Site icon Vistara News

NOTA: ಅತಿ ಹೆಚ್ಚು `ನೋಟಾ’ ಬಿದ್ದರೆ ಹೊಸ ಚುನಾವಣೆ ಮಾಡಬಹುದೇ? ಸುಪ್ರೀಂ ಪ್ರಶ್ನೆ

nota vote

ಹೊಸದಿಲ್ಲಿ: ʼನೋಟಾʼ (NOTA) ಆಯ್ಕೆಗೆ ಹೆಚ್ಚಿನ ಸಂಖ್ಯೆಯ ಮತಗಳು ಬಿದ್ದ ಕ್ಷೇತ್ರದಲ್ಲಿ ಹೊಸ ಚುನಾವಣೆ ನಡೆಸಬಹುದೇ ಎಂಬ ಪ್ರಶ್ನೆಯನ್ನು ಚುನಾವಣಾ ಆಯೋಗದ (Election commission of India) ಮುಂದೆ ಸುಪ್ರೀಂ ಕೋರ್ಟ್‌ (Supreme court) ಇಟ್ಟು ಉತ್ತರ ಬಯಸಿದೆ. ಮತದಾರರಿಗೆ (Voters) “ಮೇಲಿನ ಯಾವುದೂ ಅಲ್ಲ” (ನೋಟಾ) ಆಯ್ಕೆಯನ್ನು ನೀಡಿದ ಹನ್ನೊಂದು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ಚುನಾವಣಾ ಆಯೋಗದಿಂದ (ECI) ಪ್ರತಿಕ್ರಿಯೆ ಕೇಳಿದೆ.

ನೋಟಾ ಬಟನ್ ಇವಿಎಂಗಳಲ್ಲಿ ಅಭ್ಯರ್ಥಿಗಳ ಪಟ್ಟಿಯ ಅತ್ಯಂತ ಕೆಳಭಾಗದಲ್ಲಿರುತ್ತದೆ. ಪ್ರಸ್ತುತ, ಒಂದು ಕ್ಷೇತ್ರದಲ್ಲಿ ನೋಟಾ ಹೆಚ್ಚು ಮತಗಳನ್ನು ಗಳಿಸಿದರೆ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ದೇಶದಾದ್ಯಂತ ಮತದಾರರ ಜಾಗೃತಿ ಮೂಡಿಸಲು ಚುನಾವಣೆಗಳಲ್ಲಿ ನೋಟಾವನ್ನು “ಕಾಲ್ಪನಿಕ ಚುನಾವಣಾ ಅಭ್ಯರ್ಥಿ” ಎಂದು ಪರಿಗಣಿಸಬೇಕೆ ಎಂಬುದನ್ನು ಪರಿಶೀಲಿಸಲು ಸಹ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ನೋಟಾಗೆ ಗರಿಷ್ಠ ಮತಗಳನ್ನು ಪಡೆದ, ಮತದಾರರಿಂದ ತಿರಸ್ಕೃತಗೊಂಡ ಅಭ್ಯರ್ಥಿಗಳನ್ನು ಹೊಸ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಸಬಾರದು ಎಂಬ ಅರ್ಜಿದಾರರ ಮನವಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು.

“ನಾವು ಅದನ್ನು ಹೇಗೆ ಮಾಡಲು ಸಾಧ್ಯ? ಅದು ಶಾಸಕಾಂಗದ ಆಯ್ಕೆ. ನಾವು ಅಂತಹ ಆದೇಶ ನೀಡಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಶಿವ ಖೇರಾ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ನ್ಯಾಯಪೀಠ ಹೇಳಿದೆ. ಖೇರಾ ದೆಹಲಿ ಮೂಲದ ಸ್ಫೂರ್ತಿ ಭಾಷಣಕಾರ ಮತ್ತು ಲೇಖಕ.

