಕೂತು ಅಂತಿಮ ನಿರ್ಧಾರ ಮಾಡ್ತಾರೆ. ನಾನು ರಾಜಕೀಯ ಮಾಡಿದ್ರೆ ಮಂಡ್ಯದಿಂದಲೆ ಮಾಡ್ತೀನಿ ಅಂತ ಆಗಲೂ ಹೇಳಿದ್ದೆ. ಈಗಲೂ ಅದನ್ನೇ ಹೇಳ್ತಿದ್ದೇನೆ.
  2. ಬೇರೆಯವರು ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಅಂತ ಹೇಳ್ತಿದ್ದಾರೆ. ನಾನು ಮಂಡ್ಯ ಬಿಟ್ಟರೆ ರಾಜಕೀಯ ಇಲ್ಲ ಅಂತ ತೀರ್ಮಾನ ಮಾಡಿದ್ದೇನೆ.
  3. ಪ್ರಧಾನಿಯವರೇ ಕರೆ ಮಾಡಿ ನನ್ನನ್ನು ಕರೆಸಿ ಮಾತನಾಡಿ ಅಂತ ಹೇಳಿದರು. ಹೀಗಾಗಿ ನನ್ನನ್ನು ಕರೆಸಿದ್ದಾಗಿ ನಡ್ಡಾ ಅವರು ಹೇಳಿದ್ದಾರೆ.
  4. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದೆ. ಪಕ್ಷದಲ್ಲಿ ಇರಬೇಕು ಅಂತ ಹೇಳಿದ್ದಾರೆ. ಪಾಸಿಟಿವ್ ಆಗಿ ರಿಸಲ್ಟ್ ಬರುತ್ತೆ ಅನ್ನೂ ವಿಶ್ವಾಸವಿದೆ.
  5. ನೀವು ನಿಶ್ಚಿಂತೆಯಾಗಿ ಇರಿ, ಇನ್ನೂ ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತ ನಾಯಕಿ ಪಕ್ಷಕ್ಕೆ ಬೇಕು ಎಂದಿದ್ದಾರೆ.
  6. ಕಾರ್ಯಕರ್ತರನ್ನು ಬಿಟ್ಟುಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಮ್ಮ ಬೆಂಬಲಿಗರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನಡ್ಡಾ ಭರವಸೆ ನೀಡಿದ್ದಾರೆ.
  7. ವರಿಷ್ಠರು ಯಾವ ತೀರ್ಮಾನ ಮಾಡ್ತಾರೆ ಕಾದು ನೋಡೋಣ– ಎಂದು ಹೇಳಿದ್ದರು

ಹಾಗಿದ್ದರೆ ಸುಮಲತಾ ಮುಂದಿನ ಗೇಮ್‌ ಪ್ಲ್ಯಾನ್‌ ಏನು?

ದಿಲ್ಲಿಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಮರಳಿರುವ ಸುಮಲತಾ ಅವರು ಮಾರ್ಚ್ 25 ವರೆಗೂ ಸುಮಲತಾ ಸೈಲೆಂಟ್ ಆಗಿ ಉಳಿಯಲಿದ್ದಾರೆ ಎನ್ನಲಾಗಿದೆ. ಯಾಕೆಂದರೆ, ಅವರು ಮಂಡ್ಯದಲ್ಲಿ ಜೆಡಿಎಸ್‌ ಯಾವ ಹೆಜ್ಜೆ ಇಡುತ್ತದೆ ಎಂದು ಕಾದು ಕುಳಿತಿರುವಂತಿದೆ.

ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿರುವ ಎಚ್‌.ಡಿ. ಕುಮಾರಸ್ವಾಮಿ ಬಹುತೇಕ ಮಾ. 24ರ ಸಂಜೆ ಬಿಡುಗಡೆಯಾಗಿ ಮಾರ್ಚ್ 25ರಂದು ಜೆಡಿಎಸ್ ಸ್ಪರ್ಧಿಸುವ ಮೂರು ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮೂರು ಕ್ಷೇತ್ರಗಳ ಪಟ್ಟಿಯಲ್ಲಿ ಮಂಡ್ಯದಲ್ಲಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋದರ ಆಧಾರದ ಮೇಲೆ ಸುಮಲತಾ ಮುಂದಿನ ನಡೆ ನಿರ್ಧಾರವಾಗಲಿದೆ.

ಒಂದು ವೇಳೆ ಅದಕ್ಕಿಂತ ಮೊದಲು ಸುಮಲತಾ ಮತ್ತು ಎಚ್ಡಿಕೆ ಭೇಟಿ ಆಗಿ ಮಾತುಕತೆ ನಡೆಸಿದರೆ ಸುಮಲತಾ ಅವರು ತಮ್ಮ ಪಟ್ಟು ಸಡಿಲಿಸುವ ಸಾಧ್ಯತೆಯೂ ಇದೆ. ಜೆಡಿಎಸ್‌ ಅಥವಾ ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅವರನ್ನೇ ಎಚ್‌.ಡಿ ಕುಮಾರಸ್ವಾಮಿ ಆಯ್ಕೆ ಮಾಡಿದರೆ ಸುಮಲತಾ ಒಪ್ಪಬಹುದು. ಅದನ್ನು ಹೊರತುಪಡಿಸಿ ಬೇರೇನೇ ನಡೆದರೂ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Exit mobile version