Site icon Vistara News

Madrasa: ಉತ್ತರ ಪ್ರದೇಶದಲ್ಲಿ ಮದರಸಾ ಶಿಕ್ಷಣ ರದ್ದುಪಡಿಸುವ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

Supreme Court

ಹೊಸದಿಲ್ಲಿ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004 (UP Board of Madrasa Education Act, 2004) ಅನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ (Allahabad High Court) ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಇಂದು ತಡೆಯಾಜ್ಞೆ ನೀಡಿದೆ. ಇದು ರಾಜ್ಯದಲ್ಲಿ ಸುಮಾರು 16,000 ಮದರಸಾಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಉತ್ತರ ಪ್ರದೇಶದ ಸುಮಾರು 17 ಲಕ್ಷ ಮದರಸಾ ವಿದ್ಯಾರ್ಥಿಗಳು ಇದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಪೀಠವು, ಹೈಕೋರ್ಟ್ ತೀರ್ಪು ಮೂಲಭೂತವಾಗಿ ತಪ್ಪು ಎಂದು ಹೇಳಿದೆ. ಯುಪಿ ಮತ್ತು ಕೇಂದ್ರ ಸರ್ಕಾರಗಳು ಮತ್ತು ಮದರಸಾ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸಿದ್ದಕ್ಕಾಗಿ 2004ರ ಕಾನೂನನ್ನು “ಅಸಾಂವಿಧಾನಿಕ” ಎಂದು ಕಳೆದ ತಿಂಗಳು ಹೈಕೋರ್ಟ್ ಘೋಷಿಸಿತ್ತು ಮತ್ತು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮದ್ರಸಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಮದರಸಾ ಮಂಡಳಿಯ ಗುರಿಗಳು ಮತ್ತು ಉದ್ದೇಶಗಳು ನಿಯಂತ್ರಕ ಸ್ವರೂಪದ್ದಾಗಿದ್ದು, ಮಂಡಳಿಯ ಸ್ಥಾಪನೆಯು ಜಾತ್ಯತೀತತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. “ಹೈಕೋರ್ಟ್, ಕಾಯಿದೆಯ ನಿಬಂಧನೆಗಳನ್ನು ರದ್ದುಪಡಿಸಿ, ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನಿರ್ದೇಶನ ನೀಡಿದೆ. ಇದು 17 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಇತರ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನಿರ್ದೇಶನವನ್ನು ಸಮರ್ಥಿಸಲಾಗುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಪಿಐಎಲ್‌ನ ಉದ್ದೇಶವು ಮದರಸಾಗಳು ಗಣಿತ, ವಿಜ್ಞಾನ, ಇತಿಹಾಸ ಮತ್ತು ಭಾಷೆಗಳಂತಹ ಪ್ರಮುಖ ವಿಷಯಗಳಲ್ಲಿ ಜಾತ್ಯತೀತ ಶಿಕ್ಷಣವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆಗಿದ್ದರೆ, ಮದರಸಾ ಕಾಯಿದೆ 2004ರ ನಿಬಂಧನೆಗಳನ್ನು ರದ್ದುಗೊಳಿಸುವುದು ಅದಕ್ಕೆ ಪರಿಹಾರವಲ್ಲ ಎಂದು ಕೋರ್ಟ್‌ ಹೇಳಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ತೀರ್ಪನ್ನು ಬೆಂಬಲಿಸಿದವು. ಧರ್ಮ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆಯಾಗಬೇಕು ಎಂದು ಕೇಂದ್ರ ಹೇಳಿದೆ. ಮುಖ್ಯ ನ್ಯಾಯಮೂರ್ತಿಗಳು ಜುಲೈ ಎರಡನೇ ವಾರದಲ್ಲಿ ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದರು.

ಮದರಸಾಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಧಾರ್ಮಿಕ ಶಿಕ್ಷಣ ಎಂದರೆ ಧಾರ್ಮಿಕ ನಿಯಮಗಳ ಹೇರಿಕೆ ಎಂದು ಅರ್ಥವಲ್ಲ. ಹೈಕೋರ್ಟ್ ಆದೇಶದಿಂದ 10,000 ಮದರಸಾ ಶಿಕ್ಷಕರು ಮತ್ತು 17 ಲಕ್ಷ ವಿದ್ಯಾರ್ಥಿಗಳು ನೆಲೆ ಕಳೆದುಕೊಳ್ಳುತ್ತಾರೆ. ಮದ್ರಸಾ ಶಿಕ್ಷಣವು ಗುಣಮಟ್ಟವನ್ನು ಹೊಂದಿಲ್ಲ ಎಂದು ಹೇಳುವುದು ತಪ್ಪು ಎಂದು ವಾದಿಸಿದರು.

ಇದನ್ನೂ ಓದಿ: Baba Ramdev: ಸುಪ್ರೀಂ ಕೋರ್ಟ್‌ ತಪರಾಕಿ, ಬಾಬಾ ರಾಮದೇವ್‌ ಬೇಷರತ್‌ ಕ್ಷಮೆಯಾಚನೆ

Exit mobile version