2013ರಲ್ಲಿ ನೋಟಾವನ್ನು ಪರಿಚಯಿಸಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾರರ ಆಯ್ಕೆಯನ್ನು ಉತ್ತಮಗೊಳಿಸುವ ಸುಪ್ರೀಂ ಕೋರ್ಟ್‌ನ ಉದ್ದೇಶವನ್ನು ಮುಂದುವರಿಸುವ ಗುರಿಯನ್ನು ಅರ್ಜಿಯು ಹೊಂದಿದೆ ಎಂದು ಶಂಕರನಾರಾಯಣನ್ ಒತ್ತಿ ಹೇಳಿದರು. “ಸೂರತ್‌ನಲ್ಲಿ ಮತ ಚಲಾಯಿಸದೇ ಒಬ್ಬ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಯಿತು. ಏಕೆಂದರೆ ಕಣದಲ್ಲಿ ಬೇರೆ ಅಭ್ಯರ್ಥಿ ಇರಲಿಲ್ಲ. ಮತದಾರರಿಗೆ ಆಯ್ಕೆ ಇರಲಿಲ್ಲ,” ಎಂದು ಅವರು ವಾದಿಸಿದರು.

ಮೇ 7ರಂದು ಮೂರನೆ ಹಂತದ ಮತದಾನ ನಡೆಯಲಿರುವ ಹದಿನೈದು ದಿನಗಳ ಮೊದಲು ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಮುಖೇಶ್ ದಲಾಲ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಖೇರಾ ಅವರ ಅರ್ಜಿಯನ್ನು ಪರಿಶೀಲಿಸಲು ಸಮ್ಮತಿಸಿದ ಪೀಠ, ಇಸಿಐಗೆ ನೋಟಿಸ್ ಜಾರಿ ಮಾಡಿದೆ.

ನೋಟಾ ಮತ ತಟಸ್ಥವಾದುದು. ಯಾವುದೇ ಸಂಖ್ಯಾ ಮೌಲ್ಯವನ್ನು ಹೊಂದಿಲ್ಲ. ನೋಟಾ ಆಯ್ಕೆಯ ಶೂನ್ಯ ಸಂಖ್ಯಾತ್ಮಕ ಮೌಲ್ಯದ ಹೊರತಾಗಿಯೂ, 2013ರ ಸುಪ್ರೀಂ ಕೋರ್ಟ್ ತೀರ್ಪು “ಇದು ರಾಜಕೀಯ ಪಕ್ಷಗಳನ್ನು ಸಮರ್ಥ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಒತ್ತಾಯಿಸುತ್ತದೆ” ಎಂದು ಹೇಳಿದೆ. 2013ರ ತೀರ್ಪು ಹೇಳುವಂತೆ, “ನೋಟಾ ಮತದಾನವು ಚುನಾವಣೆಯಲ್ಲಿ ವ್ಯವಸ್ಥಿತ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ರಾಜಕೀಯ ಪಕ್ಷಗಳು ಶುದ್ಧ ಅಭ್ಯರ್ಥಿಗಳನ್ನು ಹಾಕಲು ಒತ್ತಾಯಿಸುತ್ತದೆ. ಮತದಾನದ ಹಕ್ಕು ಶಾಸನಬದ್ಧ ಹಕ್ಕಾಗಿದ್ದರೆ, ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಸಂವಿಧಾನದ ಅಡಿಯಲ್ಲಿ ಭಾಷಣ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು,” ಎಂದಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ನೋಟಾ 6,50,000ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ಒಟ್ಟು ಮತದ 1.06%. 17ನೇ ಲೋಕಸಭೆಗೆ ಸ್ಪರ್ಧಿಸಿದ 36 ಪಕ್ಷಗಳ ಪೈಕಿ ಹದಿನೈದು ರಾಜಕೀಯ ಪಕ್ಷಗಳು ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿವೆ. ಈ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿವೆ.

2021ರಲ್ಲಿ, ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಇದೇ ರೀತಿಯ ಅರ್ಜಿಯನ್ನು ಒಪ್ಪಿಕೊಂಡಿತ್ತು. “ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸಬಲೀಕರಣಗೊಳಿಸಲು” ಮತ್ತು “ರಾಜಕೀಯ ಪಕ್ಷಗಳು ಹೆಚ್ಚು ಉತ್ತಮ ಆಯ್ಕೆಯನ್ನು ನೀಡಲು ಪ್ರೋತ್ಸಾಹಿಸಲು” ಕೋರಿತು. ಉಪಾಧ್ಯಾಯ ಅವರ ಅರ್ಜಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಇದನ್ನೂ ಓದಿ: Election Commission: ಥೀಮ್‌ ಸಾಂಗ್‌ನಲ್ಲಿ ‘ಜೈ ಭವಾನಿ’ ಪದ ಬಳಕೆ; ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ನೋಟಿಸ್‌

Exit mobile version